ಸಪ್ತಪದಿಗೆ ಹೊಸ ಮುಹೂರ್ತ ಫಿಕ್ಸ್; 28, ಮೇ 11, 25ಕ್ಕೆ ಸಾಮೂಹಿಕ ವಿವಾಹ

free marriage
Published on

ಬೆಂಗಳೂರು: ಕೋವಿಡ್ ಸಾಂಕ್ರಾಮಿಕ ಕಾರಣದಿಂದಾಗಿ ಎರಡು ವರ್ಷಗಳಿಂದ ಸ್ಥಗಿತಗೊಂಡಿದ್ದ ಮುಜರಾಯಿ ಇಲಾಖೆಯ ಮಹತ್ವಾಕಾಂಕ್ಷಿ ಯೋಜನೆ ಉಚಿತ ಸಾಮೂಹಿಕ ವಿವಾಹ ‘ಸಪ್ತಪದಿ’ ಕಾರ್ಯಕ್ರಮದ ಮರು ಆರಂಭಕ್ಕೆ ಮುಹೂರ್ತ ನಿಗದಿಯಾಗಿದೆ.

ಏಪ್ರಿಲ್ 28 ಮತ್ತು ಮೇ 11, 25ರಂದು ಆಯ್ದ ‘ಎ’ ದರ್ಜೆಯ ದೇವಸ್ಥಾನಗಳಲ್ಲಿ, ಕೋವಿಡ್ ನಿಯಮಾವಳಿಗಳನ್ನು ಪಾಲಿಸುವ ಮೂಲಕ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ‘ಸಪ್ತಪದಿ’ ನಡೆಸಲು ಮುಜರಾಯಿ ಇಲಾಖೆ ಆದೇಶ ಹೊರಡಿಸಿದೆ. ಈ ಸಂಬಂಧ ಸಿದ್ಧತೆ ನಡೆಸುವಂತೆ ದೇವಾಲಯ ಆಡಳಿತ ಮಂಡಳಿಗಳಿಗೂ ಸೂಚನೆ ನೀಡಿದೆ.

ಏನಿದು ಯೋಜನೆ: ಮದುವೆಗೆ ದುಂದುವೆಚ್ಚ ಮಾಡಿ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಒಳಗಾಗುವುದನ್ನು ತಪ್ಪಿಸಲು ರಾಜ್ಯ ಸರ್ಕಾರ ‘ಸಪ್ತಪದಿ’ ಉಚಿತ ಸಾಮೂಹಿಕ ವಿವಾಹ ಯೋಜನೆಯನ್ನು ಪ್ರಾರಂಭಿಸಿತ್ತು. ವಧು ಮತ್ತು ವರನಿಗೆ ಉಡುಗೆ, ಬಂಗಾರದ ಉಡುಗೊರೆ ನೀಡುವುದರ ಜತೆಗೆ, ಎರಡೂ ಕಡೆಯ ಬಂಧುಗಳಿಗೆ ಊಟೋಪಚಾರದ ವ್ಯವಸ್ಥೆಯನ್ನು ದೇವಾಲಯ ಆಡಳಿತ ಮಂಡಳಿಗಳೇ ಮಾಡುತ್ತವೆ.

ತಸ್ತೀಕ್ 60 ಸಾವಿರ ರೂಪಾಯಿಗೆ ಹೆಚ್ಚಳ: ರಾಜ್ಯದ ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿರುವ ‘ಸಿ’ ವರ್ಗದ ದೇವಾಲಯಗಳ ತಸ್ತೀಕ್ ಹಣವನ್ನು 60 ಸಾವಿರ ರೂ.ಗಳಿಗೆ ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ದಿನಬಳಕೆ ವಸ್ತುಗಳ ಬೆಲೆ ಗಣನೀಯವಾಗಿ ಹೆಚ್ಚಿರುವ ಹಿನ್ನೆಲೆಯಲ್ಲಿ ಪೂಜಾ ಕೈಂಕರ್ಯಗಳ ನಿರ್ವಹಣೆಗಾಗಿ ತಸ್ತೀಕ್ ಮೊತ್ತವನ್ನು ಹೆಚ್ಚಿಸುವಂತೆ ದೇವಾಲಯಗಳ ಅರ್ಚಕರು ಹಲವಾರು ಬಾರಿ ಮನವಿ ಮಾಡಿಕೊಂಡಿದ್ದರು. ಅದರಂತೆ, ಸರ್ಕಾರ ಪ್ರಸಕ್ತ ವರ್ಷದಿಂದಲೇ ಅನ್ವಯವಾಗುವಂತೆ ಈ ಮೊತ್ತವನ್ನು 48 ಸಾವಿರ ರೂ.ಗಳಿಂದ 60 ಸಾವಿರ ರೂ.ಗಳಿಗೆ ಹೆಚ್ಚಿಸಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಮುಜರಾಯಿ ಇಲಾಖೆ ಸಚಿವರು, ‘ಅರ್ಚಕರ ಬಹುದಿನಗಳ ಬೇಡಿಕೆ ಈಡೇರಿದೆ. ಬಹಳಷ್ಟು ಅರ್ಚಕರ ಪರಿಸ್ಥಿತಿ ನೋಡಿ ಮಾಡಿಕೊಂಡಿದ್ದ ಮನವಿಗೆ ಸಿಎಂ ಸೂಕ್ತವಾಗಿ ಸ್ಪಂದಿಸಿದ್ದಾರೆ’ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net