

ನವದೆಹಲಿ: ಕಡಿಮೆ ಬ್ಯಾಲನ್ಸ್, ವಿಳಂಬ ಪಾವತಿ ಅಥವಾ ಕಪ್ಪುಪಟ್ಟಿ ಟ್ಯಾಗ್ಸ್ ಹೊಂದಿರುವವರಿಗೆ ಹೆಚ್ಚಿನ ದಂಡ ವಿಧಿಸುವುದಕ್ಕೆ ಸಂಬಂಧಿಸಿದ ಫಾಸ್ಟ್ಯಾಗ್ನ ಹೊಸ ನಿಯಮಗಳು ಸೋಮವಾರದಿಂದ ಜಾರಿಗೆ ಬರಲಿವೆ. ಹೆದ್ದಾರಿಗಳಲ್ಲಿನ ಟೋಲ್ ಪಾವತಿಯನ್ನು ಸುಗಮಗೊಳಿಸಲು, ವಿವಾದಗಳನ್ನು ಕಡಿಮೆ ಮಾಡಲು ಮತ್ತು ವಂಚನೆಯನ್ನು ತಡೆಗಟ್ಟಲು ರಾಷ್ಟ್ರೀಯ ಪಾವತಿ ನಿಗಮ (ನ್ಯಾಷನಲ್ ಪೇಮೆಂಟ್ ಕಮಿಷನ್ ಆಫ್ ಇಂಡಿಯಾ- ಎನ್ಪಿಸಿಐ) ಮತ್ತು ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ಸೇರಿ ಫಾಸ್ಟ್ಯಾಗ್ ವ್ಯವಸ್ಥೆಗೆ ಕೆಲವು ಪ್ರಮುಖ ಬದಲಾವಣೆಗಳನ್ನು ಮಾಡಿವೆ.
ವಾಹನವು ಟೋಲ್ ದಾಟುವುದಕ್ಕಿಂತ ಮೊದಲು 60 ನಿಮಿಷ ಮತ್ತು ದಾಟಿದ ನಂತರ 10 ನಿಮಿಷ ಫಾಸ್ಟ್ಯಾಗ್ ನಿಷ್ಕ್ರಿಯವಾಗಿದ್ದರೆ, ವಹಿವಾಟು ನಿರಾಕರಣೆ (ಟ್ರಾನ್ಸಾಕ್ಷನ್ ಡಿಕ್ಲೈನ್) ಆಗುತ್ತದೆ. ಅಂತಹ ಪಾವತಿಗಳನ್ನು ‘ಎರರ್ ಕೋಡ್ 176’ ಎಂದು ನಮೂದಿಸಿ ತಿರಸ್ಕರಿಸಲಾಗುತ್ತದೆ. ಇದರ ಹೊರತಾಗಿ, ಚಾರ್ಜ್ಬ್ಯಾಕ್ ಪ್ರಕ್ರಿಯೆ, ಕೂಲಿಂಗ್ ಅವಧಿ ಮತ್ತು ವಹಿವಾಟು ನಿರಾಕರಣೆ ನಿಯಮಗಳಿಗೆ ಸಂಬಂಧಿಸಿದಂತೆಯೂ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ.
ರಾಷ್ಟ್ರೀಯ ವಿದ್ಯುನ್ಮಾನ ಟೋಲ್ ಸಂಗ್ರಹ (ನ್ಯಾಷನಲ್ ಎಲೆಕ್ಟ್ರಾನಿಕ್ ಟೋಲ್ ಕಲೆಕ್ಷನ್- ಎನ್ಇಟಿಸಿ) ವ್ಯವಸ್ಥೆಯ ಹೊಸ ಮಾರ್ಗಸೂಚಿ ಪ್ರಕಾರ, ವಾಹನವು ಟೋಲ್ ರೀಡರ್ ಅನ್ನು ದಾಟಿದ 15 ನಿಮಿಷಗಳ ಬಳಿಕ ಹಣ ಪಾವತಿಯಾದರೆ ಅಂತಹ ಫಾಸ್ಟ್ಯಾಗ್ ಬಳಕೆದಾರರಿಗೆ ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ. ಒಂದು ವೇಳೆ, ವಹಿವಾಟು ವಿಳಂಬವಾಗಿ, ಬಳಕೆದಾರರ ಫಾಸ್ಟ್ಯಾಗ್ ಖಾತೆಯಲ್ಲಿ ಅಗತ್ಯ ಹಣ ಇಲ್ಲದಿದ್ದರೆ ಟೋಲ್ ಆಪರೇಟರ್ಗಳನ್ನು ಹೊಣೆ ಮಾಡಲಾಗುತ್ತದೆ. ಬಳಕೆದಾರನ ಖಾತೆಯಿಂದ ಹಣ ಕಟ್ ಆಗಿದ್ದರೂ ಟೋಲ್ ಕಂಪನಿಯ ಖಾತೆಗೆ ಪಾವತಿಯಾಗಿರದಿದ್ದರೆ ಅಂತಹ ಖಾತೆದಾರರು 15 ದಿನಗಳ ಕೂಲಿಂಗ್ ಅವಧಿ ಮುಗಿದ ಬಳಿಕ ಸಂಬಂಧಿಸಿದವರಿಗೆ ದೂರು ಸಲ್ಲಿಸಬಹುದು.
ಇದುವರೆಗೆ, ಕೆಲವು ಬಳಕೆದಾರರು ತಮ್ಮ ಫಾಸ್ಟ್ಯಾಗ್ ಅನ್ನು ಟೋಲ್ ಬೂತ್ ಬಳಿ ರೀಚಾರ್ಜ್ ಮಾಡಿಕೊಳ್ಳಲು ಮುಂದಾಗುತ್ತಿದ್ದರು. ಅದನ್ನು ತಪ್ಪಿಸಲು ಪ್ರಯಾಣ ಆರಂಭಿಸುವ ಮೊದಲೇ ತಮ್ಮ ಫಾಸ್ಟ್ಯಾಗ್ ಖಾತೆಯಲ್ಲಿ ಸಾಕಷ್ಟು ಬ್ಯಾಲನ್ಸ್ ಇದೆಯೋ ಇಲ್ಲವೋ ಎಂಬುದನ್ನು ಬಳಕೆದಾರರು ಖಚಿತಪಡಿಸಿಕೊಳ್ಳಬೇಕು. ಡಿಡಕ್ಷನ್ನಲ್ಲಿ ವಿಳಂಬ ಆಗುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ವಹಿವಾಟಿನ ಮೇಲೆ ಗಮನ ಇಟ್ಟಿರಬೇಕು.
ಎನ್ಪಿಸಿಐ ಮಾಹಿತಿಯ ಪ್ರಕಾರ, ಕಳೆದ ವರ್ಷದ ನವೆಂಬರ್ನಲ್ಲಿ 359 ದಶಲಕ್ಷದಷ್ಟಿದ್ದ ಫಾಸ್ಟ್ಯಾಗ್ ವಹಿವಾಟುಗಳು ಡಿಸೆಂಬರ್ನಲ್ಲಿ 382 ದಶಲಕ್ಷಕ್ಕೆ ತಲುಪಿದ್ದು ಶೇ. 6ರಷ್ಟು ಬೆಳವಣಿಗೆಯಾಗಿದೆ. ಮೌಲ್ಯ ಕೂಡ 6,070 ಕೋಟಿ ರೂ. ಇದ್ದದ್ದು 6,642 ಕೋಟಿ ರೂ.ಗೆ ತಲುಪಿ ಶೇ. 9ರಷ್ಟು ವೃದ್ಧಿ ದಾಖಲಿಸಿದೆ.