ಬಿಜೆಪಿಯಲ್ಲಿ 10 ಕ್ಷೇತ್ರಗಳಿಗೆ ಹೊಸ ಮುಖ? ಸಮೀಕ್ಷೆ ಆಧರಿಸಿ ವರಿಷ್ಠರ ಕ್ರಮ, ಮೈಸೂರು, ಉತ್ತರಕನ್ನಡ ಹಾಲಿ ಸಂಸದರಿಗೆ ಕೊಕ್ ನಿಶ್ಚಿತ

bjp
Published on

ಬೆಂಗಳೂರು: ದಕ್ಷಿಣಭಾರತದ ರಾಜ್ಯಗಳ ಪೈಕಿ ಕರ್ನಾಟಕದಲ್ಲಿನ ಪ್ರಾಬಲ್ಯ, ಕಳೆದ ಚುನಾವಣೆ ಯಶೋಗಾಥೆ ಮುಂದುವರಿಸಲು ಬಿಜೆಪಿ ವರಿಷ್ಠರು ಪಣತೊಟ್ಟಿದ್ದು, ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ರಾಜ್ಯ ನಾಯಕರಿಗಿಂತ ಹೆಚ್ಚು ತಲೆಕೆಡಿಸಿಕೊಂಡಿದ್ದಾರೆ.

ಟಿಕೆಟ್​ಗಾಗಿ ಆಕಾಂಕ್ಷಿಗಳ ಲಾಬಿ, ಗೊಂದಲ, ತರಹೇವಾರಿ ಒತ್ತಡ ತಂತ್ರಗಳಿಗೆ ಸೊಪು್ಪ ಹಾಕುವ ಲಕ್ಷಣಗಳೇ ಇಲ್ಲ. ಈ ಬಾರಿ ಲೋಕಸಭೆ ಚುನಾವಣೆಗೆ ಕನಿಷ್ಠ 10 ಕ್ಷೇತ್ರಗಳಲ್ಲಿ ಹೊಸ ಮುಖಗಳು ಕಾಣಿಸಿಕೊಳ್ಳುವ ನಿರೀಕ್ಷೆಯಿದೆ. ರಾಜ್ಯ ನಾಯಕರ ಅಭಿಪ್ರಾಯಗಳನ್ನು ಪರಿಗಣಿಸಲಿದ್ದಾರೆ. ಆದರೆ ಕಾರ್ಯಕರ್ತರ ಹಿಮ್ಮಾಹಿತಿ, ಎರಡು ಹಂತದ ಸಮೀಕ್ಷೆ, ಗುಪ್ತದಳ ವರದಿಗಳು, ಸಂಸದರ ಕಾರ್ಯಸಾಧನೆಗೆ ಪ್ರಾಮುಖ್ಯತೆ ನೀಡುವುದು ವರಿಷ್ಠರ ಚಿಂತನೆಯಾಗಿದೆ.

ಕೊಕ್ ನಿಶ್ಚಿತ: ಮೈಸೂರು, ಉತ್ತರಕನ್ನಡ, ಬೆಳಗಾವಿ, ರಾಯಚೂರು, ಬೆಂಗಳೂರು ಉತ್ತರ ಹಾಲಿ ಸಂಸದರಿಗೆ ಕೊಕ್ ನಿಶ್ಚಿತ. ಚಾಮರಾಜನಗರ, ತುಮಕೂರು, ಹಾವೇರಿಗೆ ಬೇರೆ ಆಯ್ಕೆ ಅನಿವಾರ್ಯವಾಗಿದೆ. ಬೀದರ್, ಕೊಪ್ಪಳ, ಚಿತ್ರದುರ್ಗ, ವಿಜಯಪುರ ಹಾಗೂ ದಾವಣಗೆರೆ ಕ್ಷೇತ್ರಗಳಿಗೆ ಬದಲಾವಣೆ ಪರಿಶೀಲನೆ ಮಾಡುತ್ತಿದ್ದರೂ ಪರ್ಯಾಯವಾಗಿ ಸಮರ್ಥ ಉಮೇದುವಾರರ ಕೊರತೆಯಿದೆ.

ಮೈಸೂರಿಗೆ ಪ್ರತಾಪಸಿಂಹ ಬದಲು ರಾಜವಂಶಸ್ತ ಯದುವೀರ್ ಒಡೆಯರ್ ಪರ ಒಲವಿದೆ. ಮನವೊಲಿಸಲು ತೆರೆಮರೆ ಪ್ರಯತ್ನ ನಡೆದಿದ್ದು, ಒಡೆಯರ್ ಒಪ್ಪದಿದ್ದರೆ ಪರ್ಯಾಯ ಅಭ್ಯರ್ಥಿಯನ್ನಾಗಿ ಡಾ.ಮಂಜುನಾಥ್​ರನ್ನು ರೆಡಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.ಉತ್ತರಕನ್ನಡದಲ್ಲಿ ಅನಂತಕುಮಾರ್ ಹೆಗಡೆ ಬದಲಾವಣೆಗೆ ದೆಹಲಿ ನಾಯಕರು ಬಯಸಿದ್ದು, ವಿಶ್ವೇಶ್ವರ ಹೆಗಡೆ ಕಾಗೇರಿ, ಹರಿಪ್ರಕಾಶ್ ಕೋಣೆಮನೆ, ಗೋಪಾಲ ನಾಗರಕಟ್ಟೆ ಹೆಸರುಗಳು ಚರ್ಚೆಯಲ್ಲಿವೆ ಎಂದು ತಿಳಿದಿದೆ. ತುಮಕೂರಿನ ಮೇಲೆ ಮಾಜಿ ಮಂತ್ರಿ ವಿ.ಸೋಮಣ್ಣ ಆಸೆಯಿಟ್ಟುಕೊಂಡಿದ್ದಾರೆ. ಆದರೆ ಸೋಮಣ್ಣ ಸ್ಪರ್ಧಿಸಿದರೆ ಪಕ್ಷಕ್ಕೆ ಹಿನ್ನೆಡೆಯಾಗಲಿದೆ ಎಂಬ ಸಮೀಕ್ಷಾ ವರದಿಯು ಚಿಂತೆಗೀಡು ಮಾಡಿದೆ. ಇದರಿಂದಾಗಿ ಮಂಡ್ಯ ಕ್ಷೇತ್ರವನ್ನು ಪಕ್ಷಕ್ಕೆ ಉಳಿಸಿಕೊಂಡು, ತುಮಕೂರು ಜೆಡಿಎಸ್​ಗೆ ಬಿಟ್ಟುಕೊಡಲು ಯೋಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರಾಜ್ಯ ಪ್ರವಾಸ ಖಚಿತ

ಪ್ರಧಾನಿ ನರೇಂದ್ರ ಮೋದಿ ರಾಜ್ಯ ಪ್ರವಾಸ ಖಚಿತವಾಗಿದೆ. ಶಿವಮೊಗ್ಗ ಸೇರಿ ಹಲವೆಡೆ ಪ್ರವಾಸ ಮಾಡಲಿದ್ದು, ದೊಡ್ಡ ಪ್ರಮಾಣದಲ್ಲಿ ಜನರನ್ನು ಸೇರಿಸುವ ಯೋಚನೆ ಮಾಡುತ್ತಿದ್ದೇವೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು. ರಾಜ್ಯದಲ್ಲಿ ಪಕ್ಷದ ಪರ ವಾತಾವರಣ, ಮೋದಿ ಅಲೆಯಿದೆ. 28 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲುವ ಗುರಿಯಿದೆ. ನಾವು, ಜೆಡಿಎಸ್ ಸೇರಿ 28ರಲ್ಲಿ 25 ಸ್ಥಾನಗಳನ್ನು ಗೆಲ್ಲುವುದು ನಿಶ್ಚಿತವೆಂದು ಬಿ.ಎಸ್.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಪ್ರಧಾನಿ ನರೇಂದ್ರ ಮೋದಿ ಹೆಸರಿನಲ್ಲಿ ನಾನು ಎರಡು ಬಾರಿ ಗೆದ್ದಿರುವೆ. ನನ್ನ ಪಾಲಿಗೆ ಹಾಗೂ ಪಕ್ಷದ ಪಾಲಿಗೆ ಅವರು ದೇವರಿದ್ದಂತೆ. ಅಧಿದೇವತೆ ಚಾಮುಂಡೇಶ್ವರಿ ತಾಯಿ, ಕಾವೇರಿ ತಾಯಿ ಹಾಗೂ ಮೋದಿ ಅವರ ಆಶೀರ್ವಾದ ನನ್ನ ಮೇಲೆ ಇದೆ. ಈಗ ಮೂರನೇ ಬಾರಿಯೂ ಅವರ ಹೆಸರಿನಲ್ಲೇ ಗೆಲ್ಲುತ್ತೇನೆ.

| ಪ್ರತಾಪ್ ಸಿಂಹ ಸಂಸದ

ಜೆಡಿಎಸ್ ಜತೆ ಸೀಟು ಹಂಚಿಕೆ ಫೈನಲ್

ಪಕ್ಷದ ಕೇಂದ್ರೀಯ ಚುನಾವಣೆ ಸಮಿತಿ ಸಭೆಯಲ್ಲಿ ಪಾಲ್ಗೊಳ್ಳಲು ದೆಹಲಿಗೆ ತೆರಳಿದ ಆರ್.ಅಶೋಕ್ ಪ್ರತ್ಯೇಕವಾಗಿ ಸುದ್ದಿಗಾರರೊಂದಿಗೆ ಮಾತನಾಡಿ, ಮಿತ್ರಪಕ್ಷ ಜೆಡಿಎಸ್​ಗೆ ಸೀಟುಗಳ ಹಂಚಿಕೆ ಹಾಗೂ ಕ್ಷೇತ್ರಗಳ ಹೊಂದಾಣಿಕೆ ಕೂಡ ಫೈನಲ್ ಆಗಲಿದೆ ಎಂದರು. ಮೊದಲ ಸುತ್ತಿನ ಸಭೆಯಲ್ಲಿ ಶೇ.80 ಕ್ಷೇತ್ರಗಳ ಚರ್ಚೆ ಮುಗಿದಿದ್ದು, ಉಳಿದ ಕ್ಷೇತ್ರಗಳ ಚರ್ಚೆಯಾಗಿ ಪಕ್ಷದ ರಾಜ್ಯ ಉಮೇದುವಾರರ ಪಟ್ಟಿ ಸಿದ್ಧವಾಗಲಿದೆ. ಸಮೀಕ್ಷಾ ವರದಿಗಳು, ಕಾರ್ಯಕರ್ತರ ಅಭಿಪ್ರಾಯ, ಕಾರ್ಯಸಾಧನೆ ಆಧರಿಸಿ ಅಭ್ಯರ್ಥಿಗಳನ್ನು ವರಿಷ್ಠರು ಆಯ್ಕೆ ಮಾಡಲಿದ್ದು, ಕೆಲವು ಕ್ಷೇತ್ರಗಳು ಕಗ್ಗಂಟಾಗಿರುವುದು ನಿಜ. ಆದರೆ ಸರ್ವಸಮ್ಮತ ತೀರ್ವನವಾಗಲಿದೆ ಎಂದು ಆರ್.ಅಶೋಕ್ ಸಮರ್ಥಿಸಿಕೊಂಡರು.

ರಾಜ್ಯದ ಐದು ಕಡೆ ಮೋದಿ ಪ್ರಚಾರ

ಹುಬ್ಬಳ್ಳಿ: ಧಾರವಾಡ ಸೇರಿ ರಾಜ್ಯದ ಐದು ಕಡೆ ಪ್ರಧಾನಿ ನರೇಂದ್ರ ಮೋದಿ ಪ್ರವಾಸ ಮಾಡಲಿದ್ದಾರೆ. ನಿನ್ನೆ ರಾತ್ರಿ ಈ ಬಗ್ಗೆ ಮಾಹಿತಿ ಬಂದಿದ್ದು, ಎರಡು ದಿನದಲ್ಲಿ ಜಾಗ ಅಂತಿಮಗೊಳಿಸಲಾಗುವುದು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು. ಸೊ ಈ ಹಿಂದೆ ಮೋದಿ ಧಾರವಾಡಕ್ಕೆ ಬಂದಾಗ ಐತಿಹಾಸಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಟಿಕೆಟ್ ಘೊಷಣೆ ಆದ ಬಳಿಕ ಅವರು ಬರಲಿದ್ದಾರೆ ಎಂದರು. ಮೈತ್ರಿಯಿಂದ ಬಿಜೆಪಿ ಹಾಗೂ ಜೆಡಿಎಸ್​ಗೆ ಲಾಭ ಆಗಲಿದೆ. ನಾವು ರಾಜ್ಯದ 28 ಕ್ಷೇತ್ರಗಳಲ್ಲೂ ಗೆಲ್ಲುತ್ತೇವೆ ಎಂದರು.

16ಕ್ಕೆ ಕಲಬುರಗಿ, 17ಕ್ಕೆ ಶಿವಮೊಗ್ಗ: ಮಾ.16ರಂದು ಕಲಬುರಗಿ ಗ್ರಾಮಾಂತರ, ನಗರ, ಬೀದರ್ ಜಿಲ್ಲಾ ಕಾರ್ಯಕರ್ತರ ಮತ್ತು ಸಾರ್ವಜನಿಕರ ಬೃಹತ್ ಸಮಾವೇಶದಲ್ಲಿ ಪ್ರಧಾನಿ ಮೋದಿ ಪಾಲ್ಗೊಳ್ಳಲಿದ್ದಾರೆ. ಮಾ.17ರ ಮಧ್ಯಾಹ್ನ 2ಕ್ಕೆ ಶಿವಮೊಗ್ಗದ ಹಳೆಯ ಜೈಲು ಆವರಣದಲ್ಲಿ ಮೋದಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಅನಂತ ಹೆಗಡೆ ವಿರುದ್ಧ ಬಿಜೆಪಿ ಕೆಂಡ

ಬೆಂಗಳೂರು: ಲೋಕಸಭೆ ಚುನಾವಣೆ ಅಭ್ಯರ್ಥಿಗಳ ಆಯ್ಕೆಗೆ ವರಿಷ್ಠರ ಚರ್ಚೆ, ಆಕಾಂಕ್ಷಿಗಳ ತುಮುಲ, ಆಂತರಿಕ ಒತ್ತಡದ ನಡುವೆ ಸಂಸದ ಅನಂತಕುಮಾರ ಹೆಗಡೆ ಸಿಡಿಸಿದ ಕಿಡಿಗೆ ಬಿಜೆಪಿ ನಿಗಿನಿಗಿ ಕೆಂಡವಾಗಿದೆ. ಸಂವಿಧಾನದ ಕುರಿತು ಮತ್ತೊಮ್ಮೆ ನೀಡಿದ ಹೇಳಿಕೆಯು ವಿವಾದ ಸೃಷ್ಟಿಸಿದೆ. ಈ ಹಿಂದೆ ಬದಲಾವಣೆ ಪದ ಬಳಸಿದ್ದರು, ಈ ಬಾರಿ ತಿದ್ದುಪಡಿ ಎಂದಿದ್ದಾರೆ. ಆದರೂ ಸಂವಿಧಾನದ ಕುರಿತ ಮಾತಾಗಿರುವ ಕಾರಣ ವಿವಾದ ಹುಟ್ಟಿಹಾಕಿದ್ದು, ಕಾಂಗ್ರೆಸ್ ಕೈಗೆ ಮತ್ತದೇ ಅಸ್ತ್ರ ದೊರೆತಿದೆ. ಈ ಬಾರಿ ಟಿಕೆಟ್ ಕೈತಪು್ಪವ ಸುಳಿವು ಸಿಕ್ಕಿರುವುದರಿಂದ ಪ್ರತೀಕಾರಕ್ಕೆ ಮುಂದಾಗಿದ್ದಾರೆ ಎಂದು ಪಕ್ಷದ ಮೂಲಗಳು ಶಂಕಿಸಿವೆ.

ಹೆಚ್ಚಿದ ಒತ್ತಡ: ಪಕ್ಷಕ್ಕೆ ಮುಜುಗರ, ವಿಪಕ್ಷಕ್ಕೆ ಆಹಾರ ಕೊಟ್ಟ ಹೇಳಿಕೆಯಿಂದಲೇ 2018ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಬೆಲೆ ತೆತ್ತಿದೆ. ಕಹಿ ಅನುಭವ ಗೊತ್ತಿದ್ದೂ ಪಕ್ಷಕ್ಕೆ ತಿರುಗುಬಾಣವಾಗುವ ಹೇಳಿಕೆ ನೀಡಿರುವ ಹೆಗಡೆಯವರನ್ನು ಹೊರ ಹಾಕಲು ಪಕ್ಷದೊಳಗೆ ಒತ್ತಡ ಹೆಚ್ಚತೊಡಗಿದೆ. ಹೆಗಡೆ ಹೇಳಿಕೆ ಮುಂದಿಟ್ಟುಕೊಂಡು ಬಿಜೆಪಿಯನ್ನು ಕಾಂಗ್ರೆಸ್ ನಾಯಕರು ಹಣಿಯುತ್ತಿದ್ದಾರೆ. ರಹಸ್ಯ ಕಾರ್ಯಸೂಚಿ ಹೆಗಡೆ ಬಾಯಿಯಿಂದ ಬಿಜೆಪಿ, ಆರೆಸ್ಸೆಸ್ ಹೇಳಿಸಿವೆ ಎನ್ನುವ ಮೂಲಕ ನೇರ ಒತ್ತಡ ತಂತ್ರ ಪ್ರಯೋಗಿಸಿದ್ದಾರೆ. ಹೆಗಡೆ ಪಕ್ಷದ ಒಳಗಿದ್ದರೂ ಹೊರ ಹೋದರೂ ಚುನಾವಣಾ ರಾಜಕೀಯ ಲಾಭದ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ಹೆಜ್ಜೆಯಿಟ್ಟಿದೆ. ಹೇಳಿಕೆ ವೈಯಕ್ತಿಕ ಅನ್ನುವುದಾದರೆ ಹೆಗಡೆಯವರನ್ನು ಪಕ್ಷದಲ್ಲಿ ಇನ್ನೂ ಉಳಿಸಿಕೊಂಡಿದ್ದೇಕೆ? ಎಂದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರಶ್ನಿಸಿ, ಬಿಜೆಪಿಗೆ ಕ್ರಮಕೈಗೊಳ್ಳುವ ಅನಿವಾರ್ಯತೆ ಸೃಷ್ಟಿಸಿದ್ದಾರೆ.

ಕಮಲಪಡೆ ಕಸರತ್ತು

ಚುನಾವಣೆ ಹೊಸ್ತಿಲಲ್ಲಿ ಎದುರಾಗಿರುವ ಸಂಕಟದಿಂದ ಪಾರಾಗಲು ಕಮಲಪಡೆ ಕಸರತ್ತು ನಡೆಸಿದ್ದು, ಹೆಗಡೆ ಹೇಳಿಕೆ ವೈಯಕ್ತಿಕವೆಂದು ಪದೇಪದೆ ಸ್ಪಷ್ಟನೆ ನೀಡಿ ಅಂತರ ಕಾಯ್ದುಕೊಳ್ಳಲು ಯತ್ನಿಸುತ್ತಿದೆ. ಹೇಳಿಕೆಯನ್ನು ಗಮನಿಸಿದ ನಾಯಕರು ಹೆಗಡೆಗೆ ಸಮಜಾಯಿಷಿ ಕೇಳುವ ಮೂಲಕ ವಿವಾದದ ಕಾವು ತಣ್ಣಗಾಗಿಸಲು ಪ್ರಯತ್ನಿಸಿದ್ದಾರೆ. ಈ ಹಿಂದೆ ಇದೇ ರೀತಿಯ ಹೇಳಿಕೆಗಾಗಿ ಪ್ರಧಾನಿ ಮೋದಿಯವರು ಸದನಕ್ಕೆ ಕರೆಸಿ ಹೆಗಡೆ ಕ್ಷಮೆ ಕೇಳಿಸಿದ್ದನ್ನು ರಾಜ್ಯ ನಾಯಕರು ನೆನಪಿಸಿದ್ದಾರೆ.

ಸಂವಿಧಾನದ ಕುರಿತು ಸಂಸದ ಅನಂತ ಕುಮಾರ್ ಹೆಗಡೆ ಹೇಳಿಕೆಗೂ ಬಿಜೆಪಿಗೂ ಸಂಬಂಧವಿಲ್ಲ. ರಾಷ್ಟ್ರೀಯ ನಾಯಕರು ಇದನ್ನು ಗಮನಿಸಿ ಹೆಗಡೆ ಅವರಿಂದ ಸ್ಪಷ್ಟನೆ ಕೇಳಿದ್ದಾರೆ.

| ಪಿ.ರಾಜೀವ್ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ

ಕೆನರಾ ಸಂಸದರು ಸಂವಿಧಾನ ತಿದ್ದುಪಡಿ ಮಾಡುವುದಾಗಿ ಹೇಳಿರುವುದರಲ್ಲಿ ತಪ್ಪಿಲ್ಲ. ಸಂವಿಧಾನದಲ್ಲಿಯೇ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದೆ. ಆದರೆ ಅವರು ಹಿಂದೆ ನೀಡಿದ್ದ ಹೇಳಿಕೆಯಿಂದ ಗೊಂದಲ ಉಂಟಾಗುತ್ತಿದೆ.

| ಸಿ.ಟಿ.ರವಿ ಮಾಜಿ ಸಚಿವ

ಬಿಜೆಪಿ ಆಂತರಿಕ ಧ್ವನಿಯನ್ನು ಸಂಸದ ಅನಂತಕುಮಾರ್ ಹೆಗಡೆ ಬಹಿರಂಗಪಡಿಸಿದ್ದಾರೆ. ಈ ರೀತಿ ಹೇಳಿಕೆ ಇದೇ ಮೊದಲಲ್ಲ. ಬಿಜೆಪಿಯವರಿಗೆ ಸಂವಿಧಾನದ ಬಗ್ಗೆ ಗೌರವವಿದ್ದರೆ ಹೆಗಡೆಯವರನ್ನು ಉಚ್ಚಾಟಿಸಬಹುದಾಗಿತ್ತು.

| ಡಿ.ಕೆ.ಶಿವಕುಮಾರ್ ಡಿಸಿಎಂ

ಸಂವಿಧಾನದ ಬಗ್ಗೆ ಕೀಳುಮಟ್ಟದ ಹೇಳಿಕೆ ಕೊಡುತ್ತಿರುವ ಸಂಸದ ಅನಂತಕುಮಾರ್ ವಿರುದ್ಧ ಕ್ರಮ ಜರುಗಿಸಬೇಕು.

| ಡಾ. ಜಿ.ಪರಮೇಶ್ವರ ಗೃಹ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net