

ವಾಷಿಂಗ್ಟನ್: ಜಾಹೀರಾತು ಮಾರುಕಟ್ಟೆ ಮೇಲೆ ಪಾರಮ್ಯ ಸಾಧಿಸುವ ಉದ್ದೇಶದಿಂದ ಗೂಗಲ್ ಹಾಗೂ ಫೇಸ್ಬುಕ್ ಅಕ್ರಮ ಒಪ್ಪಂದ ಮಾಡಿಕೊಂಡಿವೆ ಎಂದು ಅಮೆರಿಕದ 10 ರಾಜ್ಯಗಳು ಬುಧವಾರ ದಾವೆ ಹೂಡಿವೆ.
ಟೆಕ್ಸಾಸ್ ರಾಜ್ಯ ಈ ಮೊಕದ್ದಮೆಯ ನೇತೃತ್ವ ವಹಿಸಿದೆ. ಬೆಲೆ ನಿಯಂತ್ರಣ ಮುಂತಾದ ವಿಚಾರಗಳನ್ನು ಒಳಗೊಂಡಂತೆ ಹರಾಜಿನಲ್ಲಿ ಅಕ್ರಮ ನಡೆಸಲು ಗೂಗಲ್ ಏಕಸ್ವಾಮ್ಯ ಅಧಿಕಾರವನ್ನು ಬಳಸಿಕೊಂಡಿದೆ. ಇದು ನ್ಯಾಯದ ಉಲ್ಲಂಘನೆಯಾಗಿದೆ ಎಂದು ಟೆಕ್ಸಾಸ್ನ ಅಟಾರ್ನಿ ಜನರಲ್ ಕೆನ್ ಪಾಕ್ಸ್ಟನ್ ಹೇಳಿದ್ದಾರೆ. ಅವರು ಈ ಸಂಬಂಧ ಟ್ವಿಟರ್ನಲ್ಲಿ ವಿಡಿಯೋ ಅಪ್ಲೋಡ್ ಮಾಡಿದ್ದಾರೆ.
ಮುಕ್ತ ಮಾರುಕಟ್ಟೆ ಒಂದು ಬೇಸ್ಬಾಲ್ ಆಟವೆಂದು ಪರಿಗಣಿಸಿದರೆ ಗೂಗಲ್ ತಾನೇ ಪಿಚ್ಚರ್, ಬ್ಯಾಟರ್ ಮತ್ತು ಅಂಪಾಯರ್ನಂತೆ ವರ್ತಿಸಿದೆ’ ಎಂದು ಪಾಕ್ಸ್ಟನ್ ಮಾರ್ವಿುಕವಾಗಿ ವರ್ಣಿಸಿದ್ದಾರೆ. ಗೂಗಲ್ ವಿರುದ್ಧ ಅಮೆರಿಕ ನ್ಯಾಯ ಇಲಾಖೆ ಅಕ್ಟೋಬರ್ನಲ್ಲಿ ಏಕಸ್ವಾಮ್ಯ ಮೊಕದ್ದಮೆ ಹೂಡಿದ ನಂತರ ದಾಖಲಾಗುತ್ತಿರುವ ಎರಡನೇ ದಾವೆ ಇದಾಗಿದೆ.
ಏನು ಆರೋಪ?: ಡಿಸ್ಪ್ಲೇ ಜಾಹಿರಾತು ಮಾರುಕಟ್ಟೆ ಮೇಲೆ ಆವಿಷ್ಕಾರದ ಮೂಲಕ ಗೂಗಲ್ ಪಾರಮ್ಯ ಸಾಧಿಸಿಲ್ಲ. ಎದುರಾಳಿಗಳನ್ನು ಸ್ಪರ್ಧೆಯಿಂದ ಹೊರಗಿಡುವ ತಂತ್ರವನ್ನು ಗೂಗಲ್ ಅನುಸರಿಸಿದೆ. ಈ ಮೂಲಕ ಸ್ಪರ್ಧೆಯ ಕತ್ತು ಹಿಸುಕಿದೆ ಎಂಬುದು ಟೆಕ್ಸಾಸ್ ಮತ್ತಿತರ ರಾಜ್ಯಗಳ ವಾದವಾಗಿದೆ.