

ಸಿಂಧನೂರು: ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಹಾಗೂ ಭಾರತೀಯ ಸಾಕ್ಷ್ಯ ಎಂಬ ಮೂರು ಹೊಸ ಕಾನೂನುಗಳ ರದ್ದತಿಗೆ ಒತ್ತಾಯಿಸಿ ಸಿಪಿಐಎಂಎಲ್ ಲಿಬರೇಷನ್ ತಾಲೂಕು ಸಮಿತಿಯಿಂದ ತಹಸಿಲ್ ಕಚೇರಿ ಶಿರಸ್ತೇದಾರ್ ವೀಣಾಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು.
ಕೇಂದ್ರ ಸರ್ಕಾರ ಅಪರಾಧ ನ್ಯಾಯಕ್ಕೆ ಸಂಬಂಧಿಸಿದ ಐಪಿಸಿ, ಸಿಆರ್‌ಪಿಸಿ, ಸಾಕ್ಷ್ಯಾಧಾರ ಅಧಿನಿಯಮಗಳನ್ನು ಬದಲಿಸಿ, ಅವುಗಳ ಸ್ಥಾನದಲ್ಲಿ ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಹಾಗೂ ಭಾರತೀಯ ಸಾಕ್ಷ್ಯ ಮಸೂದೆಗಳನ್ನು ಜು. 1ರಿಂದ ಜಾರಿಗೊಳಿಸಿದೆ.
ಜನರ ಬೇಡಿಕೆ ಆಗಿರದ ಈ ಕಾನೂನುಗಳ ಬದಲಾವಣೆ ದೇಶ ನಾಗರಿಕರಿಗೆ ಸುರಕ್ಷತೆ ಬದಲಾಗಿ ಅಭದ್ರತೆ ಉಂಟು ಮಾಡಲಿವೆ ಎಂದು ದೂರಿದರು.
ಹೊಸ ಕಾನೂನುಗಳಿಂದ ಅಧಿಕಾರಸ್ಥ ಕೆಲವರಿಗೆ ಮಾತ್ರ ಸುರಕ್ಷತೆ ಒದಗಿಸಲಾಗಿದ್ದು, ಸಾಮಾನ್ಯ ನಾಗರಿಕರು, ಸಂತ್ರಸ್ತರು ಮತ್ತು ಶೋಷಿತರು ನ್ಯಾಯದಿಂದ ವಂಚಿತರಾಗಲಿದ್ದಾರೆ.
ಈ ಕಾನೂನುಗಳನ್ನು ರದ್ದು ಪಡಿಸಬೇಕು. ರಾಜ್ಯ ಸರ್ಕಾರ ನೂತನ ಕಾನೂನುಗಳನ್ನು ಜಾರಿಗೊಳಿಸಬಾರದು. ಹೊಸ ನ್ಯಾಯ ಸಂಹಿತೆಗಳು ಜಾರಿಯಾಗದಂತೆ ಸುಪ್ರೀಂಕೋರ್ಟ್ ಮಧ್ಯಪ್ರವೇಶಿಸಬೇಕು ಎಂದು ಒತ್ತಾಯಿಸಿದರು.