ಕರೊನಾ ಎದುರಿಸಲು ಇಂದು ಮಾರ್ಗಸೂಚಿ ಸಾಧ್ಯತೆ; ಸೋಂಕು ತಡೆಗೆ ಆರೋಗ್ಯ ಇಲಾಖೆ ಸಜ್ಜು

Covid
Published on

ಬೆಂಗಳೂರು: ನೆರೆಯ ಕೇರಳದಲ್ಲಿ ಕೋವಿಡ್ ರೂಪಾಂತರ ತಳಿ ಜೆಎನ್1 ಪತ್ತೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸೋಂಕು ಹರಡದಂತೆ ತಡೆಯಲು ಆರೋಗ್ಯ ಇಲಾಖೆ ಸಜ್ಜಾಗುತ್ತಿದೆ. ಈ ನಿಟ್ಟಿನಲ್ಲಿ ಮಂಗಳವಾರ (ಡಿ.19) ಕೋವಿಡ್ ಮಾರ್ಗಸೂಚಿ ಹೊರಬೀಳುವ ಸಾಧ್ಯತೆ ಇದೆ. ಹೊಸ ರೂಪಾಂತರಿ ತಳಿ ವರದಿ ಹಿನ್ನೆಲೆಯಲ್ಲಿ ಸೋಂಕು ಪತ್ತೆ ಹಾಗೂ ಚಿಕಿತ್ಸೆಗಾಗಿ ಆಸ್ಪತ್ರೆಗಳಲ್ಲಿ ಹಾಸಿಗೆ, ಔಷಧ ಪೂರೈಕೆ ಸೇರಿ ಅಗತ್ಯ ವೈದ್ಯಕೀಯ ಪರಿಕರಗಳ ಖರೀದಿ ಪ್ರಕ್ರಿಯೆಗೆ ಸಿದ್ಧತೆ ನಡೆದಿದೆ. ಇನ್ನು ಎಚ್ಚರಿಕೆ ಕ್ರಮಗಳ ಕುರಿತು ಆರೋಗ್ಯ ಇಲಾಖೆ ಈಗಾಗಲೆ ತಾಂತ್ರಿಕ ಸಲಹಾ ಸಮಿತಿ ಸದಸ್ಯರೊಂದಿಗೆ ಎರಡು ಸುತ್ತಿನ ಸಭೆ ನಡೆಸಿದೆ. ಸಮಿತಿ ನೀಡಿರುವ ಶಿಫಾರಸು ಆಧರಿಸಿ ಮಂಗಳವಾರ ಸಾರ್ವಜನಿಕ ನಿಯಮ ಪಾಲನೆ ಕುರಿತು ಮಾರ್ಗಸೂಚಿ ಹೊರಡಿಸಲಾಗುವುದು ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಹೊಸ ವರ್ಷಕ್ಕೂ ಮಾರ್ಗಸೂಚಿ: ಕ್ರಿಸ್ ಮಸ್ ಹಬ್ಬ ಹಾಗೂ ಹೊಸ ವರ್ಷ ಸಮೀಪಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಒಂದು ವಾರಗಳ ಪ್ರಕರಣಗಳನ್ನು ಆಧರಿಸಿ ಹಬ್ಬ ಹಾಗೂ ವರ್ಷಾಚರಣೆಗೆ ಪ್ರತ್ಯೇಕ ಮಾರ್ಗಸೂಚಿ ಹೊರಬೀಳಲಿದೆ.

ದೇಶದಲ್ಲಿ 1,701 ಸೋಂಕಿತರು: ಭಾರತದಲ್ಲಿ ಕರೊನಾ ವೈರಸ್ ಪ್ರಕರಣ ಮತ್ತೆ ಹೆಚ್ಚಾಗತೊಡಗಿದ್ದು, ಭಾನುವಾರ 335 ಹೊಸ ಪ್ರಕರಣಗಳು ಪತ್ತೆಯಾಗಿದೆ. ಸೋಂಕಿಗೆ ಕೇರಳದಲ್ಲಿ ನಾಲ್ವರು, ಉತ್ತರಪ್ರದೇಶದಲ್ಲಿ ಒಬ್ಬರು ಮೃತಪಟ್ಟಿರುವುದಾಗಿ ವರದಿಯಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 1,701ಕ್ಕೆ ಏರಿಕೆ ಆಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಕೇರಳದಲ್ಲಿ ಪ್ರಸ್ತುತ 1,324 ಕೋವಿಡ್-19 ಸಕ್ರಿಯ ಪ್ರಕರಣಗಳಿವೆ ಎಂಬುದು ಕಳವಳಕಾರಿ ವಿಷಯವಾಗಿದೆ.

ರಾಜ್ಯದಲ್ಲಿ ವಾರದಲ್ಲಿ 81 ಕೇಸ್: ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಕಳೆದೊಂದು ವಾರದಲ್ಲಿ 81 ಸೋಂಕು ಪ್ರಕರಣಗಳು ದೃಢಪಟ್ಟಿವೆ. ಡಿ.12 ರಿಂದ 18ವರೆಗೆ ಕೋವಿಡ್ ಸೋಂಕು ಲಕ್ಷಣ ಹೊಂದಿರುವ 2,619 ಶಂಕಿತರ ಸ್ವಾ್ಯಬ್ ಮಾದರಿ ಸಂಗ್ರಹಿಸಿ ಪರೀಕ್ಷೆ ನಡೆಸಲಾಗಿದ್ದು, ಈ ಪೈಕಿ 81 ಜನ ಸೋಂಕಿಗೆ ಒಳಗಾಗಿದ್ದಾರೆ.

60 ವರ್ಷ ಮೇಲ್ಪಟ್ಟವರಿಗೆ ಮಾಸ್ಕ್ ಕಡ್ಡಾಯ?: ಕೇರಳ ರಾಜ್ಯದಲ್ಲಿ ಕರೊನಾ ಹೊಸ ರೂಪ ಜೆಎನ್1 ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಮುಂಜಾಗ್ರತೆಗೆ ಅಗತ್ಯ ಕ್ರಮ ವಹಿಸಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು. 60 ವರ್ಷ ಮೇಲ್ಪಟ್ಟವರು, ಹೃದಯ ಸಂಬಂಧಿ ಸಮಸ್ಯೆ ಇರುವವರು ಆರೋಗ್ಯದ ದೃಷ್ಟಿಯಿಂದ ಕಡ್ಡಾಯವಾಗಿ ಮಾಸ್ಕ್ ಧರಿಸಿದರೆ ಒಳ್ಳೆಯದು. ಕೋವಿಡ್ ಲಕ್ಷಣಗಳು ಕಂಡುಬಂದಲ್ಲಿ ತಪಾಸಣೆಗೆ ಒಳಗಾಗಬೇಕು. ರಾಜ್ಯದಲ್ಲಿ ಕೋವಿಡ್ ಸ್ಥಿತಿಗತಿ ನೋಡಿಕೊಂಡು ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ಸದ್ಯ ಕೇರಳದಿಂದ ಕರ್ನಾಟಕಕ್ಕೆ ಬರುವವರಿಗೆ ಹಾಗೂ ಶಬರಿಮಲೆ ಯಾತ್ರಾರ್ಥಿಗಳಿಗೆ ಯಾವುದೇ ನಿರ್ಬಂಧ ಹೇರಿಲ್ಲ. ಈ ಸಂಬಂಧ ಕೇಂದ್ರ ಸರ್ಕಾರದ ತಜ್ಞರ ಜತೆ ರ್ಚಚಿಸಲಾಗಿದೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ನೋಡಿಕೊಂಡು ಕ್ರಮಗಳ ಬಗ್ಗೆ ನಿರ್ಧಾರ ಮಾಡಲಾಗುವುದು ಎಂದು ಹೇಳಿದರು. ಕರೊನಾಗೆ ಸಂಬಂಧಿಸಿದಂತೆ ಅಗತ್ಯವಿರುವ ಬೆಡ್, ಆಕ್ಸಿಜನ್, ವೆಂಟಿಲೇ ಟರ್, ಪಿಪಿ ಕಿಟ್, ಮಾಸ್ಕ್ ಸಿದ್ಧಪಡಿಸಲಾಗಿದೆ. ಕೇರಳ ಗಡಿಗೆ ಹೊಂದಿ ಕೊಂಡಿರುವ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ತಪಾಸಣೆ ನಡೆಸಿ ರಾಜ್ಯದ ಒಳಗೆ ಬಿಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net