ಕೆಪಿಎಸ್ಸಿ 2011ರ ಬ್ಯಾಚ್​ಗೆ ಕಾನೂನಿನ ಮುಕ್ತಿ; ಈ ಅಧಿವೇಶನದಲ್ಲೇ ವಿಶೇಷ ವಿಧೇಯಕ ಮಂಡನೆ

Vidhana
Published on

ಬೆಂಗಳೂರು: ರಾಜಕೀಯ ಹಾಗೂ ಧಾರ್ವಿುಕ ನಾಯಕರ ಬಲವಾದ ಒತ್ತಡಕ್ಕೆ ಸಿಲುಕಿದ ರಾಜ್ಯ ಸರ್ಕಾರ ಕೊನೆಗೂ ಕರ್ನಾಟಕ ಲೋಕಸೇವಾ ಆಯೋಗದ 2011ರ ಪತ್ರಾಂಕಿತ ಹುದ್ದೆಗೆ ನಡೆದ ‘ವಿವಾದಿತ’ ಆಯ್ಕೆ ಪ್ರಕ್ರಿಯೆಯ ಪಟ್ಟಿಯನ್ನು ಒಪ್ಪಿಕೊಂಡಿದೆ. ಜತೆಗೆ ಮುಂಬರುವ ವಿಧಾನಸಭೆ ಅಧಿವೇಶನದಲ್ಲೇ ವಿಶೇಷ ವಿಧೇಯಕ ಮಂಡಿಸಿ ಅಕ್ರಮವನ್ನು ಸಕ್ರಮಗೊಳಿಸಲು ಬಯಸಿದೆ.

ಬುಧವಾರ ನಡೆದ ಸಂಪುಟ ಸಭೆಯಲ್ಲಿ ಕಾನೂನು ಸಚಿವರ ಪ್ರಸ್ತಾಪಕ್ಕೆ ಚರ್ಚೆ ಇಲ್ಲದೆ ಸರ್ವಸಮ್ಮತ ಎಂಬಂತೆ ಸಚಿವರೆಲ್ಲರೂ ತಲೆದೂಗಿ ಸಮ್ಮತಿ ನೀಡಿದ್ದಾರೆ. ಸಭೆ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ಕೆಪಿಎಸ್ಸಿ 2011ರ ಬ್ಯಾಚ್​ಗೆ ಸಂಬಂಧಿಸಿದಂತೆ ಹೊರಡಿಸಿದ ಅಧಿಸೂಚನೆ ಒಪ್ಪಲು ಸಂಪುಟ ಸಭೆ ನಿರ್ಧರಿಸಿದೆ. ಈ ಮೂಲಕ ಅವರೆಲ್ಲರಿಗೂ ನೇಮಕ ಆದೇಶ ನೀಡಲು ವಿಧಾನಸಭೆಯಲ್ಲಿ ಪ್ರಸ್ತಾಪ ಮಂಡಿಸುತ್ತಿದ್ದೇವೆ ಎಂದರು. ಸ್ಥಳ ನಿಯೋಜನೆ, ಜ್ಯೇಷ್ಠತೆ ಕುರಿತು ನಿಯಮದಲ್ಲಿ ತೀರ್ಮಾನ ಮಾಡಲು ನಿರ್ಧರಿಸಲಾಗಿದೆ. ಈ ಹಿಂದೆ ಪ್ರಕರಣ ಕೋರ್ಟ್​ನಲ್ಲಿತ್ತು, ಈಗ ಕೋರ್ಟ್​ನಲ್ಲಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.

ಈ ಹಿಂದೆ ಈ ಪಟ್ಟಿಯನ್ನು ಕೋರ್ಟ್ ಒಪ್ಪಿರಲಿಲ್ಲ. ಆದರೆ, ನಮ್ಮ ಸಮಜಾಯಿಷಿ ಏನು ಎಂಬುದನ್ನು ವಿಧೇಯಕದಲ್ಲಿ ಹೇಳಿದ್ದೇವೆ. ನಾನು ಅದರ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಹೆಚ್ಚು ಹೇಳಲು ಬರುವುದಿಲ್ಲ. ಮಸೂದೆ ಮಂಡಿಸಿದಾಗ ವ್ಯಾಪಕವಾಗಿ ಮಾತನಾಡುತ್ತೇನೆ ಎಂದರು.

ಅಂದು ಸಿಐಡಿ ಅಂತಿಮ ವರದಿ ಬರುವ ಮುನ್ನವೇ ತಡೆ ಹಾಕಲಾಗಿತ್ತು. ಮಧ್ಯಂತರ ವರದಿ ಆಧಾರದಲ್ಲೇ ಸರ್ಕಾರ ನಿರ್ಧಾರ ಕೈಗೊಂಡಿತ್ತು. ಈ ರೀತಿ ಪಟ್ಟಿಯನ್ನು ನಿಷ್ಕ್ರಿಯಗೊಳಿಸಲು ಬರುವುದಿಲ್ಲ. ಇನ್ನು 2015ರಲ್ಲಿ ಸರ್ಕಾರ ಪಟ್ಟಿಯನ್ನೂ ಅಂಗೀಕರಿಸಿತ್ತು. ಅದನ್ನು ನಾವು ಪರಿಗಣಿಸಿದ್ದೇವೆ. ಇನ್ನೊಂದು ಪ್ರಮುಖ ಸಂಗತಿ ಎಂದರೆ ಪಟ್ಟಿಯನ್ನು ರದ್ದು ಮಾಡುವಾಗ ಶಾಸನಸಭೆಯ ಗಣನೆ ಬಳಿಕವೇ ತೀರ್ಮಾನ ಆಗಬೇಕಾಗಿತ್ತು, ಈ ಕೆಲಸ ಆಗಿಲ್ಲ. ಇದರಿಂದ ಶಾಸನಸಭೆ ಅಧಿಕಾರ ಮೊಟಕು ಮಾಡಿದಂತಾಗುತ್ತದೆ. ಹೀಗಾಗಿ ನಾವು ಶಾಸನಸಭೆ ಮುಂದೆ ತರುತ್ತೇವೆ, ಅಲ್ಲಿ ಏನು ತೀರ್ಮಾನ ಆಗುತ್ತದೋ ಅದನ್ನು ಪಾಲಿಸುತ್ತೇವೆ ಎಂದು ಪತ್ರಕರ್ತರ ಪ್ರಶ್ನೆಗೆ ಮಾಧುಸ್ವಾಮಿ ವಿವರಣೆ ನೀಡಿದರು.

ಸರ್ಕಾರದ ತನಿಖಾ ಸಂಸ್ಥೆಯೇ ಆಯ್ಕೆ ಪರೀಕ್ಷೆ ಮತ್ತು ಸಂದರ್ಶನದ ಅಕ್ರಮವನ್ನು ಬಯಲಿಗೆಳೆದಿತ್ತು, ಹೀಗಿದ್ದೂ ಆ ಪಟ್ಟಿಯನ್ನು ಸರ್ಕಾರ ಒಪ್ಪಿಕೊಳ್ಳುತ್ತದೆಯೇ ಎಂಬ ಪ್ರಶ್ನೆಗೆ, ಫೆ.15-16ರ ಬಳಿಕ ಮಾತನಾಡೋಣ ಎಂದು ಮುಖ ತಿರುಗಿಸಿದರು.

ಸಂಪುಟ ಸಭೆ ತೀರ್ಮಾನಗಳು

  • ಫೆ.14ರಂದು ವಿಧಾನಮಂಡಲ ಉಭಯ ಸದನಗಳನ್ನುದ್ದೇಶಿಸಿ ರಾಜ್ಯಪಾಲರು ಮಾಡುವ ಭಾಷಣಕ್ಕೆ ಅನುಮೋದನೆ
  • ಮುಧೋಳ ತಾಲೂಕು ಸಕ್ಕರೆ ಕಾರ್ಖಾನೆಯನ್ನು 320 ಕೋಟಿ ರೂ.ಗೆ 40 ವರ್ಷಕ್ಕೆ ಟೆಂಡರ್ ಅಧಾರದ ಮೇಲೆ ಗುತ್ತಿಗೆ ನೀಡಲು ಸಮ್ಮತಿ
  • ಉತ್ತರ ಕನ್ನಡ ಜಿಲ್ಲೆ ಕುಮಟಾ ಮಿನಿ ವಿಧಾನಸೌಧ ಮೂರನೇ ಮಹಡಿಯಲ್ಲಿ ಕೊಠಡಿಗಳನ್ನು ನಿರ್ವಿುಸಲು 16.28 ಕೋಟಿ ರೂ.
  • ಕೋಲಾರ ಜಿಲ್ಲೆ ಮಾಸ್ತಿ ವಸತಿ ಶಾಲೆಯ ಕಟ್ಟಡ, ಮೂಲಸೌಕರ್ಯಕ್ಕೆ 17 ಕೋಟಿ ರೂ.
  • ವಿಜಯಪುರದಲ್ಲಿ 30 ವರ್ಷಕ್ಕಿಂತ ದೀರ್ಘಾವಧಿಗೆ ಗುತ್ತಿಗೆ ಕೊಡಲಾದ ಜಾಗವನ್ನು ಗುತ್ತಿಗೆ ನೀಡಿದಲ್ಲಿಂದಲೇ ಬಡ್ಡಿ ಸಹಿತ ಸೇರಿ ಮಾರಾಟಕ್ಕೆ ಒಪ್ಪಿಗೆ
  • ಕಂಪನಿಗಳ ವಿಲೀನ ಅಥವಾ ಬೇರ್ಪಟ್ಟ ಸಂದರ್ಭದಲ್ಲಿ ನಡೆಯುವ ನೋಂದಣಿ ಪ್ರಕ್ರಿಯೆ ವೇಳೆ ಆಗುತ್ತಿದ್ದ ಸ್ಟಾಂಪ್ ಡ್ಯೂಟಿ ಹೊರೆ ತಪ್ಪಿಸಲು ಕಾನೂನಿನಲ್ಲಿ ತಿದ್ದುಪಡಿ
  • ಬಸವಕಲ್ಯಾಣದಲ್ಲಿ ನಿರ್ವಿುಸಲು ಉದ್ದೇಶಿಸಿರುವ ಅನುಭವ ಮಂಟಪಕ್ಕೆ 560 ಕೋಟಿ ರೂ. ಅಂದಾಜಿಗೆ ಅನುಮೋದನೆ. ಕಂದಾಯ ಇಲಾಖೆ ಹೆಚ್ಚುವರಿಯಾಗಿ 60 ಕೋಟಿ ರೂ.ಗೆ ಪ್ರಸ್ತಾವನೆ ಸಲ್ಲಿಸಿತ್ತು.
  • ಬೆಂಗಳೂರಿನ ಸಂಚಾರ ಒತ್ತಡ ಕಡಿಮೆ ಮಾಡಲು ನಿರ್ವಿುಸಲು ಉದ್ದೇಶಿಸಿರುವ ಬಹುಕಾಲದ ರ್ಚಚಿತ ಪೆರಿಫರಲ್ ರಿಂಗ್ ರಸ್ತೆಗೆ ಅನುಮೋದನೆ.

4306 ಜನವಸತಿಗೆ ನಳ ಜಲ

ಕೇಂದ್ರ ಸರ್ಕಾರ ಮಹತ್ವಾಕಾಂಕ್ಷಿಯ ಪ್ರತಿ ಮನೆಗೂ ಕುಡಿಯುವ ನೀರಿನ ನಲ್ಲಿ ಸಂಪರ್ಕ ಕಲ್ಪಿಸುವ ಜಲಜೀವನ್ ಮಿಷನ್ ಯೋಜನೆಯನ್ನು ದೊಡ್ಡ ಸಂಖ್ಯೆಯ ಜನವಸತಿಯಲ್ಲಿ ಅನುಷ್ಠಾನಗೊಳಿಸಲು ಬುಧವಾರ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಒಟ್ಟಾರೆ 4306ಕ್ಕಿಂತ ಹೆಚ್ಚು ಜನವಸತಿಗಳಲ್ಲಿ ನಲ್ಲಿ ನೀರು ಸಂಪರ್ಕ ಕಲ್ಪಿಸಲು ಬರೋಬ್ಬರಿ 4370 ಕೋಟಿ ರೂ. ಅನುದಾನ ಬಿಡುಗಡೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಂಪುಟ ಸಭೆ ಒಪ್ಪಿಗೆ ನೀಡಿತು. ಈ ಯೋಜನೆ ಕುರಿತು ವಿವರಣೆ ನೀಡಿದ ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ, ಜಲ ಜೀವನ್ ಮಿಷನ್ ಯೋಜನೆ ಮೂಲಕ ಪ್ರತಿ ಮನೆಗೂ ನಲ್ಲಿ ನೀರು ಕೊಡಬೇಕೆಂಬುದು ಕಾರ್ಯಕ್ರಮದ ಉದ್ದೇಶ. ಎಲ್ಲೆಲ್ಲಿ ನೀರಿನ ತಕ್ಷಣ ಲಭ್ಯತೆ ಇದೆ ಆದ್ಯತೆ ಮೇಲೆ ಯೋಜನೆ ತೆಗೆದುಕೊಳ್ಳುತ್ತಿದ್ದು, ಈ ವರ್ಷ 9200 ಕೋಟಿ ರೂ. ಇಟ್ಟುಕೊಂಡಿದ್ದೇವೆ ಎಂದರು. ಶೇ.45 ಕೇಂದ್ರದ ಅನುದಾನ ಹಾಗೂ ಶೇ.45 ಹಣವನ್ನು ರಾಜ್ಯ ಸರ್ಕಾರ ಖರ್ಚು ಮಾಡಬೇಕು. ಉಳಿದ ಶೇ.10 ಸ್ಥಳೀಯ ವಂತಿಗೆ ಮೂಲಕ ಸಂಗ್ರಹಿಸಬೇಕೆಂಬ ಷರತ್ತಿದೆ. ಶೇ.10 ಸ್ಥಳೀಯ ವಂತಿಗೆ ಸಂಗ್ರಹ ಕಷ್ಟವೆಂಬ ಕಾರಣಕ್ಕೆ ರಾಜ್ಯ ಸರ್ಕಾರವೇ ಭರಿಸುತ್ತಿದೆ. ರಾಜ್ಯದ ಪಾಲು 4500 ಕೋಟಿಯಷ್ಟನ್ನು ಹೊಂದಿಸುವುದು ಕಷ್ಟವಾಗುವ ಕಾರಣ ವಿಶ್ವಬ್ಯಾಂಕ್​ನಲ್ಲಿ ಸಾಲ ಮಾಡಿ ಭರಿಸಲಾಗುತ್ತಿದೆ ಎಂದು ವಿವರಿಸಿದರು. ಪ್ರತಿ ಕಾಮಗಾರಿಗೂ ಸಮಯ ನಿಗದಿ ಮಾಡಲಾಗಿದೆ. ಡಿಬಿಒಟಿ (ಡಿಸೈನ್, ಬ್ಯುಲ್ಡ್, ಆಪರೇಟ್, ಟ್ರಾನ್ಸ್​ಫರ್) ಆಧಾರದಲ್ಲಿ ಕಾಮಗಾರಿ ಮಾಡಿಸಲಾಗುತ್ತಿದೆ. ದೊಡ್ಡ ಯೋಜನೆಯಾದರೆ ಒಂದು ವರ್ಷ ಕಾಲಾವಧಿ ನೀಡಲಾಗಿದೆ ಎಂದು ಹೇಳಿದರು.

ಅನುಮೋದನೆ ಎಲ್ಲೆಲ್ಲಿಗೆ?

ಹಾಸನ: ಆಲೂರು, ಬೇಲೂರು, ಹಾಸನ ಮತ್ತು ಸಕಲೇಶಪುರ ತಾಲೂಕುಗಳ 1477 ಗ್ರಾಮೀಣ ಜನವಸತಿಗಳಿಗೆ 810 ಕೋಟಿ ರೂ.; ಚನ್ನರಾಯಪಟ್ಟಣ ತಾಲೂಕಿನ 435 ಗ್ರಾಮೀಣ ಜನವಸತಿಗೆ 320 ಕೋಟಿ ರೂ.; ಹೊಳೆನರಸೀಪುರ, ಅರಕಲಗೂಡು ತಾಲೂಕಿನ ಆನಂದೂರು ಮತ್ತು ಇತರ 84 ಜನವಸತಿಗಳಿಗೆ 80 ಕೋಟಿ ರೂ.; ಅರಕಲಗೂಡು ತಾಲೂಕಿನ ಬಾನಗುಂದಿ ಮತ್ತು ಇತರ 260 ಜನ ವಸತಿಗಳಿಗೆ 185 ಕೋಟಿ ರೂ., ಬೋಳೆಕ್ಯಾತನಹಳ್ಳಿ ಮತ್ತು ಇತರ 138 ಜನವಸತಿಗೆ 80 ಕೋಟಿ ರೂಪಾಯಿ.

ಉತ್ತರ ಕನ್ನಡ: ಕಾರವಾರ ತಾಲೂಕಿನ ಗೋಟೆಗಾಳಿ ಮತ್ತು 22 ಗ್ರಾಮ (43 ಜನವಸತಿ), ಕೆರವಾಡಿ ಮತ್ತು ಇತರ 17 ಗ್ರಾಮ (42 ಜನವಸತಿ)ಗೆ 88.50 ಕೋಟಿ ರೂ.; ಅಂಕೋಲ ತಾಲೂಕಿನ ವಾಸರಕುದ್ರಿ ಮತ್ತು 5 ಗ್ರಾಮ (23 ಜನವಸತಿ)ಗೆ 30.27 ಕೋಟಿ ರೂ. ?ಕುಮಟಾ ತಾಲೂಕಿನ ಅಲ್ಕೋಡ, ಹೆಗಡೆ ಮತ್ತು 53 ಗ್ರಾಮಗಳಿಗೆ 135 ಕೋಟಿ ರೂ.

ಉಡುಪಿ: ಕಾರ್ಕಳ, ಹೆಬ್ರಿ, ಕಾಪು 69 ಹಳ್ಳಿಗಳಿಗೆ 1215 ಕೋಟಿ ರೂ.

ರಾಮನಗರ: ಮಂಚನ ಬೆಲೆ ಜಲಾಶಯದಿಂದ ಮಾಗಡಿ ತಾಲೂಕಿನ 625 ಜನವಸತಿ, ರಾಮನಗರ ತಾಲೂಕಿನ 250 ಜನವಸತಿಗೆ 670 ಕೋಟಿ ರೂ. ಮತ್ತು ಇನ್ನೊಂದು ಯೋಜನೆಯಾಗಿ ರಾಮನಗರ ತಾಲೂಕಿನ 94 ಜನವಸತಿ, ಮಾಗಡಿ ತಾಲೂ ಕಿನ 72 ಜನವಸತಿಗೆ 155 ಕೋಟಿ ರೂ.

ಚಿಕ್ಕಬಳ್ಳಾಪುರ: ಮಂಡಿಕಲ್ ಮತ್ತು ಸುತ್ತಮುತ್ತಲಿನ 13 ಜನವಸತಿಗಳಿಗೆ 13.30 ಕೋಟಿ ರೂ., ಗುಡಿಬಂಡೆ ಅಮಾನಿಕೆರೆ ಸುತ್ತಮುತ್ತ 28 ಜನ ವಸತಿಗಳಿಗೆ 15 ಕೋಟಿ ರೂ.

ಶಿವಮೊಗ್ಗ: ಸಾಗರ ತಾಲೂಕಿನ ಆವಿನಹಳ್ಳಿ ಹಾಗೂ 336 ಜನವಸತಿಗೆ 88 ಕೋಟಿ ರೂ. ?ಶಿವಮೊಗ್ಗ ತಾಲೂಕು ಗೋವಿಂದಪುರ ಹಾಗೂ 12 ಗ್ರಾಮೀಣ ಪ್ರದೇಶಕ್ಕೆ 16.73 ಕೋಟಿ ರೂ.

ಬಳ್ಳಾರಿ: ಸಂಡೂರು ತಾಲೂಕು ಇಡಗುರ್ತಿ ಮತ್ತು 60 ಜನವಸತಿಗೆ 131.21 ಕೋಟಿ ರೂ.

ಚಿತ್ರದುರ್ಗ: ಹೊಳಲ್ಕೆರೆ ತಾಲೂಕಿನ 215 ಜನವಸತಿಗಳಿಗೆ 367.65 ಕೋಟಿ ರೂ. (ಪರಿಷ್ಕೃತ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net