

ನವದೆಹಲಿ: ಕರೊನಾ ಸಂಕಷ್ಟ ಮುಗಿಯಲಿ ಎಂದು ಕಾಯುತ್ತಿದ್ದರೆ ಶೈಕ್ಷಣಿಕ ಚಟುವಟಿಕೆಗಳಿಗೆ ಪುನಾರಂಭ ಸಾಧ್ಯವೇ ಎಂಬ ಪ್ರಶ್ನೆ ಈಗ ಪ್ರತಿ ದೇಶವನ್ನು ಕಾಡುತ್ತಿದೆ. ಈ ಕಾರಣಕ್ಕಾಗಿ ಲಭ್ಯ ಸಂಪನ್ಮೂಲ ಬಳಸಿಕೊಂಡು ವಿದ್ಯಾರ್ಥಿಗಳಿಗೆ ಪಾಠ ಮಾಡಲು ಹಲವು ದೇಶಗಳಲ್ಲಿ ಯತ್ನಗಳು ನಡೆದಿವೆ.
ಅಂತೆಯೇ ಮೆಕ್ಸಿಕೋದಲ್ಲಿ, ನೂತನ ಶೈಕ್ಷಣಿಕ ವರ್ಷಾರಂಭಕ್ಕೆ ಚಾಲನೆ ನೀಡಲಾಗಿದೆ. ಲಕ್ಷಾಂತರ ವಿದ್ಯಾರ್ಥಿಗಳು ಪಾಠಗಳಿಗೆ ಮರಳಿದ್ದಾರೆ. ಆದರೆ, ಶಾಲೆಗಳಿಗಲ್ಲ...!
ಹೌದು...! ಮೆಕ್ಸಿಕೋ ಸರ್ಕಾರ ಸೋಮವಾರ ಹೊಸ ವರ್ಷದ ಶೈಕ್ಷಣಿಕ ಚಟುವಟಿಕೆಗಳನ್ನು ಆರಂಭಿಸಿದೆ. ದಿನದ 24 ಗಂಟೆಯೂ ಶಿಕ್ಷಣ ಕುರಿತ ಕಾರ್ಯಕ್ರಮಗಳನ್ನು ಬಿತ್ತರಿಸಲು ಚಾನೆಲ್ಗಳನ್ನು ಮೀಸಲಿಡುವಂತೆ ದೇಶದ ಬಹುದೊಡ್ಡ ಖಾಸಗಿ ವಾಹಿನಿಗಳಿಗೆ ಸೂಚಿಸಿದೆ. ಜತೆಗೆ ಅಂಥ ಚಾನೆಲ್ಗಳ ಪಟ್ಟಿಯನ್ನು ಸಿದ್ಧಪಡಿಸಿದೆ.
ವಿದ್ಯಾರ್ಥಿಗಳಿಗೆ ಬಹುಹಂತದಲ್ಲಿ ಕಾರ್ಯಕ್ರಮ ವೀಕ್ಷಣೆಗೆ ಅನುಕೂಲವಾಗುವಂತೆ ವೇಳಾಪಟ್ಟಿಯನ್ನು ಶಿಕ್ಷಣ ಇಲಾಖೆ ಅಧಿಕಾರಿಗಳು ಸಿದ್ಧಪಡಿಸಿದ್ದಾರೆ. ಇಂಟರ್ನೆಟ್ಗಿಂತಲೂ ಹೆಚ್ಚು ಪ್ರಭಾವಶಾಲಿ ಹಾಗೂ ಲಭ್ಯತೆಯಿರುವ ಟಿ.ವಿ. ವಾಹಿನಿಗಳ ಮೂಲಕ ತರಗತಿಗಳ ಬೋಧನೆಗೆ ನಿರ್ಧರಿಸಲಾಗಿದೆ ಎಂದು ಶಿಕ್ಷಣ ಇಲಾಖೆ ಕಾರ್ಯದರ್ಶಿ ಈಸ್ಟ್ಬನ್ ಮೊಕ್ಟೆಝುಮಾ ತಿಳಿಸಿದ್ದಾರೆ.