ಸ್ಟಾರ್ಟಪ್​ ಐಟಿ ಸ್ಪೇಸ್​ ಚೆಕ್​ಗೆ ಹೊಸ ನೀತಿ: ಬೆಂಗಳೂರು ಟೆಕ್ ಶೃಂಗದಲ್ಲಿ ಅನಾವರಣ

Untitled design (5)
Published on

| ಶ್ರೀಕಾಂತ್ ಶೇಷಾದ್ರಿ, ಬೆಂಗಳೂರು

ಕರ್ನಾಟಕ ಸರ್ಕಾರವು ಭಾರತದ ನಾವೀನ್ಯತೆ ಕೇಂದ್ರವಾಗಿ ತನ್ನ ನಾಯಕತ್ವವನ್ನು ಮತ್ತಷ್ಟು ಬಲಪಡಿಸಲು ಹೊಸ ಸ್ಟಾರ್ಟಪ್ ನೀತಿಗಳನ್ನು ಪರಿಚಯಿಸುತ್ತಿದೆ. ಇದು ಬೆಂಗಳೂರಿನ ಆಚೆಗಿನ ಅಂದರೆ ಬೇರೆ ಬೇರೆ ಜಿಲ್ಲೆಗಳಲ್ಲಿ ಹೊಸ ಸ್ಟಾರ್ಟಪ್​ಗಳ ರಚನೆಯನ್ನು ಬೆಂಬಲಿಸುತ್ತದೆ. ಪ್ರಸ್ತುತ ಸನ್ನಿವೇಶಕ್ಕೆ ಅನುಗುಣವಾಗಿ ಮೂರು ನೀತಿಗಳನ್ನು ಹೊರತರಲು ಸರ್ಕಾರ ತಯಾರಿ ನಡೆಸಿದೆ. ಹೊಸ ಹೊಸ ನೀತಿಗಳನ್ನು ತರುವುದರಲ್ಲಿ ಮತ್ತು ಪೂರಕ ಪರಿಸರ ವ್ಯವಸ್ಥೆ ರೂಪಿಸುವುದರಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕ, ಪ್ರಸ್ತುತ ಕಾಲಘಟ್ಟಕ್ಕೆ ತಕ್ಕಂತೆ ಅವಕಾಶಗಳನ್ನು ಬಾಚಿಕೊಳ್ಳಲು ಮತ್ತೊಂದು ಹೆಜ್ಜೆ ಇಟ್ಟಿದೆ. ಅಂದಹಾಗೆ, ಮಾಹಿತಿ ಮತ್ತು ತಂತ್ರಜ್ಞಾನ ನೀತಿ, ಸ್ಟಾರ್ಟಪ್ , ಸ್ಪೇಸ್​ಟೆಕ್ ನೀತಿಯನ್ನು ರೂಪಿಸಲಾಗುತ್ತಿದ್ದು, ಕೊನೇ ಹಂತದ ಪರಿಷ್ಕರಣೆ ನಡೆದಿದೆ. ಶೀಘ್ರದಲ್ಲೇ ನಡೆಯುವ ಜಾಗತಿಕ ಮಟ್ಟದ ಬೆಂಗಳೂರು ಟೆಕ್​ಶೃಂಗ ಸಭೆಯಲ್ಲಿ ಇವುಗಳ ಅನಾವರಣವಾಗಲಿದೆ.

ಮಾಹಿತಿ ಮತ್ತು ತಂತ್ರಜ್ಞಾನ ನೀತಿಯನ್ನು ದೇಶದಲ್ಲೇ ಮೊದಲು ಪ್ರಕಟಿಸಿದ್ದು ಕರ್ನಾಟಕ. 1997ರಲ್ಲಿ ದೇಶದಲ್ಲೇ ಮೊದಲ ಬಾರಿಗೆ ಇಂತಹ ನೀತಿ ಪ್ರಕಟಿಸಿ ಗಮನ ಸೆಳೆದಿತ್ತು. ಬಳಿಕ 2000ನೇ ಇಸವಿಯಲ್ಲಿ ಮಿಲೇನಿಯಂ ಐಟಿ ಪಾಲಿಸಿ ಹೊರಬಿದ್ದಿತ್ತು. 2020-25ರವರೆಗಿನ ಅವಧಿಗೆ ರೂಪುಗೊಂಡಿದ್ದ ನೀತಿಯ ಅವಧಿ ಈಗ ಕೊನೆಗೊಂಡಿದೆ. ಇನ್ನು ಸ್ಟಾರ್ಟಪ್ ಪಾಲಿಸಿ ವಿಚಾರಕ್ಕೆ ಬಂದರೆ 2015ರಲ್ಲಿ ರಾಜ್ಯದ ಮೊದಲ ನೀತಿ ಪ್ರಕಟವಾಯಿತು. ಐದು ವರ್ಷ ಅವಧಿಯ ಈ ನೀತಿ ವಿಶ್ವದರ್ಜೆಯ ಸ್ಟಾರ್ಟಪ್ ಪರಿಸರ ವ್ಯವಸ್ಥೆಯನ್ನು ರಚಿಸಲು ಸಾಧ್ಯವಾಗಿಸಿತ್ತು. ಬಳಿಕ 2022ರಲ್ಲಿ ಹೊಸ ನೀತಿ ತರಲಾಗಿತ್ತು. ಇದೀಗ ಪುನಃ ಹೊಸ ರೂಪದಲ್ಲಿ ಸ್ಟಾರ್ಟಪ್ ನೀತಿ ರೂಪಿಸಲಾಗಿದೆ. ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರವನ್ನು ಗಮನದಲ್ಲಿಟ್ಟುಕೊಂಡು 2024ರಲ್ಲಿ ಸರ್ಕಾರ ಕರಡು ನೀತಿ ಸಿದ್ಧಪಡಿಸಿದೆ. ಅದಕ್ಕೆ ಇನ್ನಷ್ಟು ಅಂಶಗಳನ್ನು ಸೇರಿಸಿ ಹೊಸ ನೀತಿ ಪ್ರಕಟಿಸುವ ಉದ್ದೇಶ ಐಟಿಬಿಟಿ ಇಲಾಖೆಯದ್ದಾಗಿದೆ.

ಈ ನೀತಿಗಳನ್ನು ಸಿದ್ಧಪಡಿಸುವ ಮುನ್ನ ವ್ಯಾಪಕ ಉದ್ಯಮ ಸಮಾಲೋಚನೆಗಳನ್ನು ನಡೆಸಲಾಗಿದೆ. ಜಾಗತಿಕ ಮಾನದಂಡಗಳ ಆಧಾರದ ಮೇಲೆ ರೂಪಿಸಲಾಗುತ್ತಿದೆ. ಇವು ಸಮಗ್ರ, ಭವಿಷ್ಯದ ದೃಷ್ಟಿಕೋನ ಹೊಂದಿರುವ ಹಾಗೂ ಈ ಪ್ರಮುಖ ಕ್ಷೇತ್ರಗಳಲ್ಲಿ ಬೆಳವಣಿಗೆ ಮತ್ತು ನಾವೀನ್ಯತೆ ವೇಗಗೊಳಿಸಲು ವಿನ್ಯಾಸಗೊಳಿಸಲಾಗುತ್ತಿದೆ. | ಪ್ರಿಯಾಂಕ್ ಖರ್ಗೆ, ಐಟಿಬಿಟಿ ಸಚಿವ

ನಿರೀಕ್ಷೆಗಳು/ವಿಶೇಷಗಳು

  1. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕರ್ನಾಟಕದ್ದೇ ನೇತಾರಿಕೆ ಇದೆ. ಇದನ್ನು ಮುಂದುವರಿಸಿಕೊಂಡು ಹೋಗಲು ಇನ್ನಷ್ಟು ಅವಕಾಶಗಳನ್ನು ಸೃಷ್ಟಿಸುವುದು.

2. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಅವಕಾಶಗಳ ಹುಡುಕಾಟಕ್ಕೆ ಅನುವು ಮಾಡಿಕೊಡುವುದು, ಕೌಶಲಯುತ ಮಾನವ ಸಂಪನ್ಮೂಲ ಶಕ್ತಿಯನ್ನು ಅನಾವರಣಗೊಳಿಸುವುದು.

3. ನವೋದ್ಯಮಗಳಿಗೆ ಆರ್ಥಿಕ ನೆರವು, ವಿನಾಯಿತಿಗಳು, ಪ್ಲಗ್ ಎಂಡ್ ಪ್ಲೇನಂತಹ ಸೌಲಭ್ಯಗಳನ್ನು ಪ್ರಕಟಿಸುವುದು. ಈ ಮೂಲಕ ಈ ಕ್ಷೇತ್ರದ ಬೆಳವಣಿಗೆಗೆ ಪೂರಕ ಪರಿಸರಕ್ಕೆ ಒತ್ತು.

4. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೂಡಿಕೆದಾರರು ಮತ್ತು ನವೋದ್ಯಮಗಳಿಗೆ ಸೇತುವೆಯಾಗಿ ವೇದಿಕೆ ಕಲ್ಪಿಸುವುದು.

5. ಬೆಂಗಳೂರು ಹೊರತುಪಡಿಸಿ ಇತರ ನಗರಗಳಲ್ಲಿ ಹೊಸದಾಗಿ ರಚಿಸುವ ಕ್ಲಸ್ಟರ್​ಗಳಲ್ಲಿ ಅವಕಾಶಗಳನ್ನು ಕಲ್ಪಿಸುವ ಮೂಲಕ ಉದ್ಯೋಗ ಸೃಷ್ಟಿಗೂ ಪ್ರೋತ್ಸಾಹ ನೀಡುವುದು.

6. ಈ ಮೂರು ನೀತಿಗಳಿಂದ ಮುಂದಿನ ಐದು ವರ್ಷಗಳಲ್ಲಿ 50 ಲಕ್ಷಕ್ಕಿಂತ ಹೆಚ್ಚಿನ ಉದ್ಯೋಗ ಸೃಷ್ಟಿಯ ಗುರಿ ಸಾಧಿಸುವ ನಿಟ್ಟಿನಲ್ಲಿ ಸುಧಾರಣೆ ಕ್ರಮಗಳು.

7. ನೆರೆ ರಾಜ್ಯಗಳು ವಿವಿಧ ವಿನಾಯಿತಿ ನೀಡಿ ಹೂಡಿಕೆದಾರರನ್ನು ಸೆಳೆಯುತ್ತಿರುವುದರಿಂದ ಪೈಪೋಟಿ ನೀಡಲು ಮುಕ್ತ ಅವಕಾಶಗಳನ್ನು ನೀಡುವುದು.

8. ಆವಿಷ್ಕಾರ ಹಾಗೂ ಸಂಶೋಧನೆಗೆ ಒತ್ತು ನೀಡಲು ವಿಶೇಷ ಆರ್ಥಿಕ ನೆರವು, ಸೌಲಭ್ಯ ಕಲ್ಪಿಸುವ ಯೋಜನೆಗಳನ್ನು ಪ್ರಕಟಿಸುವುದು.

ಟೆಕ್ ಶೃಂಗಸಭೆಯ ಆಕರ್ಷಣೆ

ಬೆಂಗಳೂರು ಟೆಕ್ ಶೃಂಗಸಭೆಗೆ 26 ವರ್ಷದ ಪರಂಪರೆ ಇದೆ. 28ನೇ ಸಭೆ ನವೆಂಬರ್ 18ರಿಂದ 20ರವರೆಗೆ ಆಯೋಜನೆಗೊಂಡಿದೆ. ಇದರಲ್ಲಿ 60 ದೇಶಗಳ ಪ್ರತಿನಿಧಿಗಳು ಪಾಲ್ಗೊಳ್ಳುವರು. ತಂತ್ರಜ್ಞಾನ ವಿಚಾರ ಹಾಗೂ ಉದ್ಯಮವನ್ನು ಒಂದೇ ವೇದಿಕೆಯಲ್ಲಿ ಸೇರಿಸುವ ಜಾಗತಿಕ ಕಾರ್ಯಕ್ರಮವೂ ಹೌದು. ಈ ಬಾರಿ ಕ್ವಾಂಟಮ್ ಕಂಪ್ಯೂಟಿಂಗ್, ಎಐ, ಸ್ಪೇಸ್​ಟೆಕ್, ಹೆಲ್ತ್​ಟೆಕ್​ಗೆ ವಿಶೇಷ ಗಮನ ನೀಡುತ್ತಿದ್ದು, ಇವುಗಳ ನಡುವೆ ಈ ಮೂರು ನೀತಿ ಪ್ರಧಾನ ಆಕರ್ಷಣೆಯಾಗಿರುತ್ತವೆ.

ಜಾಗತಿಕ ಆಕರ್ಷಣೆ ಗುರಿ

ನಿರ್ದಿಷ್ಟ ಕ್ಷೇತ್ರದ ಬೆಳವಣಿಗೆಗೆ ಪೂರಕವಾಗಿ ಸರ್ಕಾರದ ನಿಲುವು ವ್ಯಕ್ತಪಡಿಸುವುದು, ಹೂಡಿಕೆದಾರರನ್ನು ಆಕರ್ಷಿಸುವುದು ಮತ್ತು ಅವರಿಗೆ ಅನುಕೂಲ ಮಾಡಿಕೊಡುವುದು, ಹೊಸ ಯೋಜನೆ ಪ್ರಕಟಿಸುವುದು, ನೆರವು- ವಿನಾಯಿತಿ ನೀಡುವುದು, ಉದ್ಯೋಗ ಸೃಷ್ಟಿ ಸೇರಿ ಹತ್ತಾರು ವಿಚಾರಗಳು ನೀತಿಗಳನ್ನು ಪ್ರಕಟಿಸುವುದರ ಹಿಂದಿನ ಉದ್ದೇಶವಾಗಿರುತ್ತದೆ. ಇದೀಗ ತರಲು ಹೊರಟ ಮೂರು ಪ್ರಮುಖ ನೀತಿಗಳ ವಿಶೇಷತೆ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಆವಿಷ್ಕಾರ, ಸಂಶೋಧನೆ ಹಾಗೂ ಮಹಿಳೆಯರಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಗಮನ ಕೊಡಲಾಗಿದೆ. ಈಗಾಗಲೇ ಹಲವು ಸುತ್ತಿನ ಸಭೆಗಳನ್ನು ನಡೆಸಿದ್ದು, ನೀತಿ ಅಂತಿಮಗೊಳಿಸುವ ಕೆಲಸ ಭರದಿಂದ ಸಾಗಿದೆ ಎಂದು ವಿವರಿಸಿದರು.

ವಿವಿಧ ಕ್ಷೇತ್ರಗಳಿಗೆ ಸಂಬಂಧಪಟ್ಟಂತೆ ನಮ್ಮ ಸರ್ಕಾರ ನೀತಿಗಳನ್ನು ತಂದಿದೆ. ಅದರ ಪ್ರಕಾರ ಪರಿಸರ ವ್ಯವಸ್ಥೆ ರೂಪುಗೊಳಿಸುವ ಕೆಲಸವನ್ನೂ ಮಾಡಿಕೊಂಡು ಬಂದಿದೆ. ಈ ಕಾರಣಕ್ಕಾಗಿಯೇ ದೇಶದ ಗಮನ ರಾಜ್ಯದ ಮೇಲೆ ಇರುತ್ತದೆ. ನಮ್ಮ ನೀತಿಗಳನ್ನೇ ಬಹುತೇಕ ರಾಜ್ಯಗಳು ಅನುಸರಿಸುತ್ತಾ ಬಂದಿವೆ ಎಂದು ತಿಳಿಸಿದರು. ಈ ಬಾರಿ ನೀತಿಗಳನ್ನು ಜಾಗತಿಕ ದೃಷ್ಟಿಕೋನದಲ್ಲೇ ರೂಪಿಸಲಾಗಿದೆ. ಮಾಹಿತಿ ತಂತ್ರಜ್ಞಾನ, ಸ್ಟಾರ್ಟಪ್, ಸ್ಪೇಸ್​ಟೆಕ್​ನಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಈಗಾಗಲೇ ಜಗತ್ತಿಗೆ ಪರಿಚಯವಿದೆ. ಈ ನೀತಿಯ ಮೂಲಕ ಕರ್ನಾಟಕದಲ್ಲಿರುವ ಇನ್ನಷ್ಟು ಅವಕಾಶಗಳನ್ನು ತಿಳಿಸುವ ಪ್ರಯತ್ನ ಮಾಡಲಾಗುತ್ತದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net