VIDEO | ಬೆಂಗಳೂರಿನಲ್ಲಿ ಕಾಣಿಸಿಕೊಂಡಿತು ಹ್ಯೂಮನ್ ಪವರ್ಡ್​ ವೆಹಿಕಲ್​; ಗುಂಡಿಗಳೇ ತುಂಬಿರುವ ರಸ್ತೆಯಲ್ಲಿ ಸಂಚಾರ ಹೇಗೆ ಎಂದ ನೆಟ್ಟಿಗರು!

Human powered vehicle
Published on

ಬೆಂಗಳೂರು: ವಿದೇಶಗಳಲ್ಲಿ ಕಾಣಸಿಗುವ, ಭಾರತದಲ್ಲಿ ವಿಶೇಷ ಎಂಬಂತಹ ಹ್ಯೂಮನ್ ಪವರ್ಡ್​ ವೆಹಿಕಲ್​ ಬೆಂಗಳೂರಿನ ಜೆಪಿ ನಗರ ರಸ್ತೆಯಲ್ಲಿ ಕಾಣಿಸಿಕೊಂಡಿದೆ. ನೆದರ್ಲ್ಯಾಂಡ್​​ನಿಂದ ಆಮದು ಮಾಡಿಕೊಂಡಿರುವ ಸ್ಲೀಪಿಂಗ್ ಪಾಡ್ ಆಕಾರದ ಹ್ಯೂಮನ್ ಪವರ್ಡ್​ ವೆಹಿಕಲ್ ಸಂಚರಿಸುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಟ್ವಿಟರ್​ನಲ್ಲಿ ವೈರಲ್ ಆಗುತ್ತಿದೆ.

ಸದಾ ಸಂಚಾರ ದಟ್ಟಣೆ ಇರುವ ಬೆಂಗಳೂರಿನ ರಸ್ತೆಯಲ್ಲಿ ಇದೇ ಮೊದಲ ಬಾರಿಗೆ ಕಾಣಿಸಿರುವ ಹ್ಯೂಮನ್ ಪವರ್ಡ್​ ವಾಹನವನ್ನು ಸಾರ್ವಜನಿಕರು ಕುತೂಹಲದಿಂದ ನೋಡಿದ್ದಾರೆ. ಬಸ್ಸು, ಲಾರಿ, ಕಾರುಗಳ ನಡುವೆ ಇದೇನಿದು ವಿಭಿನ್ನ ಮಾದರಿಯ ವಾಹನ ಎಂದು ಜನರು ಯೋಚಿಸಿದ್ದಾರೆ. ವೈರಲ್ ಆಗಿರುವ ಈ ವಿಡಿಯೋವನ್ನು ಈಗಾಗಲೇ 72 ಸಾವಿರಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಜತೆಗೆ ಈ ವಾಹನದ ಬಗ್ಗೆ ನಿರಂತರ ಚರ್ಚೆ ಮಾಡಿದ್ದಾರೆ.

ರೇವಂತ್ ಎಂಬುವವರು ಹ್ಯೂಮನ್ ಪವರ್ಡ್​ ಕಾರು ಸಂಚರಿಸುತ್ತಿರುವುದನ್ನು ವಿಡಿಯೋ ಮಾಡಿ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಶೇಷ ವಾಹನದ ಬಗ್ಗೆ ಇದೀಗ ಟ್ವಿಟರ್​ನಲ್ಲಿ ಸಾಕಷ್ಟು ಚರ್ಚೆಗಳಾಗುತ್ತಿವೆ. ಅಲ್ಲದೆ ಒಂದು ಬಾರಿಯಾದರೂ ಈ ವಾಹನವನ್ನು ಚಲಾಯಿಸಿ ನೋಡಬೇಕು ಎಂದು ಅನೇಕರು ಬಯಕೆ ವ್ಯಕ್ತಪಡಿಸಿದ್ದಾರೆ.

ಇನ್ನು ಬೆಂಗಳೂರಿನ ವಾಹನ ಸವಾರರಿಗೆ ಸವಾಲಾಗಿರುವ ಗುಂಡಿಗಳಿರುವ ರಸ್ತೆಯಲ್ಲಿ ಈ ವಾಹನ ಹೇಗೆ ಓಡಾಡುತ್ತದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ವಾಹನ ಕಾನೂನು ನಿಯಮಗಳಲ್ಲಿ ಭಾರತದ ರಸ್ತೆಯಲ್ಲಿ ಹ್ಯೂಮನ್ ಪವರ್ಡ್ ವಾಹನವನ್ನು ಚಲಾಯಿಸಲು ಅವಕಾಶ ಇದೆಯಾ ಎಂದು ಪ್ರಶ್ನಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net