

ನ್ಯಾಷನಲ್ ಎಜುಕೇಷನ್ ಸೊಸೈಟಿ ಜಯನಗರದಲ್ಲಿ ನೂತನವಾಗಿ ಡಾ. ಎಚ್.ಎನ್ ನ್ಯಾಷನಲ್ ಕಾಲೇಜ್ ಆಫ್ ಇಂಜಿನಿಯರಿಂಗ್ ಪ್ರಾರಂಭಿಸುತ್ತಿದ್ದು, ಪ್ರಸಕ್ತ ವರ್ಷದಿಂದ ಇಂಜಿನಿಯರಿಂಗ್, ಎಂಬಿಎ ಮತ್ತು ಎಂಸಿಎ ಗೆ ದಾಖಲಾತಿಯನ್ನು ಪ್ರಾರಂಭಿಸಲಾಗುವುದು ಎಂದು ನ್ಯಾಷನಲ್ ಎಜುಕೇಷನ್ ಸೊಸೈಟಿ ಕರ್ನಾಟಕದ ಅಧ್ಯಕ್ಷ ಡಾ. ಹೆಚ್ ಎನ್ ಸುಬ್ರಮಣ್ಯ ಹೇಳಿದರು.
ಡಾ. ಎಚ್ ನರಸಿಂಹಯ್ಯ ಅವರ ಆದರ್ಶಗಳ ಮೇಲೆ ನಡೆಯುತ್ತಿರುವ ಶೈಕ್ಷಣಿಕ ಸಂಸ್ಥೆಗಳ ಮೂಲಕ ಮುಂದಿನ ಪೀಳಿಗೆಗೆ ಅನುಕೂಲವಾಗುವ ಶಿಕ್ಷಣ ನೀಡುವ ನಿಟ್ಟಿನಲ್ಲಿ ಇಂಜಿನೀಯರಿಂಗ್ ಕಾಲೇಜನ್ನು ಪ್ರಾರಂಭಿಸಿದ್ದೇವೆ. ಎಂದು ಕಾಲೇಜಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನ್ಯಾಷನಲ್ ಎಜುಕೇಷನ್ ಸೊಸೈಟಿ ಕರ್ನಾಟಕದ ಗೌರವ ಕಾರ್ಯದರ್ಶಿ ವೆಂಕಟಶಿವಾರೆಡ್ಡಿ ಮಾತನಾಡಿ, ನ್ಯಾಷನಲ್ ಎಜುಕೇಷನ್ ಸೊಸೈಟಿ ಕಳೆದ 107 ವರ್ಷಗಳಿಂದ ಸಾಂಪ್ರದಾಯಿಕವಾದ ಶಿಕ್ಷಣ ನೀಡುತ್ತಾ ಬಂದಿದ್ದು, ಸಧೃಡ ಸಮಾಜವನ್ನು ಕಟ್ಟುವಲ್ಲಿ ಯಶಸ್ವಿಯಾಗಿದೆ. ನ್ಯಾಷನಲ್ ಶಾಲಾ-ಕಾಲೇಜುಗಳು ಹಲವಾರು ಮುಖ್ಯೋಪಾಧ್ಯಾಯರು ಮತ್ತು ಪ್ರಾಂಶುಪಾಲರುಗಳನ್ನು ಕಂಡಿದೆ. ಡಾ. ಎಚ್.ಎನ್. ಅರ್ಥಾತ್ ಡಾ. ಎಚ್. ನರಸಿಂಹಯ್ಯ ಈ ಕಾಲೇಜಿನ - ಸಂಸ್ಥೆಯ ಅಧ್ಯಾಪಕ - ಪ್ರಾಂಶುಪಾಲ - ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದು, ಸಂಸ್ಥೆಯ ಸುವರ್ಣಯುಗ ಎಂದು ಹೇಳಿದರು.
ದ ನ್ಯಾಷನಲ್ ಕಾಲೇಜು ಜಯನಗರದ ಅಧ್ಯಕ್ಷ ಡಾ ಪಿ.ಎಲ್ ವೆಂಕಟರಾಮ ರೆಡ್ಡಿ ಮಾತನಾಡಿ, ಆಧುನಿಕ ಜಗತ್ತಿನ ಮುಂಚೂಣಿ ತಂತ್ರಜ್ಞಾನದಲ್ಲಿ ಉನ್ನತ ಶಿಕ್ಷಣವನ್ನು ನೀಡುವ ಮೂಲಕ, ಅತ್ಯುತ್ತಮ ತಂತ್ರಜ್ಞರನ್ನು ಸಮಾಜಕ್ಕೆ ನೀಡುವ ಉದ್ದೇಶದಿಂದ ಸಂಸ್ಥೆಯು 2024ನೇ ವರ್ಷದಿಂದ ಇಂಜಿನಿಯರಿಂಗ್ ಕಾಲೇಜು ಆರಂಭಿಸಲಾಗಿದೆ. ಸಂಸ್ಥೆಯ ಎಲ್ಲಾ ಪದಾಧಿಕಾರಿಗಳು, ಅಧ್ಯಾಪಕರು, ಹಿತೈಷಿಗಳ ಬೆಂಬಲದೊಂದಿಗೆ ಅತ್ಯಲ್ಪ ಅವಧಿಯಲ್ಲಿ ಅನುಮತಿ ಪಡೆಯುವಲ್ಲಿ ಯಶಸ್ವಿಯಾಗಿದ್ದು, ವಿಟಿಯು ಹಾಗೂ ಕರ್ನಾಟಕ ಸರಕಾರದಿಂದ ಅಗತ್ಯ ಅನುಮತಿಯನ್ನು ಪಡೆದುಕೊಂಡಿದೆ ಎಂದರು.
ಪ್ರಸಕ್ತ ಶೈಕ್ಷಣೀಕ ವರ್ಷದಿಂದ ಕಂಪ್ಯೂಟರ್ ಸೈನ್ಸ್‌ನ 126, ಇನ್ಪರ್‌ಮೇಶನ್ ಸೈನ್ಸ್‌ನ 120, ಆರ್ಟಿಫೀಶಿಯಲ್ ಇಂಟಲಿಜೆನ್ಸ್‌ನ 60, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್‌ನ 60, ಎಂಬಿಎ ನ 120 ಮತ್ತು ಎಂಸಿಎ ಯ 120 ಸೀಟುಗಳನ್ನು ತುಂಬಲಾಗುವುದು. ಉತ್ತಮ ಶೈಕ್ಷಣಿಕ ಹಿನ್ನಲೆ ಹೊಂದಿರುವ ವಿದ್ಯಾರ್ಥಿಗಳಿಗೆ ಶುಲ್ಕದಲ್ಲಿ ರಿಯಾಯತಿಯನ್ನು ನೀಡಲಾಗುವುದು ಎಂದು ಹೇಳಿದರು. ಸೊಸೈಟಿಯ ಖಚಾಂಚಿ ತಲ್ಲಂ ದ್ವಾರಾಕಾನಾಥ್, ಬಸವನಗುಡಿ ನ್ಯಾಷನಲ್ ಡಿಗ್ರಿ ಕಾಲೇಜಿನ ಅಧ್ಯಕ್ಷ ಸುಧಾಕರ್, ನ್ಯಾಷನಲ್ ಇಂಗ್ಲೀಷ್ ಶಾಲೆಯ ಚೇರ್‌ಪರ್ಸನ್ ಭಾವನಾ, ಬಸವನಗುಡಿ ನ್ಯಾಷನಲ್ ಪಿಯು ಕಾಲೇಜಿನ ಅಧ್ಯಕ್ಷ ರಾಮ್ ಮೋಹನ್ ಮತ್ತಿತರರಿದ್ದರು.