ನೆಟ್ಟಿಗರು ಮೆಚ್ಚಿದ ಸಮಂತಾ ಅಭಿನಯದ 'ಯಶೋದ'

Yashoda 3
Published on

ಹೈದರಾಬಾದ್: ಸಮಂತಾ ಅಭಿನಯದ 'ಯಶೋದ' ಚತ್ರವು ಇಂದು ಐದು ಭಾಷೆಗಳಲ್ಲಿ ಜಗತ್ತಿನ ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು, ಈ ಚಿತ್ರಕ್ಕೆ ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಷ್ಟೇ ಅಲ್ಲ, ಚಿತ್ರವನ್ನು ನೋಡಿದವರು ಇದು ಸಮಂತಾ ಅಭಿನಯದ ಬೆಸ್ಟ್​ ಚಿತ್ರ ಎಂದು ಹಾಡಿ ಹೊಗಳುತ್ತಿದ್ದಾರೆ.

ಸಮಂತಾ ಅಭಿನಯದ ಚಿತ್ರವೊಂದು ಬಿಡುಗಡೆಯಾಗಿ ಎರಡು ವರ್ಷಗಳೇ ಆಗಿವೆ. ಅದಾದ ಮೇಲೆ, 'ದಿ ಫ್ಯಾಮಿಲಿ ಮ್ಯಾನ್​' ಎಂಬ ಚಿತ್ರದಲ್ಲಿ ಸಮಂತಾ ನೆಗೆಟಿವ್​ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. 'ಪುಷ್ಪ' ಚಿತ್ರದ ಐಟಂಸಾಂಗ್​ವೊಂದರಲ್ಲಿ ಕಾಣಿಸಿಕೊಂಡಿದ್ದರು. ಇವೆರಡೂ ಅವರ ಜನಪ್ರಿಯತೆಯನ್ನು ಹೆಚ್ಚಿಸಿತ್ತು. ಇದೆಲ್ಲದರಿಂದ 'ಯಶೋದ' ಚಿತ್ರದ ಮೇಲೆ ಪ್ರೇಕ್ಷಕರಿಗೆ ನಿರೀಕ್ಷೆ ಹೆಚ್ಚಿತ್ತು. ಇನ್ನು, ಇದು ವಿಭಿನ್ನ ಜಾನರ್​ನ ಚಿತ್ರವಾದ್ದರಿಂದ ಕುತೂಹಲ ಹೆಚ್ಚಿತ್ತು.

ಇಂದು ಚಿತ್ರ ಬಿಡುಗಡೆಯಾಗಿದ್ದು, ಚಿತ್ರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಚಿತ್ರ ನೋಡಿದ ಪ್ರೇಕ್ಷಕರು ಸಮಂತಾ ಅಭಿನಯವನ್ನು, ಹೊಡೆದಾಟದ ದೃಶ್ಯಗಳನ್ನು, ವಿಭಿನ್ನ ಕಥಾಹಂದರವನ್ನು ಮೆಚ್ಚಿಕೊಂಡಿದ್ದಾರೆ. ಇದಕ್ಕೂ ಮುನ್ನ ಚಿತ್ರಕ್ಕೆ ಸಾಹಸ ಸಂಯೋಜನೆ ಮಾಡಿರುವ ಹಾಲಿವುಡ್​ನ ಸಾಹಸ ನಿರ್ದೇಶಕ ಯಾನಿಕ್​ ಬೆನ್, ಸಮಂತಾ ಪರಿಶ್ರಮವನ್ನು ಕೊಂಡಾಡಿದ್ದರು. ಈಗ ಚಿತ್ರ ನೋಡಿರುವ ಪ್ರೇಕ್ಷಕರು ಸಹ ಸಮಂತಾ ಹೊಡೆದಾಡಿರುವ ರೀತಿಯ ಬಗ್ಗೆ ಮೆಚ್ಚಿ ಮಾತನಾಡಿದ್ದಾರೆ.

'ಯಶೋದ' ಚಿತ್ರದ ಜೀವಾಳವೇ ಸಮಂತ ಎಂದು ಕೆಲವರು ಅಭಿಪ್ರಾಯಪಟ್ಟರೆ, ಒಂದು ಒಳ್ಳೆಯ ಸ್ಕ್ರಿಪ್ಟ್​ನ್ನು ಬಹಳ ಚೆನ್ನಾಗಿ ತೆರೆಯ ಮೇಲೆ ತರಲಾಗಿದೆ ಎಂದು ಇನ್ನೂ ಕೆಲವರು ಹೇಳಿಕೊಂಡಿದ್ದಾರೆ. ಇನ್ನು, ಬಾಡಿಗೆ ತಾಯ್ತನವನ್ನು ಹೇಗೆ ವ್ಯಾಪರೀಕರಣಗೊಳಿಸಲಾಗುತ್ತಿದೆ ಎಂದು ಚಿತ್ರದಲ್ಲಿ ಅದ್ಭುತವಾಗಿ ತೋರಿಸಲಾಗಿದೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

ಶ್ರೀದೇವಿ ಮೂವೀಸ್ ಅಡಿಯಲ್ಲಿ ಶಿವಲೆಂಕ ಕೃಷ್ಣ ಪ್ರಸಾದ್ ನಿರ್ಮಿಸಿರುವ 'ಯಶೋದ' ಚಿತ್ರದಲ್ಲಿ ಸಮಂತಾ ಜೊತೆಗೆ ವರಲಕ್ಷ್ಮಿ ಶರತ್‌ಕುಮಾರ್, ಉನ್ನಿ ಮುಕುಂದನ್, ರಾವ್ ರಮೇಶ್, ಮುರಳಿ ಶರ್ಮಾ ಮುಂತಾದವರು ನಟಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net