ವಸಿಷ್ಠ ಸಿಂಹ ಜನ್ಮದಿನದಂದೇ ಘೋಷಣೆಯಾಯ್ತು ಹೊಸ ಸಿನಿಮಾ; ಟೈಟಲ್​ ಏನು?

Untitled design - 2023-10-20T151556.180
Published on

ಬೆಂಗಳೂರು: ಬ್ರಹ್ಮ ನಿರ್ದೇಶನದಲ್ಲಿ ಮೂಡಿಬರಲಿರುವ ವಿಭಿನ್ನ ಕಥಾಹಂದರದ ಸಿನಿಮಾಗೆ ಸ್ಯಾಂಡಲ್​ವುಡ್​ನ ಸ್ಟಾರ್​ ನಟ ವಸಿಷ್ಠ ಸಿಂಹ ನಾಯಕರಾಗಿ ಅಭಿನಯಿಸಲಿದ್ದು, ವಸಿಷ್ಠ ಅವರ ಜನ್ಮದಿನದಂದೇ ಚಿತ್ರತಂಡ ಹೊಸ ಸಿನಿಮಾ ಕುರಿತಂತೆ ಅಧಿಕೃತವಾಗಿ ಘೋಷಿಸಿದೆ.

ತಮ್ಮ ರಗಡ್​ ಅಭಿನಯ ಹಾಗೂ ಕಂಠದ ಮೂಲಕವೇ ಕನ್ನಡಿಗರ ಮನ ಗೆದ್ದಿರುವ ವಸಿಷ್ಠ ಸಿಂಹ ಅಕ್ಟೋಬರ್ 19 ರಂದು ತಮ್ಮ 35ನೇ ವಸಂತಕ್ಕೆ ಕಾಲಿಟ್ಟರು. ಜನ್ಮದಿನಕ್ಕೆ ಉಡುಗೊರೆಯಂತೆ ಕ್ರೈಂ-ಥ್ರಿಲ್ಲರ್​ ಸಿನಿಮಾದಲ್ಲಿ ವಸಿಷ್ಠ ನಾಯಕನಾಗಿ ನಟಿಸಲಿದ್ದಾರೆ ಎಂದು ಚಿತ್ರತಂಡ ಘೋಷಿಸಿತು.

ಕಲಾಸೃಷ್ಠಿ ಪ್ರೊಡಕ್ಷನ್ಸ್ ವತಿಯಿಂದ ನಿರ್ಮಾಣವಾಗುತ್ತಿರುವ ಮೊದಲ ಚಿತ್ರದಲ್ಲಿ ವಸಿಷ್ಠ ಹೀರೋ ಆಗಿ ಅಭಿನಯಿಸಲಿದ್ದಾರೆ. ಈ ಚಿತ್ರವನ್ನು "ಸಿದ್ದಿ ಸೀರೆ" ಹಾಗೂ ರಾಗಿಣಿ ಅಭಿನಯದ "ಸಾರಿ" ಕರ್ಮ ರಿಟರ್ನ್ಸ್ ಚಿತ್ರದ ನಿರ್ದೇಶಕ ಬ್ರಹ್ಮ ನಿರ್ದೇಶಿಸಲಿದ್ದಾರೆ. ಕ್ರೈಮ್ ಥ್ರಿಲ್ಲರ್ ಹಾಗೂ ರಿವೆಂಜ್ ಕಥಾಹಂದರ ಹೊಂದಿರುವ ಈ ಚಿತ್ರ ಹಾಲಿವುಡ್ ಸ್ಟೈಲ್​ನಲ್ಲಿ (ನಾನ್ ಲೀನಿಯರ್ ಸ್ಕ್ರೀನ್ ಪ್ಲೇ) ಮೇಕಿಂಗ್ ಇರಲಿದೆ ಎಂದು ಹೇಳಲಾಗಿದೆ.

ಚಿತ್ರದ ಚಿತ್ರೀಕರಣ ಬೆಂಗಳೂರು, ಕೊಡಗು ಮುಂತಾದ ಕಡೆ ನಡೆಯಲಿದ್ದು, ದೀಪಾವಳಿ ಹಬ್ಬ ಕಳೆದ ನಂತರ ಆರಂಭವಾಗಲಿದೆ ಎಂದು ಚಿತ್ರತಂಡ ತಿಳಿಸಿದೆ. ರಾಜೀವ್ ಗಣೇಶನ್ ಛಾಯಾಗ್ರಹಣ ಹಾಗೂ ರಾಘವನ್ ಕಾರ್ತಿಕ್ ಸಂಗೀತ ನಿರ್ದೇಶನ "ಪ್ರೊಡಕ್ಷನ್ ನಂ ೧" ಚಿತ್ರಕ್ಕಿರಲಿದೆ. ಚಿತ್ರದಲ್ಲಿ ಹೆಸರಾಂತ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸದ್ಯ ಚಿತ್ರಕ್ಕೆ ಇನ್ನೂ ಅಧಿಕೃತ ಟೈಟಲ್​ ಇಡದ ಚಿತ್ರತಂಡ ಶೀಘ್ರವೇ ಪ್ರಕಟಿಸಲಿದೆ ಎಂದು ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net