ನೇತಾಜಿ ಸುಭಾಷ್​ಚಂದ್ರ ಬೋಸ್​ ಅವರ ಸಂಬಂಧಿ, ಹಿರಿಯ ರಾಜಕಾರಣಿ, ಖ್ಯಾತ ಶಿಕ್ಷಣತಜ್ಞೆ ಕೃಷ್ಣಾ ಬೋಸ್​ ನಿಧನ

Krishna Bose 22 Feb 20
Published on

ಕೋಲ್ಕತ: ನೇತಾಜಿ ಸುಭಾಷ್​ ಚಂದ್ರ ಬೋಸ್​ ಅವರ ಸಂಬಂಧಿ, ಖ್ಯಾತ ಶಿಕ್ಷಣತಜ್ಞೆ, ಮೂರು ಬಾರಿ ಲೋಕಸಭೆ ಸದಸ್ಯರಾಗಿ ಚುನಾಯಿತರಾಗಿದ್ದ ಕೃಷ್ಣಾ ಬೋಸ್​ ಅವರು ಇಂದು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಇಂದು ಹೃದಯಸ್ತಂಭನದಿಂದ ಮೃತಪಟ್ಟ ಕೃಷ್ಣಾ ಬೋಸ್​ (89)ಗೆ ಇಬ್ಬರು ಪುತ್ರರು ಹಾಗೂ ಪುತ್ರಿ ಇದ್ದಾರೆ. 1996ರಲ್ಲಿ ಮೊದಲಬಾರಿಗೆ ಕಾಂಗ್ರೆಸ್​ನಿಂದ ಪಶ್ಚಿಮ ಬಂಗಾಳದ ಜಾದವ್​ಪುರ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆದ್ದಿದ್ದರು. ಎರಡನೇ ಅವಧಿಗೂ ಅದೇ ಕ್ಷೇತ್ರದಿಂದ ಗೆದ್ದ ಕೃಷ್ಣಾ ಬೋಸ್​, 1999ರಲ್ಲಿ ತೃಣಮೂಲ ಕಾಂಗ್ರೆಸ್​ನಿಂದ ಸ್ಪರ್ಧಿಸಿದ್ದರು. ಅದೇ ಸಮಯದಲ್ಲಿ ಅವರು ನೇತಾಜಿ ರಿಸರ್ಚ್​ ಬ್ಯೂರೋದ ಅಧ್ಯಕ್ಷರಾಗಿ ನೇಮಕಗೊಂಡಿದ್ದರು.

ಕೃಷ್ಣಾ ಅವರು ರಾಜಕಾರಣದೊಂದಿಗೆ ಶಿಕ್ಷಣ ಕ್ಷೇತ್ರದಲ್ಲೂ ಗುರುತಿಸಿಕೊಂಡಿದ್ದರು. ಸಾಮಾಜಿಕ ಕಾರ್ಯಕರ್ತರೂ ಹೌದು. ಕೋಲ್ಕತ್ತದ ಸಿಟಿ ಕಾಲೇಜಿನಲ್ಲಿ 40 ವರ್ಷ ಬೋಧನೆ ಮಾಡಿದ್ದಾರೆ. ನಂತರ ಅದರ ಪ್ರಾಚಾರ್ಯರಾಗಿಯೂ ಕಾರ್ಯ ನಿರ್ವಹಿಸಿದ್ದರು.

ಮಕ್ಕಳ ಆರೋಗ್ಯಕ್ಕೆ ಸಂಬಂಧಪಟ್ಟ ಇನ್​ಸ್ಟಿಟ್ಯೂಟ್​ನ ಅಧ್ಯಕ್ಷೆಯಾಗಿದ್ದರು. ಹಿಂದುಳಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಸ್ಥಾಪನೆಯಾದ ವಿವೇಕ ಚೇತನಾ ಎಂಬ ಎನ್​ಜಿಒದ ಮುಖ್ಯಸ್ಥರಾಗಿದ್ದರು. ಅಂಗವಿಕಲರ ಏಳ್ಗೆಗಾಗಿಯೂ ಕೆಲಸ ಮಾಡಿದ್ದರು. ಇನ್ನು ಕೃಷ್ಣಾ ಅವರು ಇಂಗ್ಲಿಷ್​, ಬೆಂಗಾಳಿ ಭಾಷೆಯ ಜರ್ನಲ್​ಗಳಿಗೆ ಅಂಕಣಕಾರರೂ​ ಆಗಿದ್ದರು.

ಕೃಷ್ಣಾ ಬೋಸ್ ಅವರು ನೇತಾಜಿ ಸುಭಾಷ್​ ಚಂದ್ರ ಬೋಸ್​ ಅವರ ಸೋದರ ಸಂಬಂಧಿ ಸಿಸಿರ್​ ಬೋಸ್ ಅವರ ಪತ್ನಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net