

| ರಮೇಶ ದೊಡ್ಡಪುರ ಬೆಂಗಳೂರು
ಕರೊನಾ ಎರಡನೇ ಅಲೆ ಗ್ರಾಮೀಣ ಪ್ರದೇಶಗಳಿಗೆ ದಾಂಗುಡಿ ಇಡುತ್ತಿದ್ದು, ಬೃಹತ್ ಸಂಖ್ಯೆಯಲ್ಲಿ ಕರೊನಾ ಪರೀಕ್ಷೆ ನಡೆಸಲು ಕೇಂದ್ರ ಸರ್ಕಾರದ ಪ್ರಾಯೋಜಿತ ಸ್ಟಾರ್ಟಪ್ ಅಗ್ಗದ ಹಾಗೂ ನಿಖರ ರ‌್ಯಾಪಿಡ್ ಆಂಟಿಜೆನ್ ಪರೀಕ್ಷೆ (ರ‌್ಯಾಟ್) ಕಿಟ್ ಸಿದ್ಧಪಡಿಸಿದೆ. ಈ ಹಿಂದೆ ವಿವಿಧ ಕಂಪನಿಗಳು ರ್ಯಾಟ್ ಕಿಟ್ಗಳನ್ನು ಬಳಸಿ ಪರೀಕ್ಷೆ ನಡೆಸಲಾಗುತ್ತಿತ್ತು. ಆದರೆ ಅವುಗಳು ನಿಖರತೆ ಪ್ರಮಾನದಲ್ಲಿ ಕಡಿಮೆ ಇದ್ದದ್ದರಿಂದ ಆರ್ಟಿ-ಪಿಸಿಆರ್ ಪರೀಕ್ಷೆಯನ್ನೇ ಕೇಂದ್ರ ಸರ್ಕಾರ ಶಿಫಾರಸು ಮಾಡಿತ್ತು. ಆದರೆ ಗ್ರಾಮೀಣ ಪ್ರದೇಶದ ಬೃಹತ್ ಜನಸಂಖ್ಯೆಯನ್ನು ಪರೀಕ್ಷೆ ಮಾಡಲು ರ‌್ಯಾಟ್ ಪರೀಕ್ಷೆಯೇ ಉತ್ತಮವಾಗಿದ್ದು, ಮುಂಬೈ ಮೂಲದ ಸ್ಟಾರ್ಟಪ್ ಪತಂಜಲಿ ಫಾರ್ಮ ಕಂಡುಹಿಡಿದಿದೆ.
ಕೇಂದ್ರ ಸರ್ಕಾರದ ಪ್ರಾಯೋಜನೆ: ಐಐಟಿ ಬಾಂಬೆಯಲ್ಲಿ ಪತಂಜಲಿ ಫಾರ್ಮ ಎಂಬ ಸ್ಟಾರ್ಟಪ್ ಕಳೆದ 8-9 ತಿಂಗಳಿಂದ ರ್ಯಾಟ್ ಪರೀಕ್ಷೆ ಕುರಿತು ಸಂಶೋಧನೆ ನಡೆಸುತ್ತಿದೆ. ಈ ಯೋಜನೆಗೆ ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಧನಸಹಾಯ ನೀಡಿದೆ. ಇದೀಗ ಉತ್ತಮ ಗುಣಮಟ್ಟದ ರ‌್ಯಾಟ್ ಕಿಟ್ ಸಿದ್ಧವಾಗಿದ್ದು, ಕೇಂದ್ರ ಸರ್ಕಾರ ಮೆಚ್ಚುಗೆ ವ್ಯಕ್ತಪಡಿಸಿದೆ. ಕರೊನಾ ಪತ್ತೆಗೆ ಅತ್ಯಂತ ಸೂಕ್ತ ಎನ್ನಲಾಗುವ ಆರ್ಟಿ-ಪಿಸಿಆರ್ನಷ್ಟೆ ಕಾರ್ಯಕ್ಷಮತೆಯನ್ನು ಪತಂಜಲಿ ಫಾರ್ವದ ರ್ಯಾಟ್ ಕಿಟ್ ಹೊಂದಿದ್ದು, ಸದ್ಯ ದೇಶದಲ್ಲಿ ಲಭ್ಯವಿರುವ ರ್ಯಾಟ್ ಕಿಟ್ಗಳಲ್ಲಿ ಅತ್ಯಂತ ಕಡಿಮೆ ದರದ್ದು ಎಂದು ತಿಳಿಸಿದೆ.
ಈ ಕುರಿತು ‘ವಿಜಯವಾಣಿ’ ಜತೆಗೆ ಮಾತನಾಡಿದ ಪತಂಜಲಿ ಫಾರ್ಮಾದ ನಿರ್ದೇಶಕ ಡಾ. ವಿನಯ್ ಸೈನಿ, ದೇಶದಲ್ಲಿ ಕರೊನಾ ನಿಯಂತ್ರಣಕ್ಕೆ ಬರಬೇಕೆಂದರೆ ಹೆಚ್ಚು ಪರೀಕ್ಷೆ ಆಗಬೇಕು. ಗ್ರಾಮೀಣ ಪ್ರದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ಯಾಥಾಲಜಿ ಲ್ಯಾಬ್, ಮೂಲಸೌಕರ್ಯ ಇಲ್ಲದ್ದರಿಂದ ರ್ಯಾಟ್ ಪರೀಕ್ಷೆ ಅನುಕೂಲಕರ. 10-15 ನಿಮಿಷದಲ್ಲಿ ಫಲಿತಾಂಶ ಲಭಿಸಲಿದೆ ಎಂದಿದ್ದಾರೆ.
20 ಸಾವಿರ ಉಚಿತ ನೀಡಿಕೆ: ಕೇಂದ್ರ ಸರ್ಕಾರವು ಸ್ಟಾರ್ಟಪ್ಗೆ ಧನಸಹಾಯ ಮಾಡಿರುವುದರಿಂದಾಗಿ, ಒಪ್ಪಂದದ ಪ್ರಕಾರ, ಸುಮಾರು 20 ಲಕ್ಷ ರೂ. ಬೆಲೆಯ ಮೊದಲ 20 ಸಾವಿರ ಟೆಸ್ಟ್ ಕಿಟ್ಗಳನ್ನು ಸರ್ಕಾರಕ್ಕೆ ಉಚಿತವಾಗಿ ನೀಡಲಾಗುತ್ತದೆ. ಮಾರುಕಟ್ಟೆಗೆ ಬಿಡುಗಡೆ ಮಾಡಲು ಐಸಿಎಂಆರ್ ಈಗಾಗಲೆ ಒಪ್ಪಿಗೆ ನೀಡಿದೆ. 100-110 ರೂ. ನಡುವೆ ಬೆಲೆ ನಿಗದಿಪಡಿಸುವ ಆಲೋಚನೆಯಿದೆ ಎಂದು ವಿನಯ್ ಸೈನಿ ಹೇಳಿದ್ದಾರೆ.