ತಾಂತ್ರಿಕತೆಯಲ್ಲಿ ಹೊಸ ಸುಧಾರಣಾ ಕ್ರಮಗಳು, ರಾಜ್ಯಾದ್ಯಂತ ಗಿರಿಚಾರಣಕ್ಕೆ ತಾತ್ಕಾಲಿಕ ತಡೆ

7CBP2(sakandagiri)
Published on

ಚಿಕ್ಕಬಳ್ಳಾಪುರ: ನಿರ್ವಹಣೆಯಲ್ಲಿನ ಲೋಪದೋಷಗಳು, ತಾಂತ್ರಿಕತೆಯಲ್ಲಿ ಹೊಸ ಸುಧಾರಣಾ ಕ್ರಮಗಳ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ನಿಗದಿಪಡಿಸಿರುವ ಪ್ರಕೃತಿ ರಮ್ಯ ತಾಣ ಪ್ರದೇಶದಲ್ಲಿ ಗಿರಿಚಾರಣವನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.

ಸರ್ಕಾರವು ಇಂತಿಷ್ಟು ಶುಲ್ಕ ಪಾವತಿಯ ಟಿಕೆಟ್​ ಪಡೆದು ಗಿರಿಚಾರಣ ಹೋಗುವ ಅವಕಾಶ ನೀಡಿದ್ದು ಇದನ್ನು ಮೊದಲು ಇಕೋ ಟೂರಿಸಂ ನಿರ್ವಹಿಸುತ್ತಿತ್ತು. ಆದರೆ, ಇದರಲ್ಲಿ ಅಕ್ರಮ ವ್ಯವಹಾರ, ಸುಳ್ಳು ಲೆಕ್ಕ, ಅಸಮರ್ಪಕ ನಿರ್ವಹಣೆ ಕಂಡು ಹಿನ್ನೆಲೆಯಲ್ಲಿ ಜವಾಬ್ದಾರಿಯನ್ನು ಇದೀಗ ಅರಣ್ಯ ಇಲಾಖೆಗೆ ವಹಿಸಲಾಗಿದೆ. ಪಾರದರ್ಶಕ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇದಕ್ಕೆ ತಾತ್ಕಾಲಿಕವಾಗಿ (ಆ. 1ರಿಂದ) ಬುಕ್ಕಿಂಗ್​ ಅನ್ನು ಸ್ಥಗಿತಗೊಳಿಸಲಾಗಿದೆ.

*ಗಿರಿ ಚಾರಣ ಪ್ರದೇಶಗಳು

ಚಿಕ್ಕಬಳ್ಳಾಪುರ ಜಿಲ್ಲೆಯ ಸ್ಕಂದಗಿರಿ ಮತ್ತು ಕೈವಾರಬೆಟ್ಟ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಾಕಳಿದುರ್ಗ, ಕೋಲಾರದ ಅಂತರಗಂಗೆ, ತುಮಕೂರಿನ ಸಾವನದುರ್ಗ, ರಾಮನಗರದ ಬಿದುರಕಗಟ್ಟೆ, ಸಾವನದುರ್ಗ, ತುಮಕೂರು ಜಿಲ್ಲೆಯ ರಾಮದೇವರಬೆಟ್ಟ, ಚಿನಾಗ್​ಬೆಟ್ಟ, ಸಿದ್ದರಬೆಟ್ಟಗಳು, ಚಿಕ್ಕಮಗಳೂರಿನ ಎತ್ತಿನಭುಜ, ಕೊಪ್ಪದ ಬಲ್ಲಾಳ ರಾಯನ ದುರ್ಗ, ಬಂಡಾಜೆ ಫಾಲ್ಸ್​, ರಾಣಿಝರಿ ಫಾಲ್ಸ್​, ಬೆಳಗಾವಿಯ ಧಾಮಣಿ ತಿಲಾರಿ, ಕಾಡವ್ಯೂ ಪಾಯಿಂಟ್​, ತಿಲಾರಿ ಹಿನ್ನೀರು, ಸೌತೇರಿಯಾ ಜಲಪಾತ, ಸಡಾ, ಬಳ್ಳಾರಿಯ ಹಂಪಿ ಹೆರಿಟೇಜ್​ ಟ್ರೇಲ್ಟ್​, ಸವೋರ್ದಯ ಹಾಲಸಾಗರ ಸೇರಿದಂತೆ ರಾಜ್ಯದ 23 ಕ್ಕೂ ಹೆಚ್ಚು ಸ್ಥಳಗಳನ್ನು ಗುರುತಿಸಲಾಗಿದೆ.

*ಅವ್ಯವಹಾರದ ಆರೋಪ

ಗಿರಿಚಾರಣಕ್ಕೆ ಟಿಕೆಟ್​ ಬುಕ್ಕಿಂಗ್​ ಆನ್​ ಲೈನ್​ ಮತ್ತು ಅ್​ ಲೈನ್​ ವ್ಯವಸ್ಥೆಯಲ್ಲಿ ಅವ್ಯವಹಾರಗಳು ನಡೆದಿರುವುದರ ಬಗ್ಗೆ ಆರೋಪಗಳು ಕೇಳಿ ಬಂದಿದ್ದು ಇದಕ್ಕೆ ಪಾರದರ್ಶಕ ನಿಯಮಗಳನ್ನು ರೂಪಿಸಲು ಇಲಾಖೆಯು ಮುಂದಾಗಿದೆ.

ಈ ಹಿಂದೆ ವೆಬ್​ ಸೈಟ್​ ಆನ್​ ಲೈನ್​ ನಲ್ಲಿ ಬುಕ್ಕಿಂಗ್​ ಮಾಡುವಾಗ ಬೇಕಾದವರಿಗೆ ಸ್ಲಾಟ್​ಗಳ ಮಾರಾಟ, ಅನಧಿಕೃತವಾಗಿ ಹಣ ವಸೂಲಿ, ಬಂದವರಲ್ಲಿ ಅರ್ಧಕ್ಕೆ ಅರ್ಧ ಜನರಿಗೆ ಟಿಕೆಟ್​ ನೀಡದೇ ನೇರವಾಗಿ ಕಳುಹಿಸುವುದು, ಆದಾಯದಲ್ಲಿ ಸುಳ್ಳು ಲೆಕ್ಕ ಸೇರಿದಂತೆ ನಾನಾ ಆರೋಪಗಳು ಕೇಳಿ ಬಂದಿದ್ದವು. ಇದರ ಬಗ್ಗೆ ಗಿರಿಚಾರಣ ಪ್ರಿಯರು ನೇರವಾಗಿ ಅರಣ್ಯ ಸಚಿವ ಈಶ್ವರ್​ ಖಂಡ್ರೆಗೆ ದೂರು ಸಲ್ಲಿಸಿದ್ದರು. ಇದಕ್ಕೆ ಪ್ರಕರಣದ ತನಿಖೆ ನಡೆಸಲು ಆದೇಶಿಸಿದೆ.

*ರಾಜ್ಯಾದ್ಯಂತ ತಾತ್ಕಾಲಿಕವಾಗಿ ಚಾರಣಕ್ಕೆ ತಡೆ ನೀಡಲಾಗಿದೆ. ಮೊದಲು ಚಾರಣದ ಟಿಕೆಟ್​ ಬುಕ್ಕಿಂಗ್​ ಹೊಣೆಯನ್ನು ಇಕೋ ಟೂರಿಸಂ ನಿರ್ವಹಿಸುತ್ತಿತ್ತು, ಇದೀಗ ಅರಣ್ಯ ಇಲಾಖೆಗೆ ವಹಿಸಲಾಗಿದೆ. ಆನ್​ ಲೈನ್​ ವೆಬ್​ ಸೈಟ್​ ರೂಪಿಸುತ್ತಿರುವುದರ ಜತೆಗೆ ಸೂಕ್ತ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಸಮಯ ಬೇಕಾಗಿದ್ದು ಇದಕ್ಕೆ ತಾತ್ಕಾಲಿಕವಾಗಿ ಚಾರಣ ತಡೆಹಿಡಿಯಲಾಗಿದೆ. ಆದಷ್ಟು ಬೇಗ ಬುಕ್ಕಿಂಗ್​ ವ್ಯವಸ್ಥೆ ಪ್ರಾರಂಭವಾಗಲಿದೆ.

ರಮೇಶ್​, ಉಪಅರಣ್ಯ ಸಂರಕ್ಷಣಾಧಿಕಾರಿ, ಚಿಕ್ಕಬಳ್ಳಾಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net