

ತೆರಿಗೆದಾರರು ಜ.1ರಿಂದ ಕಟ್ಟುನಿಟ್ಟಾದ ಜಿಎಸ್ಟಿ ನಿಯಮ ಪಾಲಿಸಬೇಕು. ಮಲ್ಟಿ ಫ್ಯಾಕ್ಟರ್ ಅಥೆಂಟಿಕೇಷನ್ (ಎಂಎಫ್ಎ) ಜಿಎಸ್ಟಿ ಪೋರ್ಟಲ್ ಪ್ರವೇಶಿಸುವ 20 ಕೋಟಿ ರೂ.ಗಿಂತ ಹೆಚ್ಚು ವಾರ್ಷಿಕ ವಹಿವಾಟು ನಡೆಸುವ ಗ್ರಾಹಕರಿಗೆ ಈ ನಿಯಮ ಅನ್ವಯಿಸಲಿದೆ. ಹಾಗೆಯೇ 180 ದಿನಗಳಿಗಿಂತ ಹಳೆಯದಾದ ಮೂಲ ದಾಖಲೆಗಳಿಗೆ ಮಾತ್ರ ಇನ್ಮುಂದೆ ಇ-ವೇ ಬಿಲ್ ರಚಿಸಲು ಅವಕಾಶ ಸಿಗಲಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಬ್ಯಾರೆಲ್ಗೆ 73.58 ಡಾಲರ್ ತಲುಪಿದೆ. ಹೀಗಾಗಿ ಜ.1ರಿಂದಲೇ ಎಲ್ಪಿಜಿ ಸಿಲಿಂಡರ್ ದರ ಏರಿಕೆ ಆಗುವುದು ಬಹುತೇಕ ನಿಶ್ಚಿತ ಆಗಿದೆ. ಇನ್ನು ಎಲ್ಪಿಜಿ ಸಿಲಿಂಡರ್ ದರವನ್ನು ಯುಪಿಐನಲ್ಲೇ ಪಾವತಿಸುವ ಅವಕಾಶವೂ ಗ್ರಾಹಕರಿಗೆ ಲಭಿಸಲಿದೆ.
ಪಡಿತರ ವಿತರಣಾ ವ್ಯವಸ್ಥೆಯಲ್ಲೂ ಮಹತ್ವದ ಬದಲಾವಣೆ ಆಗಲಿದೆ. ಹಿಂದುಳಿದ ಕುಟುಂಬಗಳಿಗೆ ಆಹಾರ ಭದ್ರತೆ ಖಚಿತಪಡಿಸಿಕೊಳ್ಳಲು ಆದ್ಯತೆ ನೀಡಲಾಗುತ್ತಿದೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಅಡಿ ಜ.1ರಿಂದ ಪಡಿತರದ ಜತೆಗೆ 1 ಸಾವಿರ ರೂ. ಹೆಚ್ಚುವರಿ ಆರ್ಥಿಕ ನೆರವು ನೀಡುವ ನಿಯಮ ಜಾರಿಯಾಗಲಿದೆ. ಸರಿಸುಮಾರು 80 ಕೋಟಿ ಜನರು ಈ ಪ್ರಯೋಜನ ಪಡೆದುಕೊಳ್ಳಲಿದ್ದಾರೆ. ಇದೇ ವೇಳೆ ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸದವರ ಕಾರ್ಡ್ಗಳು ರದ್ದಾಗಲಿವೆ. ಇದಿಷ್ಟೇ ಅಲ್ಲ ನಗರ ಪ್ರದೇಶಗಳಲ್ಲಿ ವಾರ್ಷಿಕ ಆದಾಯ ಮಿತಿ 3 ಲಕ್ಷ ರೂ. ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ವಾರ್ಷಿಕ ಆದಾಯ ಮಿತಿ 2 ಲಕ್ಷ ರೂ.ಗೆ ನಿಗದಿಯಾಗಲಿದೆ.
ಮೊಬೈಲ್ ಡೇಟಾ ಶುಲ್ಕ ಹೆಚ್ಚಳವಾಗುವ ಸಾಧ್ಯತೆ ಇದೆ. ಜತೆಗೆ ಹಳೆಯ ಆಂಡ್ರಾಯ್ಡ್ ಸ್ಮಾರ್ಟ್ಫೋನ್ಗಳಲ್ಲಿ ವಾಟ್ಸಾಪ್ ಕಾರ್ಯ ನಿರ್ವಹಣೆ ಸ್ಥಗಿತವಾಗಲಿದೆ.
ಜ.1ರಿಂದ ಪಿಂಚಣಿದಾರರ ಭವಿಷ್ಯ ನಿಧಿ ಸಂಸ್ಥೆ ಹೊಸ ನಿಯಮ ಜಾರಿಗೊಳಿಸಲಿದೆ. ಇದರನ್ವಯ ಪಿಂಚಣಿದಾರರು ದೇಶದ ಯಾವುದೇ ಮೂಲೆಯಿಂದಾದರೂ ಪಿಎಫ್ ವಿತ್ ಡ್ರಾ ಮಾಡಿಕೊಳ್ಳಬಹುದು. ಯಾವುದೇ ಬ್ಯಾಂಕ್ನಿಂದಾದರೂ ಈ ಸೌಲಭ್ಯ ಪಡೆದುಕೊಳ್ಳುವ ಅವಕಾಶ ನೌಕರರಿಗೆ ಸಿಗಲಿದೆ.
ಬ್ಯಾಂಕಿಂಗ್, ಹಣಕಾಸು ಕಂಪನಿಗಳ ಸ್ಥಿರ ಠೇವಣಿಗೆ ಸಂಬಂಧಿಸಿದ ನಿಯಮಗಳು ಜ.1ರಿಂದ ಬದಲಾವಣೆ ಆಗಲಿದೆ. ಠೇವಣಿ ಸುರಕ್ಷತೆ ಹೆಚ್ಚಿಸಲು ಆದ್ಯತೆ ನೀಡುವ ಜತೆಗೆ ಚಟುವಟಿಕೆ ಇಲ್ಲದ ಬ್ಯಾಂಕ್ ಖಾತೆಗಳು ಜ.1ರಿಂದಲೇ ಬಂದ್ ಆಗಲಿವೆ.
ಭಾರತೀಯ ರೈಲುಗಳ ಸಂಚಾರ ಮಾರ್ಗ ಬದಲಾವಣೆ ಪಟ್ಟಿಯನ್ನು ಜ.1ರಿಂದಲೇ ಜಾರಿಗೊಳಿಸಲಿದೆ. ಈವರೆಗೆ ಜು.1ರಿಂದ ಹೊಸ ವೇಳಾಪಟ್ಟಿ ಪ್ರಕಟವಾಗುತ್ತಿತ್ತು. ಹೀಗಾಗಿ ರೈಲ್ವೆ ಪ್ರಯಾಣಿಕರು ಇದನ್ನು ಗಮನಿಸುವುದು ಒಳಿತು.
ಇಂಟರ್ನೆಟ್ ಬಳಸದಿದ್ದರೂ ಹಣ ಪಾವತಿ ಮಾಡಲು ಆರ್ಬಿಐ ತಂದಿರುವ ಯುಪಿಐ 123ಪೇ ಪಾವತಿದಾರರಿಗೆ ವಹಿವಾಟು ಮಿತಿ ಈಗಿರುವ 5 ಸಾವಿರ ರೂ.ನಿಂದ 10 ಸಾವಿರ ರೂ.ಗೆ ಹೆಚ್ಚಳವಾಗಲಿದೆ.
ಸರಕು ಸಾಗಣೆ ಶುಲ್ಕ ಹೆಚ್ಚಳ, ವೇತನ ಹೊರೆ, ವಿದೇಶಿ ವಿನಿಮಯದ ಕಾರಣ ಮುಂದಿಟ್ಟು ಪ್ರಮುಖ ಕಾರು ಉತ್ಪಾದನಾ ಕಂಪನಿಗಳು ಕಾರಿನ ಬೆಲೆಯನ್ನು ಶೇ. 2-4ರಷ್ಟು ಹೆಚ್ಚಿಸಲು ನಿರ್ಧರಿಸಿವೆ. ಮಾರುತಿ, ಹ್ಯುಂಡೈ, ಮಹಿಂದ್ರಾ, ಎಂಜಿ ಮೋಟರ್, ಟಾಟಾ ಮೋಟರ್ಸ್, ಕಿಯಾ ಮುಂತಾದ ಕಂಪನಿಗಳ ಕಾರುಗಳು ದುಬಾರಿಯಾಗಲಿವೆ.