ಭಾರತದ ಗಗನಯಾನದ ಕನಸಿಗೆ ಹೊಸ ಹೋಪ್

Untitled design (5)
Published on
ಅದೊಂದು ಒಣಗಿದ ಹಿಮನದಿಯ ಬಯಲು ಪ್ರದೇಶ. ಬೆಳ್ಳಂಬೆಳಗ್ಗೆಯೇ ಸೂರ್ಯ ನೆತ್ತಿಯ ಮೇಲೆ ಬಂದು ಸುಡುತ್ತಿದ್ದಾನೆ. ಆ ಬಯಲಿನ ನಡುವೆ ಗುಮ್ಮಟವನ್ನು ಹೊಂದಿರುವ ಎರಡು ದೊಡ್ಡ ಗೂಡುಗಳು. ಆ ಗೂಡಿನಿಂದ ಹೊರಬರಲು ನಿರ್ವಿುಸಿರುವ ಪುಟ್ಟ ಬಾಗಿಲಿನ ಚಿಲಕವನ್ನು ತೆಗೆದು ಒಳಗಿನಿಂದ ಇಬ್ಬರು ಗಗನಯಾನಿಗಳು ಹೊರಬರುತ್ತಿದ್ದಂತೆಯೇ ಅವರಿಗಾಗಿಯೇ ಅಲ್ಲಿ ಕಾದಿದ್ದ ಜನರಿಂದ ಹಷೋದ್ಘಾರ, ಚೀರಾಟ. ಅಷ್ಟಕ್ಕೂ ಆ ಇಬ್ಬರು ಗಗನಯಾನಿಗಳು ಅಂತರಿಕ್ಷಕ್ಕೆ ಹಾರಿದ್ದು ಯಾವಾಗ ಅಂತ ಮಾತ್ರ ಕೇಳಬೇಡಿ. ಯಾಕೆಂದರೆ ಅವರಿಬ್ಬರೂ ಅಂತರಿಕ್ಷಕ್ಕೆ ಇದುವರೆಗೆ ಪಯಣಿಸಲೇ ಇಲ್ಲ. ಹೀಗಿದ್ದರೂ ಅವರು ಭಾರತದ ಭವಿಷ್ಯದ ಅಂತರಿಕ್ಷ ಯೋಜನೆಗಳನ್ನು ಕಾರ್ಯಗತಗೊಳಿಸಲು ನೆರವಾಗುವ ವ್ಯವಸ್ಥೆಯಲ್ಲಿ ಭಾಗವಹಿಸಿದ ಮೊದಲಿಗರಾದರು.

ಕಳೆದ ವಾರವಷ್ಟೇ ಆಚರಿಸಿದ ರಾಷ್ಟ್ರೀಯ ಬಾಹ್ಯಾಕಾಶ ದಿನ ಈ ಬಾರಿ ತುಸು ಹೆಚ್ಚೇ ಸದ್ದು ಮಾಡಿದೆ. ಶುಭಾಂಶು ಶುಕ್ಲರ ಗಗನಯಾನದ ಯಶಸ್ಸು ಈ ವರ್ಷದ ಆಚರಣೆಗೆ ಕಳೆಕಟ್ಟಿದೆ. ಅಂದಹಾಗೆ ಮೇಲೆ ಹೇಳಿದ ಘಟನೆ ನಡೆದಿದ್ದು ಲಡಾಖ್​ನ ತ್ಸೋ ಕರ್ ಕಣಿವೆಯಲ್ಲಿ. ಅಂದು ಆ ಗೂಡುಗಳಿಂದ ಹೊರಬಂದ ಇಬ್ಬರು ಗಗನಯಾನಿಗಳು ಕಳೆದ ಹತ್ತು ದಿನಗಳಿಂದ ಗೂಡಿನೊಳಗೆ ಇದ್ದು ತಮ್ಮ ಯೋಜಿತ ಕಾರ್ಯಕ್ರಮವನ್ನು ಮುಗಿಸಿ ಮತ್ತೆ ಭೂಮಿಯ ವಾತಾವರಣಕ್ಕೆ ಮರಳಿದ್ದರು. ಈ ಪೂರ್ತಿ ಕಾರ್ಯಕ್ರಮ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ), ಅಮೆರಿಕ ಮೂಲದ ಮಾರ್ಸ್ ಸೊಸೈಟಿ, ಬೆಂಗಳೂರು ಮೂಲದ ಖಾಸಗಿ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಾದ ಪ್ರೋಟೋ ಪ್ಲಾನೆಟ್ ಮತ್ತು ಮಹಿಂದ್ರಾ ಕಂಪನಿ ಜಂಟಿಯಾಗಿ ನಡೆಸುತ್ತಿರುವ ಹಿಮಾಲಯದ ಗ್ರಹಗಳ ಅನ್ವೇಷಣೆಯ ಹೊರ ಠಾಣೆ ಅಥವಾ Himalayan Outpost for Planetary Exploration - HOPE (ಹೋಪ್) ಕಾರ್ಯಕ್ರಮದ ಒಂದು ಭಾಗವಾಗಿತ್ತು. ಹೋಪ್ ಎಂಬುದು ಮುಂಬರುವ ದಿನಗಳಲ್ಲಿ ಚಂದಿರ ಮತ್ತು ಮಂಗಳದ ಮೇಲೆ ಮನುಷ್ಯನನ್ನು ಕಳುಹಿಸುವ ಭಾರತದ ಮಹಾತ್ವಾಕಾಂಕ್ಷಿ ಯೋಜನೆಗಳಿಗೆ ಪೂರಕವಾಗಿ ಅಂತರಿಕ್ಷ ಯಾನಿಗಳನ್ನು ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ಸಿದ್ಧಗೊಳಿಸುವ ಒಂದು ಅಣಕು ವ್ಯವಸ್ಥೆ.

ಹೋಪ್​ನ ಮೂಲ ಪರಿಕಲ್ಪನೆ ಡಾ. ಸಿದ್ಧಾರ್ಥ್ ಪಾಂಡೆ ಎಂಬ ಅಭಿಯಂತರರದ್ದು. ನಾಸಾ ಸೇರಿದಂತೆ ಹಲವು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವೈಜ್ಞಾನಿಕ ಸಂಸ್ಥೆಗಳ ಜತೆ ಸಂಶೋಧನಾ ಕಾರ್ಯಗಳಲ್ಲಿ ಪಾಲ್ಗೊಳ್ಳುವ ಸಿದ್ಧಾರ್ಥ್ ಲಡಾಖ್​ನಲ್ಲಿ ಇತ್ತೀಚೆಗೆ ಸಂಶೋಧನೆಯಲ್ಲಿ ತೊಡಗಿದ್ದಾಗ ಅಲ್ಲಿನ ವಾತಾವರಣದ ವೈಪರೀತ್ಯವನ್ನು ಕಂಡು ‘ಇಲ್ಲೇ ಹೀಗಾದರೆ ಅನ್ಯಗ್ರಹಗಳಲ್ಲಿ ಹೇಗಿರಬಹುದು’ ಎಂಬ ಆಲೋಚನೆ ಮನದಲ್ಲಿ ಬಂತು. ಆಗ ಹೊಳೆದದ್ದು ಅನ್ಯಗ್ರಹಗಳ ವಾತಾವರಣವನ್ನು ಭೂಮಿಯಲ್ಲೇ ಸೃಷ್ಟಿಸುವ ಯೋಚನೆ. ಕೂಡಲೇ ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದ ಸಿದ್ಧಾರ್ಥ್ ಅಮೆರಿಕ ಮೂಲದ ಮಾರ್ಸ್ ಸೊಸೈಟಿ ಎಂಬ ಸಂಸ್ಥೆಯೊಡನೆ ಕೈಜೋಡಿಸಿ ಇಂತಹುದೊಂದು ಅಣಕು ವ್ಯವಸ್ಥೆಯನ್ನು ನಿರ್ಮಾಣ ಮಾಡಲು ಅಗತ್ಯವಾದ ತಂತ್ರಜ್ಞರನ್ನು ಒಂದೆಡೆ ಸೇರಿಸಿದರು. ಹೋಪ್​ನಲ್ಲಿ ಅನ್ಯಗ್ರಹಗಳಿಗೆ ಪ್ರಯಾಣಿಸುವ ಗಗನಯಾನಿಗಳನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ಸಿದ್ಧಗೊಳಿಸುವ ಜೊತೆಗೆ ಗಗನಯಾನದ ಯಂತ್ರಗಳನ್ನು ರೂಪಿಸುವ ತಾಂತ್ರಿಕ ವರ್ಗಕ್ಕೂ ಅಣಕು ವ್ಯವಸ್ಥೆಯಲ್ಲಿ ತರಬೇತಿ ನೀಡಿ ಆ ಮೂಲಕ ಬಾಹ್ಯಾಕಾಶದಲ್ಲಿ ಗಗನಯಾನಿಗಳು ಎದುರಿಸುವ ಸವಾಲುಗಳನ್ನು ಮನದಟ್ಟು ಮಾಡಿ ಅಂತಹ ಸವಾಲುಗಳನ್ನು ಸಮರ್ಥವಾಗಿ ಎದುರಿಸಬಲ್ಲ ಒಂದು ಬಲಿಷ್ಠ ತಾಂತ್ರಿಕ ವ್ಯವಸ್ಥೆಯನ್ನು ರೂಪಿಸುವ ದೂರಾಲೋಚನೆ ಇದೆ.

ಡಾ. ಸಿದ್ಧಾರ್ಥ್ ಪಾಂಡೆ ಮತ್ತವರ ತಂಡ ರೂಪಿಸಿರುವ ಇಂತಹುದೊಂದು ವ್ಯವಸ್ಥೆಗೆ ಅನಲಾಗ್ ಮಿಷನ್ ಎಂದು ಹೇಳಲಾಗುತ್ತದೆ. ಇಲ್ಲಿ ಅನ್ಯಗ್ರಹಗಳಲ್ಲಿ ಕಂಡುಬರುವ ಹವಾಮಾನ ಮತ್ತು ವಾತಾವರಣದ ವೈಪರೀತ್ಯಗಳನ್ನು ಕೃತಕವಾಗಿ ಸೃಷ್ಟಿಸಿ ಗಗನಯಾನಕ್ಕೆ ಆಯ್ಕೆಯಾಗಿರುವ ಅಭ್ಯರ್ಥಿಗಳ ದೇಹ ಮತ್ತು ಮನಸ್ಸು ಹೇಗೆ ಹೊಂದಿಕೊಳ್ಳುತ್ತದೆ ಎಂಬುದನ್ನು ಪರೀಕ್ಷಿಸಲಾಗುತ್ತದೆ. ಈ ಪರೀಕ್ಷೆ ಕೇವಲ ಗಗನಯಾನಿಗಳಿಗೆ ಮಾತ್ರವಲ್ಲದೇ ಯಾನದಲ್ಲಿ ಬಳಸುವ ಉಪಕರಣಗಳಿಗೂ ಅನ್ವಯಿಸುತ್ತಿದ್ದು ಅವುಗಳ ಸ್ಪಂದನೆಯ ಆಧಾರದ ಮೇಲೆ ಅಗತ್ಯ ಮಾರ್ಪಾಡುಗಳನ್ನು ಮಾಡಲಾಗುತ್ತದೆ. ಜಾಗತಿಕವಾಗಿ ಕೆಲವೇ ಕೆಲವು ದೇಶಗಳು ಇಂತಹ ಅನಲಾಗ್ ಮಿಷನ್​ಗಳನ್ನು ಹೊಂದಿದ್ದು ಹೋಪ್ ಮೂಲಕ ಇದೀಗ ಭಾರತವೂ ಅಂತಹ ದೇಶಗಳ ಪಟ್ಟಿಗೆ ಸೇರಿಕೊಂಡಿದೆ. ಚಂದ್ರ ಮತ್ತು ಮಂಗಳಯಾನಕ್ಕೆ ತಯಾರಿ ನಡೆಸುತ್ತಿರುವ ದೇಶಗಳೇ ಈ ಪಟ್ಟಿಯಲ್ಲಿ ಎದ್ದುಕಾಣುತ್ತಿದ್ದು ಅಮೆರಿಕದ ನಾಸಾದ ನೀಮೊ ಮತ್ತು ರಾಟ್ಸ್, ಸ್ಪೇನ್​ನ ಹ್ಯಾಬಿಟಾಟ್ ಮಾರ್ಟೆ, ರಷ್ಯಾದ ಸೀರಿಯಸ್ ಇಂತಹ ಕೆಲ ಅನಲಾಗ್ ಮಿಷನ್​ಗಳ ಉದಾಹರಣೆಗಳು. ಇಲ್ಲಿ ಗಮನಿಸಬೇಕಾದ ಇನ್ನೊಂದು ಸಂಗತಿಯೆಂದರೆ ಅನಲಾಗ್ ಮಿಷನ್ ಕೇವಲ ಬಾಹ್ಯಾಕಾಶಕ್ಕೆ ಸೀಮಿತವಾಗಿರದೇ ಆಳಸಮುದ್ರ ಸಂಶೋಧನೆಗಳಿಗೆ ನೆರವಾಗುವಂತೆಯೂ ಕೆಲವನ್ನು ರೂಪಿಸಲಾಗಿದ್ದು ಅಮೆರಿಕ ಮತ್ತು ಸ್ಪೇನ್​ನಂತಹ ಕೆಲ ದೇಶಗಳು ಇಂತಹ ವ್ಯವಸ್ಥೆಯನ್ನು ಹೊಂದಿವೆ.

ಹೋಪ್​ನ ಪರೀಕ್ಷೆಗೆ ಲಡಾಖ್ ತ್ಸೋ ಕರ್ ಕಣಿವೆಯನ್ನೇ ಆಯ್ದುಕೊಳ್ಳಲು ಹಲವು ಕಾರಣಗಳಿವೆ. ಸಮುದ್ರ ಮಟ್ಟದಿಂದ ನಾಲ್ಕೂವರೆ ಸಾವಿರ ಮೀಟರ್ ಎತ್ತರದಲ್ಲಿದ್ದು ಅತಿಶೀತಲ ವಾತಾವರಣ, ಹೆಚ್ಚು ಅತಿನೇರಳೆ ವಿಕಿರಣಕ್ಕೆ ಒಡ್ಡಿಕೊಳ್ಳುವುದರ ಜೊತೆಗೆ ತೀರಾ ಕಡಿಮೆ ಒತ್ತಡ ಕಂಡುಬರುವ ಪ್ರದೇಶವಿದಾಗಿರುವ ಕಾರಣಕ್ಕೆ ಮಂಗಳ ಗ್ರಹಕ್ಕೆ ಅತ್ಯಂತ ಹತ್ತಿರವಾದ ವಾತಾವರಣವನ್ನು ಹೊಂದಿದೆ. ಇದರ ಜೊತೆಗೆ ಇಲ್ಲಿನ ಆಕ್ಸಿಜನ್​ನ ವಿರಳತೆ, ಹವಾಮಾನದ ಏರುಪೇರುಗಳು ಮತ್ತು ತೀರಕಡಿಮೆ ಶುಷ್ಕತೆ ಮಂಗಳನಂತಹ ಅನ್ಯ ಗ್ರಹಗಳಿಗೆ ಭೇಟಿ ನೀಡುವ ಗಗನಯಾನಿಗಳಿಗೆ ಅಲ್ಲಿ ಕಂಡುಬರುವ ಸವಾಲುಗಳ ತದ್ರೂಪಿನಂತಿವೆ. ಹೀಗಾಗಿ ಇಲ್ಲಿ ಸಲ್ಲುವವನು ಅಲ್ಲಿಯೂ ಸಲ್ಲುವವನೆಂದು ವಿಜ್ಞಾನಿಗಳು ನಂಬುತ್ತಾರೆ.

ಹೋಪ್​ನಲ್ಲಿ ಆ. 1ರಿಂದ ಅರಂಭಿಸಿ ಸತತ ಹತ್ತು ದಿನ ಇಬ್ಬರು ಆಯ್ದ ಅಭ್ಯರ್ಥಿಗಳನ್ನು ಇರಿಸಲಾಗಿತ್ತು. ಈ ಪೂರ್ತಿ ಕಾರ್ಯಾಚರಣೆಯಲ್ಲಿ ಒಳಗಿದ್ದ ಎರಡೂ ಅಣಕು ಗಗನಯಾತ್ರಿಗಳಿಗೆ ಹೊರಜಗತ್ತಿನಿಂದ ಸಂಪರ್ಕವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದ್ದು ಅವರಿದ್ದ ಸ್ಥಳದಿಂದ 30 ಕಿಮೀ ದೂರದಲ್ಲಿದ್ದ ಕಂಟ್ರೋಲ್ ರೂಂಗೆ ಕೇವಲ ಸ್ಯಾಟಲೈಟ್ ಫೋನ್ ಮುಖಾಂತರ ಸಂಪರ್ಕ ಕಲ್ಪಿಸಲಾಗಿತ್ತು. ಹೋಪ್​ನಲ್ಲಿ 8 ಮತ್ತು 5 ಮೀಟರ್ ವ್ಯಾಸದ ಎರಡು ಗೋಳಗಳಿದ್ದು ಅವುಗಳ ಒಳಗೆ ಮಾನವಸಹಿತ ಉಪಗ್ರಹದ ರೀತಿಯದ್ದೇ ವ್ಯವಸ್ಥೆಯಿದೆ. ಒಳಗಿರುವ ಅಣಕು ಗಗನಯಾತ್ರಿಗಳಿಗೆ ನೈಜಯಾನಕ್ಕೆ ಹೋದಾಗ ನೀಡುವ ಆಹಾರ, ನೀರಿನ ಬಳಕೆ ಮತ್ತು ಮರುಬಳಕೆ, ಅಲ್ಲಿ ನಡೆಸಲಾಗುವ ಕೆಲ ಪ್ರಯೋಗಗಳನ್ನು ಮಾಡಿಸಿ ಅದಕ್ಕೆ ಅವರ ಸ್ಪಂದನೆ, ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲಾಗುವ ಪರಿಣಾಮಗಳನ್ನು ಸೂಕ್ಷ್ಮವಾಗಿ ಗಮನಿಸಲಾಯಿತು. ಈ ಎಲ್ಲ ಸಂಗತಿಗಳು ಕೇವಲ ಗಗನಯಾನಿಗಳ ಕ್ಷಮತೆಯ ಪರೀಕ್ಷೆಯಾಗಿರದೆ ನೈಜ ಯಾನಕ್ಕೆ ಹೋದಾಗ ಅವರಿಗೆ ಬೇಕಾಗುವ ಆಹಾರ, ನೀರು ಮತ್ತು ಅವರು ಬಳಸುವ ವಿದ್ಯುತ್ ಪ್ರಮಾಣದ ಅರಿವು ವಿನ್ಯಾಸಕಾರರಿಗೆ ಸಿಗಲಿದೆ.

ಭಾರತದ 2027ರ ಯೋಜಿತ ಗಗನಯಾನ ಹಾಗೂ 2040ರ ಚಂದ್ರಯಾನ ಯೋಜನೆಗಳನ್ನು ಮತ್ತಷ್ಟು ಕರಾರುವಾಕ್ಕಾಗಿ ವಿನ್ಯಾಸಗೊಳಿಸಲು ಹೋಪ್ ಬಹಳಷ್ಟು ಉಪಯುಕ್ತವಾಗಲಿದೆ ಎಂಬುದು ವಿಜ್ಞಾನಿಗಳ ಅಂಬೋಣ. ಹೋಪ್ ಫಾರ್ ದ ಬೆಸ್ಟ್, ಅಲ್ಲವೇ?

ಭಾರತದಿಂದ ಒಂದೆಡೆ ಆಕಾಶಕ್ಕೆ ಏಣಿ ಹಾಕುವ ತಯಾರಿ ನಡೆಯುತ್ತಿದ್ದರೆ ಮತ್ತೊಂದೆಡೆ ಸಾಗರಕ್ಕೆ ಪಾತಾಳಗರಡಿ ಇಳಿಸುವ ಯೋಜನೆ ಜಾರಿಯಲ್ಲಿದೆ. ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನಿ ನರೇಂದ್ರ ಮೋದಿ, ಸಮುದ್ರ ಮಂಥನದ ಕುರಿತು ಘೊಷಿಸಿದ ಬೆನ್ನಲ್ಲೇ ಭಾರತದ ಸಾಗರ ವಿಜ್ಞಾನಿಗಳ ತಂಡ ಫ್ರಾನ್ಸ್ಗೆ ಭೇಟಿ ನೀಡಿದೆ. ಈಗಾಗಲೇ ಆ ದೇಶವು ಅಟ್ಲಾಂಟಿಕ್ ಮಹಾಸಾಗರದಲ್ಲಿ ಡುಬ್ಕಿ ಹೊಡೆದು ಸಾಗರದ ಆಳದ ಖನಿಜ ಮತ್ತು ತೈಲದ ಗಣಿಗಾರಿಕೆ ನಡೆಸುವಲ್ಲಿ ಪರಿಣತಿ ಸಾಧಿಸಿದ್ದು ಆ ಅನುಭವವನ್ನು ಬಳಸಿಕೊಳ್ಳಲು ಇದೀಗ ಭಾರತ ಉತ್ಸುಕವಾಗಿದೆ. ಚೆನ್ನೈನ ರಾಷ್ಟ್ರೀಯ ಸಾಗರ ತಂತ್ರಜ್ಞಾನ ಸಂಸ್ಥೆಯ ವಿಜ್ಞಾನಿಗಳು ಭಾರತ-ಫ್ರಾನ್ಸ್ ಒಡಂಬಡಿಕೆಯ ಅಂಗವಾಗಿ ಅಲ್ಲಿನ ಸಾಗರ ತಂತ್ರಜ್ಞಾನ ಸಂಸ್ಥೆ ನಿರ್ವಿುಸಿರುವ ಆಳಸಮುದ್ರ ವಾಹನ ನೌಟೈಲ್​ನಲ್ಲಿ ಸಮುದ್ರದಡಿಯ ದರ್ಶನ ಮಾಡಿ ಬಂದಿದ್ದಾರೆ. ಸಮುದ್ರದ ಮೇಲ್ಮೈಯಿಂದ 5 ಕಿಮೀ ಕೆಳಗೆ ಪಯಣಿಸಿರುವ ವಿಜ್ಞಾನಿಗಳ ಈ ಅನುಭವವು ಭಾರತದ ಪ್ರಥಮ ದೇಸಿ ಆಳಸಮುದ್ರ ವಾಹನ ಮತ್ಸ್ಯ 6000ರ ಯೋಜನೆ ಕಾರ್ಯಗತವಾಗುವುದಕ್ಕೆ ನೆರವಾಗಲಿದೆ. ಅಂದ ಹಾಗೆ ಭಾರತದ ಆಳಸಮುದ್ರ ಸಂಶೋಧನೆ ಮತ್ತು ಗಣಿಗಾರಿಕೆ ಯೋಜನೆಗಳಿಗೆ ನೆರವಾಗಲು ವಿನ್ಯಾಸಗೊಳಿಸಿರುವ ಮತ್ಸ್ಯ 6000 ಆಳಸಮುದ್ರ ವಾಹನವು ಇಸ್ರೋದ ತಾಂತ್ರಿಕ ನೆರವಿನಲ್ಲಿ ನಿರ್ವಣವಾಗಿದ್ದು ಈಗಾಗಲೇ ಹಲವು ಸುತ್ತಿನ ಪರೀಕ್ಷೆಗಳನ್ನು ಮುಗಿಸಿದೆ. 2027ರಲ್ಲಿ ಪೂರ್ಣಪ್ರಮಾಣದಲ್ಲಿ ಕಾರ್ಯರಂಭ ಮಾಡುವ ನಿರೀಕ್ಷೆಯಿರುವ ಮತ್ಸ್ಯ 6000ರಲ್ಲಿ ಮೂರು ಜನ ನಾವಿಕರು ಆರು ಕಿಮೀ ಸಮುದ್ರದಾಳದವರೆಗೆ ಮೈನಸ್ 3 ಡಿಗ್ರಿ ತಾಪಮಾನದಲ್ಲಿಯೂ ಪ್ರಯಾಣಿಸಬಹುದಾಗಿದೆ. ಟೈಟಾನಿಯಮ್ ಮಿಶ್ರಲೋಹದಿಂದ ನಿರ್ವಣವಾಗಿರುವ ಈ ವಾಹನದ ಜೋಡಣೆಗಾಗಿ ಎಲೆಕ್ಟ್ರಾನ್ ಬೀಮ್ ವೆಲ್ಡಿಂಗ್ ತಂತ್ರಜ್ಞಾನವನ್ನು ಬಳಸಲಾಗಿದ್ದು ಅದರಲ್ಲಿ ಅಳವಡಿಸಿರುವ ಲಿಥಿಯಮ್ ಪಾಲಿಮರ್ ಬ್ಯಾಟರಿ 96 ತಾಸು ಕಾರ್ಯನಿರ್ವಹಿಸಲು ಸಕ್ಷಮವಾಗಿದೆ. ಮತ್ಸ್ಯ 6000ರಲ್ಲಿ ಅಳವಡಿಸಿರುವ ಅತ್ಯಾಧುನಿಕ ಜಿಪಿಎಸ್ ಮತ್ತು ಆಳಸಮುದ್ರ ಟೆಲಿಫೋನ್ ವ್ಯವಸ್ಥೆಯನ್ನು ಡಿಆರ್​ಡಿಓ ರೂಪಿಸಿದೆ.

ಆಕಾಶ ಮತ್ತು ಪಾತಾಳಕ್ಕೆ ಲಗ್ಗೆ ಇಡುವತ್ತ ಇದೀಗ ಎಲ್ಲ ದೇಶಗಳ ಚಿತ್ತ ನೆಟ್ಟಿದೆ. ಇದು ಭವಿಷ್ಯದಲ್ಲಿ ಗೇಮ್ ಚೇಂಜರ್ ಎಂಬುದು ಆ ಎಲ್ಲ ದೇಶಗಳ ಲೆಕ್ಕಾಚಾರ. ಆ ನಿಟ್ಟಿನಲ್ಲಿ ಭಾರತವೂ ತನ್ನ ಇನ್ನಿಂಗ್ಸ್ ಆರಂಭಿಸಿದೆ. ಬೋರ್ಡಿನಲ್ಲಿ ಎಷ್ಟು ರನ್ ಬರುವುದೆಂಬುದನ್ನು ಕಾಲವೇ ಹೇಳಲಿದೆ.

(ಲೇಖಕರು ವಿಜ್ಞಾನ, ತಂತ್ರಜ್ಞಾನ ಬರಹಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net