ಗೋಸ್ವರ್ಗದಲ್ಲಿ ಲೋಕಾರ್ಪಣೆಗೊಂಡ 'ಕುಮಾರವ್ಯಾಸ ಭಾರತ ಕಥಾಮೃತ' ಕೃತಿ

'
Published on

ಉತ್ತರ ಕನ್ನಡ: ಭಗವಂತನ ಅವತಾರದ ಕಥೆಗಳ ಅನುಸಂಧಾನ ಜೀವಿಯ ಸಮುದ್ಧರಣಕ್ಕೆ ಕಾರಣವಾಗುತ್ತದೆ. ಇದಕ್ಕಾಗಿಯೇ ಪ್ರಾಚೀನರು ಆ ಚರಿತೆಗಳನ್ನು ಪುರಾಣವಾಗಿ, ಇತಿಹಾಸವಾಗಿ, ಕಾವ್ಯವಾಗಿ, ದೃಶ್ಯಕಲೆಯಾಗಿ ಬಹುವಿಧದಲ್ಲಿ ಮತ್ತೆ ಮತ್ತೆ ಸೃಜಿಸುತ್ತಾ ಬಂದರು. ಇದರ ಮುಂದುವರಿಕೆಯೇ ಭಾರತೀಯ ಸಾಹಿತ್ಯದ ಮೇರು ಕವಿಗಳಲ್ಲಿ ಒಬ್ಬನಾದ ಕುಮಾರವ್ಯಾಸ ವಿರಚಿಸಿದ ಕರ್ಣಾಟಭಾರತ ಕಥಾಮಂಜರಿ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ಹೇಳಿದರು.

ಅವರು ಭಾರತೀ ಪ್ರಕಾಶನ ಪ್ರಕಟಿಸಿರುವ 'ಕುಮಾರವ್ಯಾಸ ಭಾರತ ಕಥಾಮೃತ' ಕೃತಿಯನ್ನು ಲೋಕಾರ್ಪಣೆ ಮಾಡಿ ಆಶೀರ್ವದಿಸಿ ಮಾತನಾಡಿದರು.

ಕುಮಾರವ್ಯಾಸ ಭಾರತ ಕಥಾಮೃತ ರಸಯುಕ್ತವಾದ ಉತ್ತಮ ಕಾವ್ಯವಿದು. ತೆಪ್ಪದ ಲಕ್ಷ್ಮೀನಾರಾಯಣ ಭಟ್ಟರು ಇಂದಿನ ಭಾಷೆಯಲ್ಲಿ ಕುಮಾರವ್ಯಾಸನ ಕಾವ್ಯವನ್ನು ಮತ್ತೊಮ್ಮೆ ರಚಿಸಿದ್ದಾರೆ. ಇದನ್ನು ಭಾರತೀ ಪ್ರಕಾಶನ ಪ್ರಕಟಿಸುತ್ತಿರುವುದು ಪ್ರಶಂಸಾರ್ಹ. ಈ ಕೃತಿಕಾರರಿಂದ ಮತ್ತಷ್ಟು ಮೌಲಿಕ ಕೃತಿಗಳು ಹೊರಬರುವಂತಾಗಲಿ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ಆಶೀರ್ವದಿಸಿದರು.

ಸಿದ್ಧಾಪುರ ಸಮೀಪದ ಭಾನ್ಕುಳಿ ಮಠ ಗೋಸ್ವರ್ಗದ ಗೋದಿನ-ಉತ್ಸವ ಸಂದರ್ಭದಲ್ಲಿ ನಡೆದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಕೃತಿಯ ಲೇಖಕರಾದ ಲಕ್ಷ್ಮೀನಾರಾಯಣ ಭಟ್ಟ ತೆಪ್ಪ, ಹವ್ಯಕ ಮಹಾಮಂಡಲ ಅಧ್ಯಕ್ಷರಾದ ಆರ್.ಎಸ್.ಹೆಗಡೆ ಹರಗಿ, ಶ್ರೀಭಾರತೀ ಪ್ರಕಾಶನದ ಅಧ್ಯಕ್ಷರಾದ ಸಚಿನ್.ಎಲ್.ಎಸ್. ಮುಂತಾದವರು ಭಾಗವಹಿಸಿದ್ದರು.

ಕುಮಾರವ್ಯಾಸ ಭಾರತ ಕಥಾಮೃತ ಕೃತಿ ಸರಳಗನ್ನಡದಲ್ಲಿದ್ದು, ಅಂಕಣಕಾರ ನಾರಾಯಣ ಯಾಜಿ ಅವರು ಮುನ್ನುಡಿ ಬರೆದಿದ್ದಾರೆ. ಶ್ರೀಭಾರತೀ ಪ್ರಕಾಶನದ ದಿಗ್ದರ್ಶಕ ವಿದ್ವಾನ್ ಜಗದೀಶಶರ್ಮಾ ಸಂಪ ಅವರ ಬೆನ್ನುಡಿ ಬರೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net