

ಉಡುಪಿ: ಹಿರಿಯ-ಕಿರಿಯ ವಕೀಲರಿಗೆ ಕರ್ತವ್ಯದ ಸಮಯದಲ್ಲಿ ರಕ್ಷಣೆ ಬಹಳ ಅಗತ್ಯ. ಹೀಗಾಗಿ ಸರ್ಕಾರ ಮುಂದಿನ ಅಧಿವೇಶನದಲ್ಲೇ ವಕೀಲರ ರಕ್ಷಣಾ ಕಾಯಿದೆಯನ್ನು ಜಾರಿಗೆ ತರಬೇಕು. ಈ ಮೂಲಕ ರಾಜ್ಯದ ಸಾವಿರಾರು ವಕೀಲರ ನೆರವಿಗೆ ಬರಬೇಕು ಎಂದು ಉಡುಪಿ ವಕೀಲರ ಸಂಘದ ಅಧ್ಯಕ್ಷ ಬಿ.ನಾಗರಾಜ್ ಆಗ್ರಹಿಸಿದರು.
ಶುಕ್ರವಾರ ಉಡುಪಿ ವಕೀಲರ ಸಂಘದ ವತಿಯಿಂದ ವಕೀಲರ ರಕ್ಷಣಾ ಕಾಯ್ದೆ ಜಾರಿಗೆ ಆಗ್ರಹಿಸಿ ನಡೆದ ಸಾಂಕೇತಿಕವಾಗಿ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ವಕೀಲರಿಗೆ ರಕ್ಷಣೆಯ ಅಗತ್ಯ ಹಿಂದೆಂದಿಗಿಂತ ಹೆಚ್ಚು ಇದೆ. ಸಮಾಜಕ್ಕೆ ನ್ಯಾಯ ಒದಗಿಸುವ ವೃತ್ತಿ ಮಾಡುವ ವಕೀಲರಿಗೆ ರಕ್ಷಣೆ ಮುಖ್ಯ .ಇತ್ತೀಚಿನ ವರ್ಷಗಳಲ್ಲಿ ವಕೀಲರ ಮೇಲೆ ಹಲ್ಲೆಯಂತಹ ಪ್ರಕರಣಗಳು ಹೆಚ್ಚುತ್ತಿವೆ ಎಂದು ಹೇಳಿದರು.
ನ್ಯಾಯಾಲಯದ ಸಂಕೀರ್ಣದ ಮುಂಭಾಗ ಸೇರಿದ ನೂರಾರು ವಕೀಲರು ಶೀಘ್ರ ಕಾಯಿದೆ ಜಾರಿಗೊಳಿಸುವಂತೆ ಒತ್ತಾಯಿಸಿದರು. ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ರೆನಾಲ್ಡ್ ಪ್ರವೀಣ್ ಕುಮಾರ್, ಮಾಜಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಪ್ರವೀಣ್ ಶೆಟ್ಟಿ, ಸಂಕಪ್ಪ ಉಪಸ್ಥಿತರಿದ್ದರು.