ನಿರಾಶೆಯ ಕಾಮುಗಿಲ ಬೆಳ್ಳಿಯ ಅಂಚು ಶುಭ ಶುಕ್ರವಾರ

edit 2
Published on

ನಡುಹಗಲ ಸಿರಿಹೊತ್ತು, ಭಾಸ್ಕರನ ಸುಳಿವಿಲ್ಲ

ನೋಡೊಂದೆ ಬರಮೋಡ ಬಾನಗಲ ಚಾಚಿ ನೋಹನ

ಕಾಲದಾ ಪ್ರಲಯ ಮೇಘವನೆ ಮುಚ್ಚಿಹುದು...

ಕನ್ನಡದ ಪ್ರಥಮ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈಗಳು ಯೇಸುವಿನ ಶಿಲುಬೆಯ ಬಲಿದಾನ ಕುರಿತ ‘ಗೊಲ್ಗೊಥಾ’ ಕಾವ್ಯದಲ್ಲಿ ಹೇಳಿದ ಈ ಸಾಲುಗಳು ನಾವು

ಜೀವಿಸುತ್ತಿರುವ ಈ ದಿನಗಳಿಗೆ ಬಹು ಪ್ರಸ್ತುತ. ಕೇಳರಿಯದ ಮಹಾಮಾರಿ ಕರೊನಾದಿಂದ ಮಾನವ ಜೀವನ ನಲುಗಿಹೋಗಿದೆ; ದಿಗ್ಬಂಧನದಿಂದ ಊರೆಲ್ಲ ಬೆಂಗಾಡಾಗಿದೆ; ಮಹಾಮಾರಿಯ ಭೀತಿಯಿಂದ ಮನೆಯೊಳಗೆ ಕುಳಿತವರಲ್ಲಿ ಸುರಕ್ಷತೆಯ ಭಾವ ಮಾಯವಾಗಿ ಅನಿಶ್ಚಿತತೆ, ಅಪನಂಬಿಕೆಗಳು ಮನಗಳನ್ನು ತಲ್ಲಣಗೊಳಿಸುತ್ತಿವೆ.

ಇಂಥ ವಿಷಮ ಪರಿಸ್ಥಿತಿಯಲ್ಲಿ ಇಂದು ಜಗತ್ತಿಗೆಲ್ಲ ಶುಭ ಶುಕ್ರವಾರ. ಎರಡು ಸಾವಿರ ವರ್ಷಗಳ ಹಿಂದೆ, ಯೇಸುವಿನ ಶಿಲುಬೆಯ ಬಲಿದಾನದಿಂದ ನಿರಾಶೆಯ ಕಾರ್ವೇಡ ಸರಿದು, ಮೃತ್ಯುವನ್ನು ಜಯಿಸಿದ ಭರವಸೆಯ ಬೆಳ್ಳಿಗೆರೆ ಮೂಡಿದಂತೆ ಇಂದೂ ಬಯಸುವ ಈ ಪವಿತ್ರ ದಿನ. ನಮ್ಮ ಇಂದಿನ ಪರಿಸ್ಥಿತಿ ನಜರೇತಿನ ಯೇಸುವಿನ ಅಂದಿನ ಪರಿಸ್ಥಿತಿಯ ಪ್ರತಿಫಲನ. ಮೂವತ್ತಮೂರು ವರ್ಷಗಳ ಜೀವನ-ಅದರಲ್ಲಿ ಮೂವತ್ತು ದೀರ್ಘ ವರ್ಷಗಳು ಕುಟುಂಬದ ಸುರಕ್ಷತೆಯಲ್ಲಿ ಕಳೆದವು. ಮುಂದಿನ ಮೂರು ವರ್ಷಗಳಲ್ಲಿ ಪ್ರಾರ್ಥನೆ, ಬೋಧನೆ, ಪವಾಡಗಳು, ಗುಣಪಡಿಸುವಿಕೆ, ಇನ್ನಿತರ ಲೋಕಕಲ್ಯಾಣ ಕಾರ್ಯಗಳಲ್ಲಿ ತೊಡಗಿಸುವಿಕೆ. ರೋಗಿಗಳನ್ನು ಗುಣಪಡಿಸಿದ್ದು, ಸತ್ತವರನ್ನು ಜೀವಂತಗೊಳಿಸಿದ್ದು, ಪವಾಡದಿಂದ ಹಸಿದವರಿಗೆ ಆಹಾರ ನೀಡಿದ್ದು, ನೀರನ್ನು ದ್ರಾಕ್ಷಾರಸವನ್ನಾಗಿ ಪರಿವರ್ತಿಸಿದ್ದು-ಇಂಥ ಹತ್ತು ಹಲವಾರು ಕಾರ್ಯಗಳಿಗಾಗಿ ಜನರು ಅವರಿಗೆ ಜಯಘೊಷ ಹಾಕಿ ಅವರನ್ನು ಬಲವಂತದಿಂದ ಕರೆದೊಯ್ದು ರಾಜರನ್ನಾಗಿಸುವ ಪ್ರಯತ್ನಗಳೂ ನಡೆದಿದ್ದವು. ಅವರ ಮರಣದ ನಾಲ್ಕು ದಿನಗಳ ಹಿಂದೆ, ಜನಸಮೂಹ ಅವರನ್ನು ಜಯಘೊಷದೊಂದಿಗೆ ಮೆರವಣಿಗೆಯಲ್ಲಿ ಕರೆದೊಯ್ದಿತ್ತು. ಜನಪ್ರಿಯತೆಯ ಉತ್ತುಂಗದಲ್ಲಿ ಇರುವಂತೆ ಕಂಡುಬಂದ ಯೇಸುವನ್ನು ಶುಕ್ರವಾರದಂದು ಅದೇ ಜನಸಮೂಹ ‘ಅವನನ್ನು ಶಿಲುಬೆಗೇರಿಸಿ’ ಎಂದು ಬೊಬ್ಬಿಟ್ಟಿತು. ಇದನ್ನು ಹೇಗೆ ಬಣ್ಣಿಸಲು ಸಾಧ್ಯ? ವಿಶ್ವಾಸದ್ರೋಹವೇ? ಸ್ವಾಮಿ ದ್ರೋಹವೇ? ಅಥವಾ ಮಾನವನ ಸಹಜ ನಡವಳಿಕೆಯೇ? ಯೇಸುಸ್ವಾಮಿಯ ಜೀವನದ ಅಂತಿಮ ಕ್ಷಣಗಳು ಇದನ್ನೇ ತೋರಿಸುತ್ತವೆ.

ಶಿಷ್ಯರ ಪಲಾಯನ: ತನ್ನೊಡನಿರಲು, ತನ್ನೆಲ್ಲ ಬೋಧನೆ ಹಾಗೂ ಕೆಲಸಕಾರ್ಯಗಳಲ್ಲಿ ಸಹಭಾಗಿಯಾಗಲು ಹಾಗೂ ತನ್ನ ಬಳಿಕ ಸೇವಾಕಾರ್ಯವನ್ನು ಮುಂದುವರಿಸಿಕೊಂಡು ಹೋಗಲು ಬಹು ಆಸ್ಥೆಯಿಂದ ತನ್ನ ಅಸಂಖ್ಯಾತ ಶಿಷ್ಯ ಸಮೂಹದಿಂದ ಹನ್ನೆರಡು ಶಿಷ್ಯರನ್ನು (ಪ್ರೇಷಿತರನ್ನು) ಯೇಸುಸ್ವಾಮಿ ಆರಿಸಿಕೊಂಡಿದ್ದರು. ಜನರಿಗೆ ದೇವರ ರಾಜ್ಯವನ್ನು ಬೋಧಿಸಲು, ರೋಗಿಗಳನ್ನು ಗುಣಪಡಿಸಲು, ದೆವ್ವಗಳನ್ನು ಓಡಿಸಲು ಮತ್ತಿನ್ನಿತರ ಲೋಕಕಲ್ಯಾಣ ಕಾರ್ಯಗಳನ್ನು ಮಾಡಲು ಅವರಿಗೆ ತಮ್ಮ ಶಕ್ತಿಯನ್ನು ಧಾರೆಯೆರೆದಿದ್ದರು. ಅವರಲ್ಲಿ ಭರವಸೆಯಿಟ್ಟು ಬೆಟ್ಟದ ಮೇಲಿನ ರೂಪಾಂತರದ ಪವಾಡದಲ್ಲಿ ತಮ್ಮ ಅಲೌಕಿಕ ರೂಪವನ್ನು ಅವರಿಗೆ ಪ್ರಕಟಪಡಿಸಿದ್ದರು.

ಆದರೆ, ಸುಖ, ಶಾಂತಿ ಕಾಲದಲ್ಲಿ ಅವರ ಸಂಗಡವಿದ್ದು, ಅವರನ್ನು ತಮ್ಮ ಸ್ವಾಮಿಯೆಂದು ಒಪ್ಪಿಕೊಳ್ಳುವುದರಲ್ಲಿ ಹೆಮ್ಮೆಪಟ್ಟುಕೊಂಡಿದ್ದ ಹನ್ನೆರಡು ಜನ ಶಿಷ್ಯರು ಅವರ ಕಷ್ಟಕಾಲದಲ್ಲಿ ಅವರೊಬ್ಬರನ್ನೇ ಬಿಟ್ಟು ಪಲಾಯನಗೈದದ್ದು ವಿಶ್ವಾಸಘಾತಕತನವಲ್ಲದೇ ಇನ್ನೇನು? ಗೇತ್ಸೆಮನೆ ತೋಪಿನಲ್ಲಿ ಯೆಹೂದ್ಯ ಮುಖಂಡರು ಯೇಸುಸ್ವಾಮಿಯನ್ನು ಬಂಧಿಸಲು ಬಂದಾಗ ಅವರೊಡನಿದ್ದ ಶಿಷ್ಯರು ದಿಕ್ಕುಪಾಲಾಗಿ ಓಡಿಹೋದರು. ಒಬ್ಬನಂತೂ ತನ್ನ ವಸ್ತ್ರವನ್ನು ಸೆಳೆದ ಸೈನಿಕನ ಕೈಯಲ್ಲಿ ಅದನ್ನು ಬಿಟ್ಟು ವಿವಸ್ತ್ರನಾಗಿ ಓಡಿಹೋದ. ಜನಸಮೂಹದಿಂದ ಜಯಘೊಷ ಆಲಿಸಿದ್ದ ಯೇಸು ಕಷ್ಟಕಾಲದಲ್ಲಿ ಏಕಾಂಗಿಯಾದರು. ತಾನು ಪ್ರೀತಿಸಿದವರು ಕಷ್ಟಕಾಲದಲ್ಲಿ ತನ್ನನ್ನು ಬಿಟ್ಟು ಪಲಾಯನಗೈಯುವ ಘೊರ ಮಾನವ ಪರಿಸ್ಥಿತಿಯನ್ನು ಯೇಸುಸ್ವಾಮಿ ಅನುಭವಿಸಿದರು.

ಸ್ವಾಮಿದ್ರೋಹ: ತಾನು ಆರಿಸಿದ ಎಲ್ಲ ಹನ್ನೆರಡು ಜನ ಶಿಷ್ಯರನ್ನೂ ಯೇಸುಸ್ವಾಮಿ ಪ್ರೀತಿಸಿದರು. ಇಸ್ಕರಿಯೋತ ಯೂದನನ್ನು ಶಿಷ್ಯನನ್ನಾಗಿ ಆರಿಸಿಕೊಂಡು ಆತನಿಗೆ ತಮ್ಮ ತಂಡದ ಹಣಕಾಸಿನ ಮೇಲ್ವಿಚಾರಣೆಯ ಜವಾಬ್ದಾರಿಯನ್ನು ನೀಡಿ, ಪ್ರೀತಿ-ಆದರವನ್ನೂ ತೋರಿದರು. ಆದರೆ, ಹಣಕಾಸಿನ ಸಂಗದಲ್ಲಿದ್ದ ಇಸ್ಕರಿಯೋತ ಯೂದ ಗುರುವಿನ ಬದಲಾಗಿ ಹಣವನ್ನು ಹೆಚ್ಚಾಗಿ ಪ್ರೀತಿಸಿದ್ದನೇನೋ? ಮೂವತ್ತು ಬೆಳ್ಳಿಯ ನಾಣ್ಯಗಳಿಗಾಗಿ ಗುರುವನ್ನೇ ವೈರಿಗಳ ವಶಕ್ಕೆ ಒಪ್ಪಿಸುವ ಪರಾಧೀನತೆಯ ಕುಕೃತ್ಯಕ್ಕೆ ತನ್ನನ್ನೇ ಬಲಿಯಾಗಿಸಿದ.

‘ನನ್ನಾಪ್ತ ಮಿತ್ರನು, ನನ್ನ ನಂಬಿಕೆಗೆ ಪಾತ್ರನು

ನನ್ನೊಡನೆ ಉಂಡವನು ನನಗೆರಡು ಬಗೆದಿಹನು’

ಎಂಬ ಕೀರ್ತನಕಾರನ ಮಾತುಗಳು ಯೇಸುಸ್ವಾಮಿ ಕುರಿತೇ ಆಡಿದ್ದು. ವೈರಿಗಳು, ಅಪರಿಚಿತರು ಅಥವಾ ಸಂಬಂಧವಿಲ್ಲದವರು ವಿಶ್ವಾಸದ್ರೋಹ, ಘಾತುಕತನ ತೋರಿಸಿದರೆ ಸಹಿಸಬಹುದೇನೋ? ಆದರೆ ಸದಾಕಾಲ ಜೊತೆಗಿದ್ದು, ಒಂದೇ ತಟ್ಟೆಯಲ್ಲಿ ಉಂಡವನು ಮಾಡುವ ದ್ರೋಹ ಆತ್ಮಕ್ಕೇ ಮಾಡಿದ ಘಾಸಿ. ಏಕಾಂಗಿಯಾಗಿದ್ದ ಯೇಸುಸ್ವಾಮಿ ತನ್ನ ಸಂಗಾತಿ ಶಿಷ್ಯನ ವಿಶ್ವಾಸಘಾತಕತನದಿಂದ ನಲುಗಿಹೋದರು.

ಸಿಮೋನ ಪೇತ್ರನ ನಿರಾಕರಣೆ: ‘ನೀನು ಪೇತ್ರ (ಬಂಡೆಕಲ್ಲಿನಂತೆ), ನಿನ್ನ ಮೇಲೆ ನಾನು ನನ್ನ ಧರ್ಮಸಭೆಯನ್ನು ಕಟ್ಟುವೆನು’ ಎಂದು ಪೇತ್ರನ ಕುರಿತಾಗಿ ಯೇಸುಸ್ವಾಮಿ ಬಹಿರಂಗವಾಗಿ ಘೊಷಿಸಿದ್ದರು. ಶಿಷ್ಯರ ತಂಡದ ನಾಯಕನಾಗಿಯೂ, ತಮ್ಮ ಬಲಗೈಯಂತೆಯೂ ಪೇತ್ರನನ್ನು ಬಲಿಷ್ಠವಾಗಿ ಬೆಳೆಸಿದ್ದರು. ಪೇತ್ರನು ಕೂಡ ಅನೇಕ ಸಲ ಅಂತಹ ನಾಯಕತ್ವದ ಲಕ್ಷಣಗಳನ್ನು ತೋರ್ಪಡಿಸಿದ್ದ. ‘ನಾನು ಯಾರೆಂದು ನೀವೆಣಿಸುತ್ತೀರಿ?’ ಎಂಬ ಪ್ರಶ್ನೆಗೆ ಉತ್ತರ ನೀಡಲು ಇತರ ಶಿಷ್ಯರು ತಡಬಡಾಯಿಸಿದಾಗ, ಪೇತ್ರನು, ‘ನೀನು ಜೀವಂತ ದೇವರಪುತ್ರ’ ಎಂದು ಎದೆಯುಬ್ಬಿಸಿ ಹೇಳಿದ್ದ. ಅಂತಿಮ ಭೋಜನದ ವೇಳೆಯಲ್ಲಿ ಯೇಸು, ‘ನೀವೆಲ್ಲರೂ ನನ್ನನ್ನು ಬಿಟ್ಟು ಪಲಾಯನಗೈಯ್ಯುವಿರಿ’ ಎಂದು ಭವಿಷ್ಯವಾಣಿ ಹೇಳಿದಾಗ, ಅದನ್ನು ಒಪ್ಪಿಕೊಳ್ಳಲು ಸಿದ್ಧನಿಲ್ಲದ ಪೇತ್ರ, ‘ಎಲ್ಲರೂ ತಮ್ಮಲ್ಲಿ ವಿಶ್ವಾಸ ಕಳೆದುಕೊಂಡು ಹಿಮ್ಮೆಟ್ಟಿದರೂ ನಾನು ಮಾತ್ರ ಎಂದಿಗೂ ಹಾಗೆ ಮಾಡುವುದಿಲ್ಲ; ನಾನು ತಮ್ಮೊಡನೆ ಸಾಯಬೇಕಾಗಿ ಬಂದರೂ ತಮ್ಮನ್ನು ಮಾತ್ರ ನಿರಾಕರಿಸೆನು’ ಎಂದು ಘೊಷಿಸಿದ.

ಆದರೆ ಸೈನಿಕರು ನಡುರಾತ್ರಿಯಲ್ಲಿ ಯೇಸುಸ್ವಾಮಿಯನ್ನು ಬಂಧಿಸಿದಾಗ ಇತರ ಶಿಷ್ಯರೊಡನೆ ಪೇತ್ರನೂ ಪಲಾಯನಗೈದ. ಯೇಸುವನ್ನು ಹೆರೋದನ ಆಸ್ಥಾನದಲ್ಲಿ ವಿಚಾರಣೆಗೆ ಒಳಪಡಿಸಿದಾಗ ದೂರದಲ್ಲಿ ಕದ್ದುಮುಚ್ಚಿ ಕುಳಿತು ಆ ದೃಶ್ಯವನ್ನು ನೋಡುತ್ತಿದ್ದ ಪೇತ್ರನನ್ನು ಹೆರೋದನ ಆಸ್ಥಾನದ ಪರಿಚಾರಕರು ಮೂರು ಸಲ ‘ನೀನು ಯೇಸುವಿನ ಜೊತೆಗಿದ್ದೆಯಲ್ಲವೇ?’ ಎಂದು ಪ್ರಶ್ನಿಸಿದಾಗ ಪೇತ್ರನು ನಿರಾಕರಿಸಿ ‘ಆತ ಯಾರೆಂದೇ ನಾನು ಅರಿಯೆ’ ಆಣೆಯಿಟ್ಟು ಎಂದನು. ತನ್ನ ಸ್ವಾಮಿಗಾಗಿ ಸಾಯಲೂ ಸಿದ್ಧನೆಂದು ಕೆಲವೇ ಗಂಟೆಗಳ ಹಿಂದೆ ಘಂಟಾಘೊಷವಾಗಿ ಹೇಳಿದ್ದ ಪೇತ್ರನ ಸೊಲ್ಲಡಗಿತ್ತು ಜೀವಭಯದಿಂದ. ತನ್ನ ಅತ್ಯಂತ ವಿಶ್ವಾಸಪಾತ್ರ ಶಿಷ್ಯನಿಂದ ಮೂರು ಸಲ ನಿರಾಕರಣೆಯ ಅವಮಾನವನ್ನು ಯೇಸುಸ್ವಾಮಿ ಅನುಭವಿಸಿದರು.

ಉಸಾಬರಿ ಬೇಡವೆಂದ ಪಿಲಾತ: ರೋಮ್ ದೊರೆಗಳ ಆಡಳಿತದಲ್ಲಿ ಜುದೇಯದ ರಾಜ್ಯಪಾಲನಾಗಿದ್ದ ಪೊಂತ್ಸಿಯುಸ್ ಪಿಲಾತ ಬಹು ಶಕ್ತಿಶಾಲಿಯಾಗಿದ್ದ. ತನಗೆ ಅನಿಸಿದ್ದನ್ನು ಮಾಡಲು ಶಕ್ತನಾಗಿದ್ದ. ಯೆಹೂದ್ಯ ಮುಖಂಡರು ತನ್ನ ಬಳಿಗೆ ವಿಚಾರಣೆಗೆಂದು ಕರೆತಂದಿದ್ದ ಯೇಸುಸ್ವಾಮಿಯ ಮುಖದರ್ಶನದಿಂದಲೇ ‘ಆತನು ನಿರಪರಾಧಿ’ ಎಂದು ಆತನಿಗೆ ಸ್ಪಷ್ಟವಾಗಿತ್ತು. ಆದರೆ ದ್ವೇಷದಿಂದ ಕುರುಡಾಗಿದ್ದ ಯೆಹೂದ್ಯ ಮುಖಂಡರ ಹಾಗೂ ಜನಸಮೂಹದ ‘ಆತನನ್ನು ಶಿಲುಬೆಗೇರಿಸಿ’ ಕಿರುಚಾಟದ ಮುಂದೆ ಸತ್ಯ-ಮಿಥ್ಯಗಳ ನಡುವಿನ ಭೇದವನ್ನು ಅರಿಯಲು ಸೋತುಹೋದ ಪಿಲಾತ. ‘ಆತನನ್ನು ಬಿಡುಗಡೆಗೊಳಿಸಿದರೆ ನೀನು ಸೀಜರನ ಮಿತ್ರನಲ್ಲ’ ಎಂಬ ಜನಸಮೂಹದ ಬೆದರಿಕೆಗೆ ಶರಣಾದ. ತನ್ನ ಅಂತಸ್ತು, ಅಧಿಕಾರ, ಭವಿಷ್ಯವನ್ನು ನೆನಪಿಸಿಕೊಂಡು ತಲ್ಲಣಗೊಂಡ. ನಿರಪರಾಧಿಗೆ ಕೊರಡೆಯೇಟು ಹೊಡೆಸಿ ಶಿಲುಬೆ ಮರಣದ ದಂಡನೆಯನ್ನು ವಿಧಿಸಿದ.

ಜನಸಮೂಹದ ಬೊಬ್ಬೆಗೆ ಶರಣಾಗಿ, ಸತ್ಯವನ್ನು ಎತ್ತಿಹಿಡಿಯಲು ಮರೆತು, ತನಗಿದ್ದ ಅಧಿಕಾರವನ್ನು ವಿವೇಚನೆಯಿಂದ ಬಳಸಲು ಹಿಂಜರಿದು ಯಾವುದೇ ರಕ್ಷಣೆಯಿಲ್ಲದ ನಿರಪರಾಧಿ ಯೇಸುಯನ್ನು ಶಿಕ್ಷಿಸಿದ್ದು ಮಾತ್ರವಲ್ಲದೆ, ನೀರಿನಿಂದ ಕೈತೊಳೆದುಕೊಂಡು ತಾನು ಮಾಡಿದ ಕುಕೃತ್ಯದ ಜವಾಬ್ದಾರಿಯನ್ನು ಜಾರಿಸಿಕೊಂಡ ಪೊಂತ್ಸಿಯುಸ್ ಪಿಲಾತ, ಕಷ್ಟಕಾಲದಲ್ಲಿ ರಾಜ್ಯಾಡಳಿತದಲ್ಲಿ ಯೇಸುವಿಟ್ಟಿದ್ದ ಕಿಂಚಿತ್ ವಿಶ್ವಾಸವನ್ನು ಧ್ವಂಸಗೊಳಿಸಿದ. ‘ಸೀಜರ್​ನಿಗೆ ಸಲ್ಲಬೇಕಾದ್ದು ಸೀಜರನಿಗೆ ಕೊಡಿ; ದೇವರಿಗೆ ಸಲ್ಲಬೇಕಾದ್ದು ದೇವರಿಗೆ’ ಎಂದು ರಾಜ್ಯಾಡಳಿತವನ್ನು ಪುರಸ್ಕರಿಸಿ, ಇತರರಲ್ಲೂ ದೇಶಾಭಿಮಾನ ಉಕ್ಕಿಸಿದ್ದ ಯೇಸುಸ್ವಾಮಿಗೆ ಆಡಳಿತವೇ ಕೈಕೊಟ್ಟಿತ್ತು.

ವಿಶ್ವಾಸಘಾತುಕತನ, ಸ್ವಾಮಿದ್ರೋಹ, ನಿರಾಕರಣೆ, ಆಪ್ತರ ಪಲಾಯನ, ರಾಜ್ಯಾಡಳಿತದ ಸೋಗಲಾಡಿತನಕ್ಕೆ ಬಲಿಯಾದರು ಯೇಸು ಕ್ರಿಸ್ತರು. ಶುಕ್ರವಾರದ ಮಧ್ಯಾಹ್ನ ಸರಿಸುಮಾರು ಮೂರುಗಂಟೆಗೆ ಗೊಲ್ಗೊಥಾ ಬೆಟ್ಟದಲ್ಲಿ ಶಿಲುಬೆಯ ಮೇಲೆ, ‘ಎಲೋಯಿ, ಎಲೋಯಿ, ಲಾಮಾ ಸಬಕ್ಥಾನಿ?’ (ನನ್ನ ದೇವರೇ, ನನ್ನ ದೇವರೇ, ನನ್ನನ್ಯಾಕೆ ಕೈಬಿಟ್ಟಿದ್ದೀ?) ಎಂದು ಕರೆದು ಅಸುನೀಗಿದರು.

‘...ತುದಿ ಬೆಟ್ಟದಿಂ

ಕರೆವ ತಾಯೆಡೆಗೆ ಮರಿಜಿಂಕೆ ಜಿಗಿವಂತೆ

ಸುಗ್ಗಿಯೆಡೆಗಯ್ದುವಾ ಬಾನಕ್ಕಿಯಂತೆ, ದಿನ

ಮುಖದೊಳಿರುಳಿನ ಸೊಡರು ನೇಸರಂಬುಗುವಂತೆ

ಕ್ಷಿತಿಜದಿಂ ಸಿಡಿದು ಮೇಲ್ನೆಗೆವ ಮಿಂಚಂತೆ, ಯೇ

ಸುವಿನಾತ್ಮದೊಡನೆ ಬೆಳಕಿನ ಬೀಡಿಗಯ್ದೆ...’

ಇದೇ ‘ಗೊಲ್ಗೊಥಾ’ದ ಶುಭ ಶುಕ್ರವಾರ. ಇದು ‘ಶುಭ’ವಾಗಲು ಗೊಲ್ಗೊಥಾದ ಮೇಲೆ ಪ್ರಾಣತ್ಯಾಗ ಮಾಡಿದ ಯೇಸುವೇ ಕಾರಣ: ‘ಗೆಳೆಯರಿಗಾಗಿ ತನ್ನ ಪ್ರಾಣವನ್ನೇ ಧಾರೆಯೆರೆಯುವ ಪ್ರೀತಿಗಿಂತ ಮಿಗಿಲಾದ ಪ್ರೀತಿ ಬೇರೆ ಇಲ್ಲ’ ಎಂದಿದ್ದರು ಅವರು.

ಮಹಾಮಾರಿಯ ಆರ್ಭಟ: ಕರೊನಾ ಮಹಾಮಾರಿಯ ಭೀತಿಯಿಂದ ಹಾಗೂ ಸಾಮಾಜಿಕ ದಿಗ್ಬಂಧನದಿಂದ ಮಾನವ ಜೀವನವೇ ಅಸ್ತವ್ಯಸ್ತಗೊಂಡಿದೆ. ಜೀವನದ, ಮಾನವ ಸಂಬಂಧಗಳ ಸಮೀಕರಣಗಳು ಬದಲಾಗುತ್ತಿವೆ. ಜೀವನದಲ್ಲಿದ್ದ ಅರ್ಥವಿಲ್ಲದ ಪ್ರಾಮುಖ್ಯಗಳ ಅರಿವು ಮೂಡುತ್ತಿದೆ. ಸೋಂಕಿತ ಪ್ರೀತಿಪಾತ್ರರ ಬಳಿಸಾರಿ, ಬೆನ್ನುತಟ್ಟಿ, ತಲೆಸವರಿ ಧೈರ್ಯತುಂಬುವ ಸ್ವಾತಂತ್ರ್ಯವಿಲ್ಲ; ಪ್ರೀತಿಪಾತ್ರರು ರೋಗಕ್ಕೆ ಬಲಿಯಾಗಿ ಗತಿಸಿದಾಗ ಅವರಿಗೆ ಅಂತಿಮ ವಿದಾಯವನ್ನು ಹೇಳುವ ಅವಕಾಶವೂ ಇಲ್ಲ. ಜೀವನದಲ್ಲಿ ಬಹಳಷ್ಟನ್ನು ಕಳೆದುಕೊಂಡ ಅನುಭವ.

ವಿಶ್ವಾಸಘಾತುಕತನ, ದ್ರೋಹ, ಅವಿಶ್ವಾಸ, ಸೋಲು, ಶಿಲುಬೆ ಮರಣಗಳ ಕಾಮುಗಿಲ ಅಂಚಿನಲ್ಲಿ ಕಂಡುಬಂದಿತು ಮೃತ್ಯುವಿನ ಮೇಲಿನ ದಿಗ್ವಿಜಯ. ‘ಮರಣಕ್ಕೆ ಬಲಿಯಾಗಿ ಮರಣವನ್ನು ಜಯಿಸಿ ಮೃತ್ಯುಂಜಯನಾಗುವ’ ಅದ್ವಿತೀಯ ಹಾದಿಯನ್ನು ಶುಭ ಶುಕ್ರವಾರ ನಮಗೆ ಕಲಿಸಿದೆ. ವಿಶ್ವಾಸವನ್ನು ಕಳೆದುಕೊಳ್ಳದಿರೋಣ. ಅಂಧಕಾರ ಕಳೆದು ಉದಯಸೂರ್ಯನ ಹೊಂಗಿರಣಗಳಿಗೆ ಹಂಬಲಿಸೋಣ. ಮರಣವನ್ನು ಜಯಿಸಿದವನು ಈ ಮಹಾಮಾರಿಯನ್ನು ನಿಯಂತ್ರಣ ಹೊಂದಿರುವವನೂ ಆಗಿದ್ದಾನೆ.

(ಲೇಖಕರು ಸಾರ್ವಜನಿಕ ಸಂಪರ್ಕಾಧಿಕಾರಿ, ಉಡುಪಿ ದಿಯೆಸೆಜ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net