

ರಾಜ್ಯದಲ್ಲಿ ಮರಳಿನ ಕೊರತೆ ದೊಡ್ಡ ಸಮಸ್ಯೆಯಾಗಿ ಕಾಡುತ್ತಿರುವುದು ಗೊತ್ತಿರುವಂಥದ್ದೇ. ಕೆಲವೆಡೆ ಕೃತಕ ಕೊರತೆಯನ್ನು ಸೃಷ್ಟಿಸಲಾಗುತ್ತಿರುವುದು ಹೊಸದೇನಲ್ಲ. ಮರಳಿನ ಕೊರತೆಯಿಂದ ನಿರ್ಮಾಣ ಕಾಮಗಾರಿಗಳು ಮತ್ತು ಸರ್ಕಾರದ ವಿವಿಧ ಯೋಜನೆಗಳ ಮೇಲೆ ವ್ಯತಿರಿಕ್ತ ಪರಿಣಾಮವಾಗಿದೆ. ಜನಸಾಮಾನ್ಯರು ಮನೆನಿರ್ವಣ ಇತ್ಯಾದಿ ಕೆಲಸಗಳನ್ನು ಕೈಗೆ ತೆಗೆದುಕೊಳ್ಳುವುದೇ ಇಂದಿನ ದುಬಾರಿ ಜಮಾನಾದಲ್ಲಿ ದುಸ್ತರವಾಗಿದೆ. ಏನೋ ಧೈರ್ಯ ಮಾಡಿ ಕೆಲಸ ಕೈಗೆತ್ತಿಕೊಂಡರೂ ಮರಳಿನ ಅಲಭ್ಯತೆ, ತೀವ್ರ ಕೊರತೆಯಿಂದ ಕಾಮಗಾರಿಗಳು ವಿಳಂಬವಾಗುತ್ತ, ಖರ್ಚುಗಳು ಹೆಚ್ಚುತ್ತಿವೆ. ಸರ್ಕಾರದ ಗೃಹನಿರ್ವಣ ಯೋಜನೆಗಳಿಗೂ ಹಿನ್ನಡೆಯಾಗಿದೆ.
ವಾಸ್ತವದಲ್ಲಿ ಮರಳು ದೊಡ್ಡ ಮಾಫಿಯಾಗಳ ಜಾಲಕ್ಕೆ ಸಿಲುಕಿ ನಲಗುತ್ತಿರುವುದು ಸುಳ್ಳಲ್ಲ. ಸ್ಥಳೀಯ ರಾಜಕಾರಣಿಗಳು, ಅಧಿಕಾರಿಗಳು, ಪ್ರಭಾವಿಗಳು ಮತ್ತು ವ್ಯಾಪಾರಿಗಳ ನಡುವಿನ ಅಪವಿತ್ರ ಮೈತ್ರಿ ಸಮಸ್ಯೆಯನ್ನು ಕಗ್ಗಂಟಾಗಿಸಿದೆ. ಈ ಜಾಲವನ್ನು ಭೇದಿಸಿ ಸಕಾಲಕ್ಕೆ ಮರಳು ಪಡೆದುಕೊಳ್ಳುವುದೆಂದರೆ ಜನಸಾಮಾನ್ಯರ ಪಾಲಿಗೆ ಯುದ್ಧವೇ ಗೆದ್ದಂತೆ. ಅಷ್ಟು ಮಾತ್ರವಲ್ಲ, ಮರಳು ಮಾಫಿಯಾ ವ್ಯಾಪಕ ಭ್ರಷ್ಟಾಚಾರಕ್ಕೆ ಕಾರಣವಾಗಿರುವುದು ಆತಂಕಕಾರಿ ಸಂಗತಿ. ನಿರ್ಮಾಣ ಕ್ಷೇತ್ರದ ಚಟುವಟಿಕೆಗಳು ಸ್ಥಗಿತವಾದರೆ ಅಥವಾ ಕುಂಟುತ್ತ ಸಾಗಿದರೆ ಅದರಿಂದ ಉದ್ಯೋಗನಷ್ಟ ಸೇರಿ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಈ ಎಲ್ಲ ಸಂಗತಿಗಳನ್ನು ಗಂಭೀರವಾಗಿಯೇ ಪರಿಗಣಿಸಿರುವ ರಾಜ್ಯ ಸರ್ಕಾರ ಹೊಸ ಮರಳು ನೀತಿ ರಚಿಸಲು ಮುಂದಾಗಿದ್ದು, ಈ ನೀತಿ ದೇಶದಲ್ಲೇ ಮಾದರಿಯಾಗಬೇಕು ಎಂಬ ಆಶಯವನ್ನು ಹೊಂದಿದೆ. ಸ್ಪರ್ಧಾತ್ಮಕ ದರದಲ್ಲಿ ಮರಳು ಒದಗಿಸುವಂತೆ ಮಾಡುವುದು, ಆನ್ಲೈನ್ ಬುಕಿಂಗ್ ಮುಖೇನ ಮರಳು ಪೂರೈಸುವುದು ಸೇರಿ ಹಲವು ಪರಿಣಾಮಕಾರಿ ಕ್ರಮಗಳ ಬಗ್ಗೆ ಮಂಗಳವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಹೊಸ ಮರಳು ನೀತಿ ಕುರಿತಾದ ಸಭೆಯಲ್ಲಿ ವಿವರವಾಗಿ ರ್ಚಚಿಸಲಾಗಿದೆ. ರಾಜ್ಯದಲ್ಲಿ ಅಂದಾಜು 45 ದಶಲಕ್ಷ ಮೆಟ್ರಿಕ್ ಟನ್ ಪ್ರಮಾಣದ ಮರಳಿನ ಬೇಡಿಕೆ ಇದೆ. ಪ್ರಸಕ್ತ, 8.5 ದಶಲಕ್ಷ ಟನ್ ಮರಳಿನ ಕೊರತೆಯಿದೆ. 2020ರ ಹೊಸ ಮರಳು ನೀತಿ ಅನುಸಾರ, ಮೊದಲನೇ ಮತ್ತು ಎರಡನೇ ಶ್ರೇಣಿಯ ಹಳ್ಳ ತೊರೆಗಳಲ್ಲಿ ಲಭ್ಯ ಮರಳು ನಿಕ್ಷೇಪಗಳನ್ನು ಗುರುತಿಸಿ, ಸೂಕ್ತ ಅನುಮೋದನೆ ಪಡೆಯಬೇಕು. ಬಳಿಕ ಸ್ಥಳೀಯ ಕಡಿಮೆ ವರಮಾನದ ವಸತಿ ಯೋಜನೆ, ಶೌಚಗೃಹ ನಿರ್ಮಾಣ ಹಾಗೂ ಇತರ ಸ್ಥಳೀಯ ನಿರ್ಮಾಣ ಕಾಮಗಾರಿಗಳಿಗೆ ಮಾತ್ರ ಖನಿಜ ರವಾನೆ ಪರವಾನಗಿಯೊಂದಿಗೆ ಮರಳನ್ನು ಗ್ರಾಮ ಪಂಚಾಯತ್ ಮೂಲಕ ಸರ್ಕಾರ ನಿಗದಿಪಡಿಸಿದ ದರದಲ್ಲಿ ವಿಲೇವಾರಿ ಮಾಡಲಾಗುತ್ತದೆ. ಇದು ಗ್ರಾಮೀಣ ಭಾಗದ ಮರಳು ಪೂರೈಕೆ ವ್ಯವಸ್ಥೆಯಲ್ಲಿನ ಸಮಸ್ಯೆ ಹೋಗಲಾಡಿಸಲು ಮತ್ತು ಪಾರದರ್ಶಕತೆ ತರಲು ಪೂರಕವಾಗಲಿದೆ. ಮರಳು ಸಾಗಾಣಿಕೆ ವಾಹನಗಳ ಚಲನವಲನಗಳ ಮೇಲೆ ನಿಗಾ ಇಡಲು ವೆಹಿಕಲ್ ಟ್ರಾ್ಯಕಿಂಗ್ ಸಿಸ್ಟಮ್ ಜಾರಿಗೆ ತರುತ್ತಿರುವುದು ಉತ್ತಮ ಬೆಳವಣಿಗೆ. ಈ ಹೊಸ ನೀತಿ ಆದಷ್ಟು ಶೀಘ್ರದಲ್ಲಿ ಜಾರಿಗೆ ಬರಬೇಕು. ಪ್ರಭಾವಿಗಳ ಅಪವಿತ್ರ ಕೂಟ ಶಾಶ್ವತವಾಗಿ ಕೊನೆಗೊಳ್ಳಬೇಕು. ಜನಸಾಮಾನ್ಯರಿಗೆ ಆಗುತ್ತಿರುವ ತೊಂದರೆ ಹಾಗೂ ಸರ್ಕಾರದ ಬೊಕ್ಕಸಕ್ಕೆ ಆಗುತ್ತಿರುವ ನಷ್ಟ ಎರಡೂ ತಪ್ಪಬೇಕು. ಈ ಆಶಯವನ್ನು ಸರ್ಕಾರ ಅರ್ಥ ಮಾಡಿಕೊಂಡು ಮರಳುನೀತಿಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲಿ.