

GST: ಇಂದಿನಿಂದ ಜಾರಿಗೆ ಬರುತ್ತಿರುವ ಜಿಎಸ್‌ಟಿ ಸುಧಾರಣೆಗಳು ದೇಶದ ಪ್ರತಿಯೊಂದು ಮನೆಯಲ್ಲೂ ನಗುವನ್ನು ಬೆಳಗಿಸುತ್ತವೆ ಎಂದು ಸೋಮವಾರ (ಸೆಪ್ಟೆಂಬರ್,22) ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಮೋದಿ, ದೇಶದ ಮಾರುಕಟ್ಟೆಗಳಿಂದ ಮನೆಗಳವರೆಗೆ, GST ಉತ್ಸವವು ಹಬ್ಬದ ಸಂಭ್ರಮವನ್ನು ತರುತ್ತದೆ. ಅಲ್ಲದೆ, ಕಡಿಮೆ ವೆಚ್ಚಗಳು ಮತ್ತು ಪ್ರತಿ ಮನೆಯಲ್ಲೂ ಪ್ರಕಾಶಮಾನವಾದ ನಗುವನ್ನು ಖಚಿತಗೊಳಿಸುತ್ತದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ. GST ಸುಧಾರಣೆಗಳ ಬಗ್ಗೆ ಪತ್ರಿಕೆಗಳಲ್ಲಿ ಮುಖಪುಟದ ವರದಿಯನ್ನು ಹಂಚಿಕೊಂಡಿದ್ದಾರೆ.
GST ಸುಧಾರಣೆಗಳು ನವರಾತ್ರಿ ಹಬ್ಬದ ಮೊದಲ ದಿನವಾದ ಸೆಪ್ಟೆಂಬರ್ 22 ರಂದು ಜಾರಿಗೆ ಬಂದಿವೆ. GST ಸುಧಾರಣೆಗಳ ಅಡಿಯಲ್ಲಿ, ಹಿಂದಿನ ನಾಲ್ಕು ಹಂತದ ತೆರಿಗೆ ದರ ರಚನೆಯನ್ನು ಸರ್ಕಾರವು ನಾಗರಿಕ ಸ್ನೇಹಿ ಸರಳ ತೆರಿಗೆ ಎಂದು ಪರಿಷ್ಕರಿಸಿದೆ. GSTಯಲ್ಲಿ 18 ಮತ್ತು 5 ಪ್ರತಿಶತದ ಎರಡು-ದರ ರಚನೆಯಾಗಿದೆ.
ಹೊಸ GST ಸುಧಾರಣೆಗಳ ಬಗ್ಗೆ ಭಾನುವಾರ ದೇಶವನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಈ ವರ್ಷದ ಆರಂಭದಲ್ಲಿ ಘೋಷಿಸಲಾದ GST ದರ ಬದಲಾವಣೆಗಳು ಮತ್ತು ಆದಾಯ ತೆರಿಗೆ ಬದಲಾವಣೆಗಳಿಂದಾಗಿ ಭಾರತೀಯರು ₹ 2.5 ಲಕ್ಷ ಕೋಟಿ ಉಳಿತಾಯವಾಗುತ್ತದೆ ಎಂದಿದ್ದಾರೆ.
ದೇಶದ ಜನರು ಈಗ ಹೆಚ್ಚಿನದನ್ನು ಉಳಿಸಲು ಮತ್ತು ಅವರು ಇಷ್ಟಪಡುವದನ್ನು ಖರೀದಿಸಲು ಸಾಧ್ಯವಾಗುತ್ತದೆ. ಈ ಸುಧಾರಣೆಗಳಿಂದಾಗಿ ಯುವಕರು, ರೈತರು, ಮಹಿಳೆಯರು, ಅಂಗಡಿಯವರು, ವ್ಯಾಪಾರಿಗಳು, ಉದ್ಯಮಿಗಳು ಎಲ್ಲರೂ ಉಳಿತಾಯ ಹಬ್ಬದಿಂದ ಪ್ರಯೋಜನವಾಗುತ್ತದೆ. ಈ ಹಬ್ಬದ ಋತುವಿನಲ್ಲಿ ಪ್ರತಿಯೊಬ್ಬರೂ ಸಂತೋಷಪಡಲು ಏನಾದರೂ ಇರುತ್ತದೆ ಎಂದು ಮೋದಿ ಹೇಳಿದ್ದರು.
GST ದರಗಳಲ್ಲಿನ ಕಡಿತವು MSME ಮತ್ತು ಸಣ್ಣ ವ್ಯಾಪಾರಿಗಳು ಲಾಭ ಗಳಿಸಲು ಅನುವು ಮಾಡಿಕೊಡುತ್ತದೆ. ಜನರ ಮಾರಾಟ ಹೆಚ್ಚಾಗುತ್ತದೆ ಮತ್ತು ಕಡಿಮೆ ತೆರಿಗೆ ಪಾವತಿಸಬೇಕಾಗುತ್ತದೆ. ಅಲ್ಲದೆ, ಭಾರತೀಯ ನಿರ್ಮಿತ ಸರಕುಗಳತ್ತ ಹೊಸ ಒತ್ತು ನೀಡಬೇಕು. ಭಾರತೀಯರು ಹೆಮ್ಮೆಯಿಂದ ಸ್ವದೇಶಿ ವಸ್ತುಗಳನ್ನು ಖರೀದಿಸಿದಾಗ ಮಾತ್ರ ದೇಶ ಪ್ರಗತಿ ಸಾಧಿಸುತ್ತದೆ ಎಂದು ಮೋದಿ ಸೂಚಿಸಿದ್ದಾರೆ. (ಏಜೆನ್ಸೀಸ್)