ವೈದ್ಯಕೀಯ ಶಿಕ್ಷಣ ಶುಲ್ಕಕ್ಕೆ ಹೊಸ ಮಾನದಂಡ

medical
Published on

ಸರ್ಕಾರಿ ಆಸ್ಪತ್ರೆಗಳಲ್ಲಿ ಪಿ.ಜಿ ಕೋರ್ಸ್ ಆರಂಭ, ಎಲ್ಲ ತಾಲೂಕಿನಲ್ಲಿ ನೀಟ್ ತರಬೇತಿ ಜತೆಗೆ ವೈದ್ಯಕೀಯ ಕಾಲೇಜುಗಳ ಮೂಲಸೌಕರ್ಯದ ಆಧಾರದ ಮೇಲೆ ಶುಲ್ಕ ನಿಗದಿ ಮತ್ತು ರಾಜೀವ್ ಗಾಂಧಿ ವಿವಿ ಸ್ಥಾಪನೆಗೆ 600 ಕೋಟಿ ರೂ. ಒದಗಿಸಲು ಬಜೆಟ್​ನಲ್ಲಿ ಘೋಷಣೆ ಮಾಡಲಾಗಿದೆ. ಚಿಕಿತ್ಸೆಗೆ ಸೀಮಿತವಾಗಿರುವ ಸರ್ಕಾರಿ ಆಸ್ಪತ್ರೆಗಳನ್ನು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್​ಗಳನ್ನು ಅಭ್ಯಾಸ ಮಾಡುವ ಕೇಂದ್ರಗಳಾಗಿ ಪರಿವರ್ತಿಸಲು ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ಧರಿಸಿದೆ.

ಸ್ನಾತಕೋತ್ತರ ವೈದ್ಯಕೀಯ ಕೋರ್ಸ್​ಗಳನ್ನು ಜಿಲ್ಲಾ ಮಟ್ಟದಲ್ಲಿ ಪ್ರಾರಂಭಿಸಲು ಅನುವಾಗುವಂತೆ 200ಕ್ಕೂ ಹೆಚ್ಚು ಹಾಸಿಗೆಗಳ ಸಾಮರ್ಥ್ಯವಿರುವ ಸರ್ಕಾರಿ ಆಸ್ಪತ್ರೆಗಳನ್ನು ನ್ಯಾಷನಲ್ ಮೆಡಿಕಲ್ ಕಮಿಷನ್(ಎನ್​ಎಂಸಿ) ಅನುಮೋದನೆ ಪಡೆದು ಬೋಧನಾ ಆಸ್ಪತ್ರೆಗಳನ್ನಾಗಿ ಪರಿವರ್ತಿಸಲು ತೀಮಾನಿಸಿದೆ. ಬಡ ಮಕ್ಕಳಿಗೆ ವೈದ್ಯಕೀಯ ಶಿಕ್ಷಣ ಪಡೆಯಲು ಅವಕಾಶ ಕಲ್ಪಿಸುವ ದೃಷ್ಟಿಯಿಂದ ರಾಜ್ಯದ ಎಲ್ಲ ತಾಲೂಕುಗಳಲ್ಲಿ ನೀಟ್ ಪರೀಕ್ಷೆಗೆ ಸರ್ಕಾರ ತರಬೇತಿ ನೀಡಲಿದೆ. ಸರ್ಕಾರಿ ಹಾಗೂ ಖಾಸಗಿ ವೈದ್ಯಕೀಯ ಸಂಸ್ಥೆಗಳಲ್ಲಿ ಸರ್ಕಾರಿ ಕೋಟಾದಲ್ಲಿ ಪ್ರವೇಶ ಪಡೆಯುವ ಬಡ ವಿದ್ಯಾರ್ಥಿಗಳಿಗೆ ಬ್ಯಾಂಕುಗಳಿಂದ ಶೈಕ್ಷಣಿಕ ಸಾಲ ಒದಗಿಸಲು ಸರ್ಕಾರ ನೆರವು ನೀಡಲಿದೆ. ಖಾಸಗಿ ವೈದ್ಯ ಕೀಯ ಕಾಲೇಜುಗಳನ್ನು ಎ, ಬಿ, ಸಿ ಮತ್ತು ಡಿ ಎಂದು ವರ್ಗೀಕರಿಸಿ ಶುಲ್ಕ ನಿಯಂತ್ರಣ ಸಮಿತಿ ಮೂಲಕ ಶುಲ್ಕ ನಿಗದಿಪಡಿಸಲು ಕ್ರಮವಹಿಸಲಾಗುವುದೆಂದು ಭರವಸೆ ನೀಡಿದೆ.

  • ಹಾವೇರಿ ಜಿಲ್ಲೆ ಸವಣೂರು ತಾಲೂಕಿನಲ್ಲಿ ಹೊಸ ಆಯುರ್ವೆದ ಕಾಲೇಜು
  • ಯಾದಗಿರಿ ಜಿಲ್ಲಾ ಆಸ್ಪತ್ರೆಯಲ್ಲಿ ಆಯುಷ್ ವಿಭಾಗ ಪ್ರಾರಂಭ
  • ಚಿತ್ರದುರ್ಗ ಜಿಲ್ಲೆಯಲ್ಲಿ ಹೊಸ ಸರ್ಕಾರಿ ವೈದ್ಯಕೀಯ ಕಾಲೇಜ್
  • ತುಮಕೂರು ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ಸ್ನಾತಕೋತ್ತರ ಕೋರ್ಸ್​ಗಳ ಪ್ರಾರಂಭ
  • ಕೆ.ಆರ್.ಆಸ್ಪತ್ರೆಯ ಕಟ್ಟಡಗಳ ನವೀಕರಣಕ್ಕೆ ಮುಂದಿನ ಮೂರು ವರ್ಷದಲ್ಲಿ 89 ಕೋಟಿ ರೂ. ವೆಚ್ಚ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net