ಎನ್‌ಇಪಿ ಗೊಂದಲ ಪರಿಹಾರಕ್ಕೆ ಕ್ರಮ: ಕುಲಪತಿ ಪ್ರೊ.ಬಿ.ಪಿ.ವೀರಭದ್ರಪ್ಪ ಭರವಸೆ

nes
Published on

ಶಿವಮೊಗ್ಗ: ರಾಜ್ಯ ಸರ್ಕಾರ ಹೊಸದಾಗಿ ವಿಶ್ವ ವಿದ್ಯಾಲಯಗಳನ್ನು ಆರಂಭಿಸಲು ತೀರ್ಮಾನಿಸಿರುವುದು ಒಳ್ಳೆಯ ಸಂಗತಿಯಾಗಿದೆ. ಸರ್ಕಾರದ ತೀರ್ಮಾನದಿಂದ ಪ್ರಾದೇಶಿಕವಾಗಿ ಪರಿಣಾಮಕಾರಿ ಶಿಕ್ಷಣ ನೀಡುವುದು ಸಾಧ್ಯವಾಗಲಿದೆ ಎಂದು ಕುವೆಂಪು ವಿವಿ ಕುಲಪತಿ ಪ್ರೊ.ಬಿ.ಪಿ.ವೀರಭದ್ರಪ್ಪ ಅಭಿಪ್ರಾಯಪಟ್ಟರು.

ನಗರದ ಎನ್‌ಇಎಸ್ ಕಾಲೇಜಿನಲ್ಲಿ ಶುಕ್ರವಾರ ಹೊಸ ಶಿಕ್ಷಣ ನೀತಿ ಕುರಿತು ಶಿಕ್ಷಕರಿಗೆ ಏರ್ಪಡಿಸಿದ್ದ ಎರಡು ದಿನಗಳ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ನೂತನ ಶಿಕ್ಷಣ ನೀತಿಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಯೋಜನೆಗಳನ್ನು ಸಿದ್ಧಪಡಿಸಲಾಗಿದೆ. ಹೊಸ ವ್ಯವಸ್ಥೆಯಾದ್ದರಿಂದ ಸಣ್ಣಪುಟ್ಟ ಗೊಂದಲಗಳಿರುವುದು ಸಹಜ. ಅವುಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂಂದು ಅನುಷ್ಟಾನಗೊಳಿಸಲು ಅನೇಕ ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದು ತಿಳಿಸಿದರು.

ವಿಶ್ವ ಗುರು ಆಗುವತ್ತ ಮುನ್ನಡೆಯುತ್ತಿರುವ ಭಾರತಕ್ಕೆ ಯುವ ಸಮೂಹದ ನಾವಿನ್ಯಯುತ ಚಿಂತನೆಗಳು ಸಹಕಾರಿಯಾಗಿವೆ. ಶಿಕ್ಷಣ ಹಾಗೂ ಆರ್ಥಿಕ ವ್ಯವಸ್ಥೆ ಒಂದಕ್ಕೊಂದು ಪೂರಕವಾಗಿವೆ. ವಿದ್ಯಾರ್ಥಿಗಳು ಕೇವಲ ಒಂದು ಪ್ರಾದೇಶಿಕತೆಗೆ ಸೀಮಿತವಾಗದೇ ಲಭ್ಯವಿರುವ ಎಲ್ಲ ಅವಕಾಶಗಳನ್ನು ಬಳಸಿಕೊಳ್ಳಬೇಕು. ತಾಂತ್ರಿಕ ಕೌಶಲ ಹಾಗೂ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಎನ್‌ಇಎಸ್ ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿ, ಇಂದು ಅನೇಕ ವಲಯಗಳಲ್ಲಿ ತಾಂತ್ರಿಕತೆಯ ಮೂಲಕ ಬದಲಾವಣೆಗಳಾಗಿವೆ. ಶಿಕ್ಷಣ ಕ್ಷೇತ್ರವೂ ತಾಂತ್ರಿಕತೆ ಹಾಗೂ ಬದಲಾವಣೆಯಿಂದ ಹೊರಗುಳಿದಿಲ್ಲ. ಉದ್ಯೋಗದಾತರ ಅವಶ್ಯಕತೆಗೆ ತಕ್ಕಂತೆ ವಿದ್ಯಾರ್ಥಿಗಳನ್ನು ರೂಪುಗೊಳಿಸಬೇಕಿದೆ ಎಂದರು.

ಎನ್‌ಇಎಸ್ ಅಧ್ಯಕ್ಷ ಜಿ.ಎಸ್.ನಾರಾಯಣ ರಾವ್ ಅಧ್ಯಕ್ಷತೆ ವಹಿಸಿದ್ದರು. ಕುವೆಂಪು ವಿವಿ ಡೀನ್ ಪ್ರೊ.ಜಗನ್ನಾಥ ಡಾಂಗೆ, ಪ್ರಾಚಾರ್ಯ ಡಾ.ಎನ್.ಕೆ.ಚಿದಾನಂದ, ಕಾರ್ಯಕ್ರಮ ಸಂಯೋಜಕಿ ಡಾ.ಸಿ.ಇ.ಲಾವಣ್ಯ ಮುಂತಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net