ಹೊಸ ನೈತಿಕ ದಿಕ್ಕು

untitled-design-7-690e33ca578db
Published on

ಇಂದಿನ ಜಗತ್ತಿನಲ್ಲಿ ವಿಭಜನೆ ಮತ್ತು ಅಹಂಕಾರದ ರಾಜಕೀಯ ಹೆಚ್ಚುತ್ತಿರುವಾಗ, ನಾವು ಸ್ವಯಂ ಪ್ರಶ್ನಿಸಬೇಕು. ನಾವು ನಿರ್ವಿುಸಲು ಬಯಸುವ ಜಗತ್ತು ಯಾವುದು? ಅನುಮಾನ ಮತ್ತು ವಿಭಜನೆಯೆ? ಅಥವಾ ಬಾಂಧವ್ಯ ಮತ್ತು ಸಹಕಾರದ ನವಯುಗವೆ? ಈ ಪ್ರಶ್ನೆಗೆ ಉತ್ತರ ‘ವಸುಧೈವ ಕುಟುಂಬಕಂ’ದಲ್ಲಿದೆ. ಇದು ವ್ಯಕ್ತಿಗಳಿಂದ ರಾಷ್ಟ್ರಗಳವರೆಗೆ ಎಲ್ಲರಿಗೂ ಒಂದೇ ಸಂದೇಶ ನೀಡುತ್ತದೆ ವಿಶ್ವವೆ ಒಂದು ಕುಟುಂಬ ಎಂಬ ಮಾತು ಕೇವಲ ಆದರ್ಶವಲ್ಲ, ಅದು ಇಂದಿನ ಅಗತ್ಯ.

ಹವಾಮಾನ ಬದಲಾವಣೆ, ಸಾಮಾಜಿಕ ಅಸಮಾನತೆ, ನೈತಿಕ ಕುಸಿತ ಈ ಎಲ್ಲ ಸವಾಲುಗಳ ನಡುವೆ ಮಾನವಕುಲವು ಮತ್ತೊಮ್ಮೆ ಒಂದೇ ಕುಟುಂಬದಂತೆ ವರ್ತಿಸಬೇಕು. ಆಗ ನಾವು ಪೂರ್ವಜರ ಜ್ಞಾನವನ್ನು ಗೌರವಿಸಿ, ಮುಂದಿನ ಪೀಳಿಗೆಗಳಿಗೆ ಶಾಂತಿಯುತ ಭವಿಷ್ಯವನ್ನು ಕಟ್ಟಬಹುದು. ಈ ಆದರ್ಶವನ್ನು ಶಿಕ್ಷಣ, ರಾಜಕೀಯ ಮತ್ತು ಆರ್ಥಿಕ ವ್ಯವಸ್ಥೆಯಲ್ಲೂ ಅಳವಡಿಸಬೇಕಾಗಿದೆ. ಶಾಲೆಗಳ ಪಾಠ್ಯಕ್ರಮಗಳಿಂದಲೇ ಮಾನವ ಏಕತೆ ಮತ್ತು ಸಹಾನುಭೂತಿಯ ಮೌಲ್ಯಗಳು ಬೆಳೆಸಲ್ಪಡಬೇಕು. ರಾಷ್ಟ್ರಗಳು ಪರಸ್ಪರ ಶತ್ರುಗಳಂತೆ ಅಲ್ಲ, ಸಹೋದರರಂತೆ ನಡೆದುಕೊಂಡಾಗ ಮಾತ್ರ ನಿಜವಾದ ವಿಶ್ವಶಾಂತಿ ಮತ್ತು ಸ್ಥಿರವಾದ ಪ್ರಗತಿ ಸಾಧ್ಯ.

ಈ ತತ್ತ್ವದ ಸಾರವೆಂದರೆ ನಿಜವಾದ ಪ್ರಗತಿ ರಾಷ್ಟ್ರಗಳ ಸ್ಪರ್ಧೆಯಲ್ಲಿ ಅಲ್ಲ, ಸಹಕಾರದಲ್ಲಿ ಇದೆ. ವಸುಧೈವ ಕುಟುಂಬಕಂ ಎಂದರೆ ಅಂತರರಾಷ್ಟ್ರೀಯ ನೀತಿಯ ಹೊಸ ನೈತಿಕ ದಿಕ್ಕು. ವಿಜ್ಞಾನ, ಆರ್ಥಿಕತೆ ಮತ್ತು ತಂತ್ರಜ್ಞಾನದಲ್ಲಿ ನಾವು ಎಷ್ಟೇ ಮುಂದೆ ನಡೆದರೂ, ಮಾನವೀಯ ಮೌಲ್ಯಗಳನ್ನು ಮರೆತರೆ ಆ ಪ್ರಗತಿ ಅಪೂರ್ಣ. ಇಂದು ರಾಷ್ಟ್ರಗಳು ಗಡಿಗಳನ್ನು ಕಟ್ಟುತ್ತಿವೆ, ಆದರೆ ಹೃದಯಗಳ ನಡುವೆ ಸೇತುವೆಗಳು ಕುಸಿಯುತ್ತಿವೆ. ಈ ಸಂದರ್ಭದಲ್ಲಿ ಗೀತೆಯ ಮತ್ತು ಉಪನಿಷತ್ತುಗಳ ಶಾಶ್ವತ ಸಂದೇಶ ‘ಸರ್ವಭೂತಹಿತೇ ರತಾಃ’- ಎಲ್ಲರ ಕಲ್ಯಾಣದಲ್ಲಿ ತೊಡಗುವುದು ಅತ್ಯಂತ ಪ್ರಸ್ತುತ. ಹೀಗಾಗಿ, ವಸುದೈವ ಕುಟುಂಬಕಂ ಕೇವಲ ಧಾರ್ವಿುಕ ವಾಕ್ಯವಲ್ಲ ಅದು ಮಾನವ ಸಾಂಸ್ಕೃತಿಕ ಪುನರುತ್ಥಾನದ ಘೊಷವಾಕ್ಯ. ಭಾರತದಿಂದ ವಿಶ್ವಕ್ಕೆ ನೀಡಿದ ಅಮೂಲ್ಯ ಸಂದೇಶ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net