

ಬೆಟ್ಟದಪುರ: ಇಲ್ಲಿನ ಇತಿಹಾಸ ಪ್ರಸಿದ್ಧ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದಲ್ಲಿ ರಥಗಳ ನಿರ್ಮಾಣಕ್ಕೆ ಸೋಮವಾರ ಚಾಲನೆ ನೀಡಲಾಯಿತು.
ಪ್ರತಿ ವರ್ಷ ಫೆಬ್ರವರಿ ತಿಂಗಳಲ್ಲಿ ಮಲ್ಲಿಕಾರ್ಜುನ ಸ್ವಾಮಿ ಬ್ರಹ್ಮರಥೋತ್ಸವ ನಡೆಯುತ್ತದೆ. ಈ ರಥೋತ್ಸವ ಸಂದರ್ಭದಲ್ಲಿ ಮೂರು ರಥಗಳನ್ನು ಭಕ್ತರು ಎಳೆಯುತ್ತಾರೆ. ಇದರಲ್ಲಿ ಬ್ರಹ್ಮರಾಂಬಾ ಸಮೇತ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ರಥವನ್ನು 2017ರಲ್ಲಿ ನಿರ್ಮಾಣ ಮಾಡಲಾಗಿತ್ತು. ಬೆಳ್ಳಿ ಬಸಪ್ಪ ಹಾಗೂ ಗಣಪತಿ ರಥಗಳು ಸಂಪೂರ್ಣವಾಗಿ ಶಿಥಿಲವಾಗಿದ್ದ ಹಿನ್ನೆಲೆಯಲ್ಲಿ ಹೊಸರಥ ನಿರ್ಮಾಣಕ್ಕೆ ಚಾಲನೆ ದೊರಕಿದೆ.
ದಾನಿಗಳು, ಭಕ್ತರು ಮುಜರಾಯಿ ಇಲಾಖೆ ಸೇವೆಗೆ ಸಹಕರಿಸಿರುವುದು ವಿಶೇಷ. ಕನ್ನಡ ಮಠದ ಶ್ರೀ ಚನ್ನಬಸವದೇಶಿ ಕೇಂದ್ರ ಸ್ವಾಮೀಜಿ ನೂತನ ರಥ ನಿರ್ಮಾಣದ ಮರಗಳಿಗೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಗ್ರಾಪಂ ಅಧ್ಯಕ್ಷ ಬಿ.ಸಿ ಗಿರೀಶ್, ಮುಖಂಡರಾದ ನಾಗರಾಜ್ ಶೆಟ್ಟಿ, ಬೆಟ್ಟದಪುರ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಶಿವದೇವಪ್ಪ, ಖಜಾಂಚಿ ಬಿ.ಸಿ ರಾಜೇಂದ್ರ, ಮುಖಂಡರಾದ ಅನಿತಾ ತೋಟಪಶೆಟ್ಟಿ, ಬಿ.ಜೆ ದೇವರಾಜು, ಬಿ.ಎಸ್ ಮಹದೇವಪ್ಪ, ರಾಮೇಗೌಡ ಇದ್ದರು.