‘ನೆಟ್ ಜೀರೋ ’ ಕಟ್ಟಡಗಳಿಂದ ಇಂಧನ ಉಳಿತಾಯ: ರುದ್ರಪ್ಪಯ್ಯ| Energy conservation building code

Work shop
Published on

ಬೆಂಗಳೂರು: ಇಂಧನ ಉಳಿತಾಯದ ಗುರಿ ಸಾಧಿಸಲು ಶೇ.100ರಷ್ಟು ನವೀಕರಿಸಬಹುದಾದ ಇಂಧನ ಬಳಕೆ ಮಾಡುವ ’ನೆಟ್ ಜೀರೋ’ ಕಟ್ಟಡಗಳು ಅತ್ಯಂತ ನಿರ್ಣಾಯಕವಾಗಿದೆ ಎಂದು ಕರ್ನಾಟಕ ನವೀಕರಿಸಬಹದಾದ ಇಂಧನ ಅಭಿವೃದ್ಧಿ ನಿಯಮಿತ (ಕ್ರೆಡಲ್)ದ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ.ರುದ್ರಪ್ಪಯ್ಯ ಹೇಳಿದರು.

ಕ್ರೆಡಲ್ ಕಚೇರಿಯಲ್ಲಿ ಆಯೋಜಿಸಿದ್ದ ಇಂಧನ ಸಂರಕ್ಷಣೆ ಕಟ್ಟಡ ಸಂಹಿತೆ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಇಸಿಬಿಸಿ ನಿಯಮಗಳ ಜಾರಿಗೆ ರಾಜ್ಯದ ಬದ್ಧವಾಗಿದೆ. ಇಂಧನ ಸಂರಕ್ಷಣಾ ಕಟ್ಟಡ ಸಂಹಿತೆ 100 ಕಿ.ವ್ಯಾ ಅಥವಾ ಹೆಚ್ಚಿನ ಸಂಪರ್ಕಿತ ಲೋಡ್ ಹೊಂದಿರುವ ಹೊಸ ವಾಣಿಜ್ಯ ಕಟ್ಟಡಗಳಿಗೆ ಇಂಧನ ದಕ್ಷತೆಯ ನಿರ್ದಿಷ್ಟ ನಿಯಮಗಳನ್ನು ನಿಗದಿಪಡಿಸಿದೆ.

ಪರಿಸರ ಸ್ನೇಹಿ ’ನೆಟ್ ಜೀರೋ’ ಕಟ್ಟಡಗಳ ನಿರ್ಮಾಣವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಇದು ಅತ್ಯಂತ ಮಹತ್ವದ್ದಾಗಿದೆ. ಈ ನಿಯಮಗಳ ಅಳವಡಿಕೆಯಿಂದ ಸಾಂಪ್ರದಾಯಿಕ ಇಂಧನದ ಬಳಕೆ ತಗ್ಗವುದು, ಎಂದರು.

ಕಟ್ಟಡಗಳಿಗೆ ಬಳಕೆ

ದೇಶದಲ್ಲಿ ವಾರ್ಷಿಕವಾಗಿ ಉತ್ಪಾದನೆಯಾಗುವ ಒಟ್ಟು ವಿದ್ಯುತ್ತಿನಲ್ಲಿ ಮೂರನೇ ಒಂದರಷ್ಟು ಭಾಗ ಕಟ್ಟಡಗಳಿಗೆ ಬಳಕೆಯಾಗುತ್ತಿದೆ. ಹಸಿರುಮನೆ ಅನಿಲ ಹೊರಸೂಸುವಿಕೆಯ ಅತಿದೊಡ್ಡ ಕಾರಣಗಳಲ್ಲಿ ಇದು ಒಂದಾಗಿದೆ.

2030ರ ವೇಳೆಗೆ ಅಗತ್ಯವಾಗಲಿರುವ ಕಟ್ಟಡಗಳ ಪೈಕಿ ಶೇ.70ರಷ್ಟು ಇನ್ನೂ ನಿರ್ಮಾಣ ಮಾಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ನೆಟ್ ಜೀರೋ ಕಟ್ಟಡಗಳಿಗೆ ಆದ್ಯತೆ ನೀಡುವುದು ಮುಖ್ಯವಾಗಿದೆ ಎಂದು ರುದ್ರಪ್ಪಯ್ಯ ಪ್ರತಿಪಾದಿಸಿದರು.

ಈ ಕಾರ್ಯಾಗಾರದಲ್ಲಿ ಕೇಂದ್ರದ ಇಂಧನ ದಕ್ಷತೆ ಬ್ಯೂರೋ(ಬಿಇಇ) ನಿರ್ದೇಶಕಿ ಪ್ರವತನಾಲಿನಿ ಸಮಲ್, ಇಸಿಬಿಸಿ ಮಾಸ್ಟರ್ ತರಬೇತುದಾರರಾದ ಕನಕರಾಜ್ ಗಣೇಶನ್, ಕುಲದೀಪ್ ಕುಮಾರ್ ಸಾದೇವಿ, 300ಕ್ಕೂ ಹೆಚ್ಚು ಅಧಿಕಾರಿಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net