

ನವದೆಹಲಿ: ಈಶಾನ್ಯ ದೆಹಲಿಯ ಚಾಂದ್ಬಾಘ್ ಹಿಂಸಾಚಾರದ ಗಲಭೆಯಲ್ಲಿ ಭಾಗಿಯಾಗಿದ್ದ ಆರೋಪಿ ತಾಹಿರ್ ಹುಸೇನ್ ಸೋದರ ಶಾ ಆಲಮ್ನನ್ನು ಪೊಲೀಸರು ಬಂಧಿಸಿದ್ದಾರೆ. ಈತ ಪೊಲಿಸರು ಬೆನ್ನು ಬಿದ್ದಿರುವ ವಿಷಯ ತಿಳಿದು ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದ.
ಆಮ್ ಆದ್ಮಿ ಪಕ್ಷದ ಉಚ್ಚಾಟಿತ ಪಾಲಿಕೆ ಸದಸ್ಯ ತಾಹೀರ್ ಹುಸೇನ್ ಸಹೋದರ ಆಲಮ್ನನ್ನು ಬಂಧಿಸಿದ ದೆಹಲಿ ಪೊಲೀಸರು, ಶಾ ಆಲಂ ನಿವಾಸದ ಮೇಲೆ ದಾಳಿ ನಡೆಸುತ್ತಿದ್ದಾರೆ. ದೆಹಲಿ ಕ್ರೈಂ ಬ್ರಾಂಚ್ ಪೊಲೀಸರು ಆಲಮ್ನನ್ನು ವಿಚಾರಣೆ ನಡೆಸುತ್ತಿದ್ದು ಅಂಕಿತ್ ಶರ್ಮಾ ಕೊಲೆ ಬಗ್ಗೆಯೂ ತನಿಖೆ ನಡೆಸಿದ್ದಾರೆ. ಚಾಂದ್ಬಾಗ್ನಲ್ಲಿ ಹಿಂಸಾಚಾರ ಬುಗಿಲೆದ್ದ ವೇಳೆ ಆಲಮ್ ಅಲ್ಲಿ ಉಪಸ್ಥಿತನಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ನಿನ್ನೆ ಭಾನುವಾರ (ಮಾ.08) ತಾಹೀರ್ ತಂದೆ, ಮಗ ಮತ್ತು ಕೆಲ ನೆರೆಹೊರೆಯವರನ್ನು ವಶಕ್ಕೆ ಪಡೆದಿದ್ದರು. ಇವರ ಮೇಲೆ ಈಶಾನ್ಯ ದೆಹಲಿ ಹಿಂಸಾಚಾರದ ಹಾಗೂ ಪೊಲೀಸ್ ಇಂಟೆಲಿಜೆನ್ಸ್ ಬ್ಯೂರೋ ಅಧಿಕಾರಿ ಅಂಕಿತ್ ಶರ್ಮಾ ಅವರ ಹತ್ಯೆ ಪ್ರಕರಣದಲ್ಲಿ ಭಾಗವಹಿಸಿರುವ ಆರೋಪವಿದೆ.
ತಾರಿಕ್ ಹುಸೇನ್, ಲಿಖಾಯತ್, ರಿಯಾಸತ್ ಮತ್ತು ತಾರಿಕ್ ರಿಜ್ವಿ ಎಂಬುವವರನ್ನು ಬಂಧಿಸಿದ್ದರು. ಅಲ್ಲದೆ ತಾಹಿರ್ ಪತ್ನಿಯನ್ನೂ ಈ ಸಂಬಂಧ ವಿಚಾರಣೆಗೊಳಪಡಿಸಲಾಗಿದೆ.
ಹಿಂಸಾಚಾರದ ವೇಳೆ ಹತ್ಯೆಯಾಗಿದ್ದ ಅಧಿಕಾರಿ ಅಂಕಿತ್ ಶರ್ಮಾ ಪ್ರಕರಣ ಸಂಬಂಧ ಆಪ್ ಪಕ್ಷದ ಉಚ್ಚಾಟಿತ ಕೌನ್ಸಿಲರ್ ತಾಹಿರ್ ಹುಸೇನ್ನನ್ನು ಮಾರ್ಚ್ 5ರಂದು ಪೊಲೀಸರು ಬಂಧಿಸಿದ್ದರು. ಬಂಧನಕ್ಕೂ ಮುನ್ನ ಪೊಲೀಸರ ಕಣ್ತಪ್ಪಿಸಿದ್ದ ತಾಹೀರ್, ಮುಸ್ತಾಬಾದ್‌ನ ನೆಹರೂ ವಿಹಾರ್‌ಗೆ ಓಡಿಹೋಗಿದ್ದೆ, ನ್ಯಾಯಾಲಯದಲ್ಲಿ ಶರಣಾಗಲು ಬರುವ ಮೊದಲು ಎರಡು ದಿನ ಓಖ್ಲಾದಲ್ಲಿದ್ದೆ ಎಂದು ವಿಚಾರಣೆ ವೇಳೆ ತಾಹೀರ್ ಪೊಲೀಸರಿಗೆ ತಿಳಿಸಿದ್ದಾನೆ.
ಮೃತ ಅಧಿಕಾರಿ ಅಂಕಿತ್ ಅವರ ತಂದೆ ರವೀಂದ್ರ ಕುಮಾರ್ ಅವರು ತನ್ನ ಮಗನ ಸಾವಿನ ಪ್ರಕರಣದ ಬಗ್ಗೆ ದೂರು ದಾಖಲಿಸಿದ್ದರು. ಕೊಲೆ ಪ್ರಕರಣದಲ್ಲಿ ತಾಹಿರ್ ಕುಟುಂಬದ ಕೈವಾಡದ ಬಗ್ಗೆ ದೂರಿದ್ದರು. ಫೆ. 26ರಂದು ಚಾಂದ್ಬಾಘ್ ಪ್ರದೇಶದಲ್ಲಿ ಚರಂಡಿಯಲ್ಲಿ ಶವವಾಗಿ ಅಂಕಿತ್ ಶರ್ಮಾ ಪತ್ತೆಯಾಗಿದ್ದರು. (ಏಜೆನ್ಸೀಸ್)