ಬೀದಿನಾಯಿಗಳ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಚಾಲನೆ

IMG-20250203-WA0113
ಹೊಳೆನರಸೀಪುರದ ಘನತ್ಯಾಜ್ಯ ವಿಲೇವಾರಿ ಸಂಸ್ಕರಣಾ ಘಟಕದಲ್ಲಿ ಸೋಮವಾರ ಬೀದಿ ನಾಯಿಗಳ ಸಂತಾನ ಶಕ್ತಿ ಹರಣ ಮತ್ತು ರೇಬಿಸ್ ಲಸಿಕೆ ನೀಡುವ ಕಾರ್ಯಕ್ಕೆ ಚಾಲನೆ ನೀಡಿಲಾಯಿತು. ಪುರಸಭೆ ಅಧ್ಯಕ್ಷ ಕೆ.ಶ್ರೀಧರ್, ಶಿವಶಂಕರ್ ಇತರರು ಇದ್ದರು.
Published on

ಹೊಳೆನರಸೀಪುರ ಪಟ್ಟಣದಲ್ಲಿವೆ 500ಕ್ಕೂ ಹೆಚ್ಚು ಶ್ವಾನಗಳು

ಹೊಳೆನರಸೀಪುರ : ಪಟ್ಟಣದಲ್ಲಿ ಬೀದಿ ನಾಯಿಗಳ ಉಪಟಳ ಹೆಚ್ಚಾಗಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಬೀದಿ ನಾಯಿಗಳ ಸಂತಾನ ಶಕ್ತಿ ಹರಣ ಮತ್ತು ರೇಬಿಸ್ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ನೀಡಲಾಯಿತು.

ಪಟ್ಟಣದ ಘನತ್ಯಾಜ್ಯ ವಿಲೇವಾರಿ ಸಂಸ್ಕರಣಾ ಘಟಕದಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷ ಕೆ.ಶ್ರೀಧರ್ ಚಾಲನೆ ನೀಡಿದರು. ಸಾರ್ವಜನಿಕರ ಬಹುದಿನಗಳ ಸಮಸ್ಯೆಗೆ ಇಂದು ಪರಿಹಾರ ಸಿಕ್ಕಿದೆ. ಬೀದಿ ನಾಯಿಗಳಿಗೆ ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯಿಂದ ನಿಗದಿಪಡಿಸಿದ ಮಾರ್ಗಸೂಚಿಗಳ ಅನ್ವಯ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ ಮತ್ತು ರೇಬಿಸ್ ಲಸಿಕೆ ನೀಡಲಾಗುವುದು ಎಂದು ಮಾಹಿತಿ ನೀಡಿದರು.

ಪುರಸಭೆ ಮುಖ್ಯಾಧಿಕಾರಿ ಯು.ಎನ್. ಶಿವಶಂಕರ್ ಮಾತನಾಡಿ, ಪುರಸಭೆ ವತಿಯಿಂದ ಟೆಂಡರ್ ಕರೆದಿದ್ದು, ಈ ಟೆಂಡರ್‌ನಲ್ಲಿ ವಾಯ್ಸ ಲೆಸ್ ಅನಿಮಲ್ ಟ್ರಸ್ಟ್ ನವರು ಭಾಗವಹಿಸಿದ್ದರು. ಅಂದಾಜು 10 ಲಕ್ಷ ರೂ. ವೆಚ್ಚದಲ್ಲಿ ರೇಬಿಸ್ ಚಿಕಿತ್ಸೆ ನೀಡಿ ಸಂತಾನ ಶಕ್ತಿ ಹರಣ ಶಸ್ತ್ರ ಚಿಕಿತ್ಸೆ ಮಾಡಲು ಒಂದು ನಾಯಿಗೆ ತಲಾ 1,737 ರೂ.ಗಂತೆ 577 ನಾಯಿಗಳಿಗೆ ಚಿಕಿತ್ಸೆ ಮಾಡುವಂತೆ ಕೋರಲಾಗಿತ್ತು ಎಂದು ಮಾಹಿತಿ ನೀಡಿದರು.

ಸಾರ್ವಜನಿಕರು ತಮ್ಮ ಬೀದಿಗಳಲ್ಲಿ ನಾಯಿಗಳನ್ನು ಹಿಡಿದು ಸಂತಾನ ಶಕ್ತಿ ಹರಣ ಶಸ್ತ್ರ ಚಿಕಿತ್ಸೆ ಮಾಡಿಸಲು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ವಾಯ್ಸ ಲೆಸ್ ಅನಿಮಲ್ ಟ್ರಸ್ಟ್ ನ ವ್ಯವಸ್ಥಾಪಕ ಕಾರ್ತಿಕ್ ಮಾತನಾಡಿ, ಯಾವ ಸ್ಥಳದಲ್ಲಿ ನಾಯಿಗಳನ್ನು ಹಿಡಿಯುತ್ತೇವೆಯೋ, ಅದೇ ಸ್ಥಳಕ್ಕೆ ತಂದು ಬಿಡುತ್ತೇವೆ. ಶಸ್ತ್ರಚಿಕಿತ್ಸೆ ಮಾಡಲು ನಾಯಿ ಹಿಡಿದು ತಂದ ಎರಡು ಗಂಟೆಯವರೆಗೆ ಯಾವುದೇ ಆಹಾರ ಕೊಡುವುದಿಲ್ಲ. ಎರಡು ದಿನಗಳ ಬಳಿಕ ಅವುಗಳ ಆರೋಗ್ಯ ಗಮನಿಸಿ ಆಹಾರ ನೀಡಲಾಗುತ್ತದೆ. ಗಂಡು ನಾಯಿಗೆ ಚಿಕಿತ್ಸೆ ಮಾಡಿದ ಎರಡು ದಿನಗಳಲ್ಲಿ ತಂದು ಬಿಡುತ್ತೇವೆ. ಆದರೆ ಹೆಣ್ಣು ನಾಯಿಯನ್ನು ಐದು ದಿನಗಳವರೆಗೆ ಬೋನಿನಲ್ಲಿಟ್ಟು ಅವುಗಳ ಆರೋಗ್ಯ ಸುಧಾರಣೆ ಆದ ಬಳಿಕ ಬಿಡುತ್ತೇವೆ ಎಂದು ತಿಳಿಸಿದರು.

ಪುರಸಭೆ ವ್ಯವಸ್ಥಾಪಕಿ ಮೋಹನ ಕುಮಾರಿ, ಸಮುದಾಯ ಸಂಘಟನಾಧಿಕಾರಿ ಪಂಕಜಾ, ಸಮುದಾಯ ಸಂಘಟಕರಾದ ರಮೇಶ್, ಕಂದಾಯ ಅಧಿಕಾರಿ ಡಿ.ನಾಗೇಂದ್ರಕುಮಾರ್, ಇಂಜಿನಿಯರ್ ಪರಮೇಶ್, ಆರೋಗ್ಯ ನಿರೀಕ್ಷಕ ವಸಂತ್ ಕುಮಾರ್, ಪುರಸಭೆ ಸದಸ್ಯರಾದ ವಾಸಿಂ, ನಾಗಮಣಿ, ಎಚ್.ಟಿ.ಕುಮಾರ ಸ್ವಾಮಿ, ಜವರೇಶ್ ಮತ್ತು ಇನ್ನಿತರರು ಇದ್ದರು.

ಸಾರ್ವಜನಿಕರು ಸಹಾಯವಾಣಿ 8660023831 ಸಂಖ್ಯೆಗೆ ದೂರು ನೀಡಿ, ಬೀದಿ ನಾಯಿಗಳ ಸಮಸ್ಯೆಗೆ ಪರಿಹಾರ ಪಡೆಯಬಹುದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net