

ಶಿವಮೊಗ್ಗ: ಬಾಹ್ಯಾಕಾಶ ಸಂಶೋಧನೆ ಮತ್ತು ಸಾಧನೆಯಲ್ಲಿ ಭಾರತದ ಗೌರವ ವಿಶ್ವಮಟ್ಟದಲ್ಲಿ ಇಮ್ಮಡಿಗೊಂಡಿದೆ. ಹಿಂದುಳಿದ ದೇಶವೆಂಬ ಹಣೆಪಟ್ಟಿ ಕಳಚಿಕೊಂಡು ಹತ್ತು ಹಲವು ಸಂಶೋಧನೆಗಳ ಮೂಲಕ ವಿಶ್ವದ ಪ್ರಬಲ ರಾಷ್ಟ್ರಪಟ್ಟಿಯಲ್ಲಿ ಆರನೇ ಸ್ಥಾನ ಪಡೆದಿದ್ದು ಭವಿಷ್ಯದಲ್ಲಿ ಮತ್ತಷ್ಟು ಉನ್ನತ ಸ್ಥಾನಕ್ಕೇರುವ ಗುರಿಯನ್ನು ಇಸ್ರೋ (ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ) ಮೂಲಕ ಹೊಂದಿದೆ ಎಂದು ಪದ್ಮಭೂಷಣ ಪುರಸ್ಕೃತ, ಇಸ್ರೋ ಮಾಜಿ ವಿಜ್ಞಾನಿ ಡಾ. ಬಿ.ಎನ್.ಸುರೇಶ್ ಹೇಳಿದರು.
ಕುವೆಂಪು ರಂಗಮಂದಿರದಲ್ಲಿ ಸೋಮವಾರ ಎನ್‌ಇಎಸ್(ರಾಷ್ಟ್ರೀಯ ಶಿಕ್ಷಣ ಸಮಿತಿ)ಯ ಅಮೃತ ಮಹೋತ್ಸವ ನಿಮಿತ್ತ ಎಸ್.ಆರ್.ನಾಗಪ್ಪಶೆಟ್ಟಿ ಸ್ಮಾರಕ ರಾಷ್ಟ್ರೀಯ ಅನ್ವಯಿಕ ವಿಜ್ಞಾನ ಕಾಲೇಜಿನಿಂದ ಉಪನ್ಯಾಸ ಮಾಲಿಕೆ-9 ಅನ್ನು ಉದ್ಘಾಟಿಸಿ, ರಾಷ್ಟ್ರಕ್ಕೆ ಬಾಹ್ಯಾಕಾಶ ತಂತ್ರಜ್ಞಾನದ ಕೊಡುಗೆ: ಅಂದು, ಇಂದು ಮತ್ತು ಮುಂದು ಕುರಿತು ಉಪನ್ಯಾಸ ನೀಡಿದರು.
ಭಾರತ ಇಂದು ಬಾಹ್ಯಾಕಾಶದಲ್ಲಿ ಅಮೆರಿಕಾ, ರಷ್ಯಾ, ಯೂರೋಪ್, ಚೀನಾ ಮತ್ತು ಜಪಾನ್ ದೇಶಗಳಿಗೆ ಸರಿಸಮನಾಗಿ ನಿಂತಿದೆ. 103 ಉಪಗ್ರಹಗಳನ್ನು ಒಟ್ಟಿಗೆ ಹಾರಿಸಿ ದಾಖಲೆ ನಿರ್ಮಿಸಿದೆ. ಹಿಂದುಳಿದ ದೇಶವೆಂದು ಸುಮ್ಮನೆ ಕೂರದೇ ಹಲವು ಸಾಧನೆಗಳನ್ನು ಮಾಡಿದೆ. ಸರಿಸುಮಾರು 140 ಕೋಟಿಯಷ್ಟು ಜನಸಂಖ್ಯೆ ಹೊಂದಿರುವ ಭಾರತದಲ್ಲಿ 58 ಉಪಗ್ರಹಗಳು ಜೀವಂತವಾಗಿವೆ. ಏಷ್ಯಾದಲ್ಲಿ ಇಂತಹ ಸಾಧನೆ ಮಾಡಿದ ಮೊದಲ ದೇಶವೆಂಬ ಹೆಗ್ಗಳಿಕೆ ನಮ್ಮದಾಗಿದೆ ಎಂದರು.
ಭವಿಷ್ಯದಲ್ಲಿ 40 ಸಾವಿರ ಸಣ್ಣ ಸಣ್ಣ ಉಪಗ್ರಹಗಳನ್ನು 560 ಕಿಲೋಮಿಟರ್ ಕಕ್ಷೆಯಲ್ಲಿ ಹಾರಿಸುವುದು. 2023ರ ಆಗಸ್ಟ್ ಅಥವಾ ಸೆಪ್ಟಂಬರ್ ವೇಳೆಗೆ ಚಂದ್ರಯಾನ ಕೈಗೊಳ್ಳುವುದು ಸೇರಿದಂತೆ ಹಲವು ಯೋಜನೆಗಳು ಇಸ್ರೋ ಮುಂದಿದೆ. ಕಳೆದ ಐದು ದಶಕಗಳಲ್ಲಿ ಇಸ್ರೋದ ಸೇವೆ ಎಲ್ಲ ವರ್ಗದವರಿಗೂ ಸಿಕ್ಕಿದೆ ಎಂಬುದನ್ನು ಹೇಳಲು ಹೆಮ್ಮೆ ಎನ್ನಿಸುತ್ತಿದೆ. ಪ್ರಸ್ತುತ ಸಂಶೋಧನೆಗಾಗಿ ಒಂದು ರೂ. ಖರ್ಚು ಮಾಡಿದರೆ 3 ರೂ. ವಾಪಸ್ ಸಿಗುತ್ತಿದೆ. ಆ ಮಟ್ಟಿಗೆ ಇಸ್ರೋ ಸಂಶೋಧನೆಗಳು ಯಶಸ್ವಿಯಾಗಿವೆ ಎಂದು ಹೇಳಿದರು.
ಎನ್‌ಇಎಸ್ ಕಾರ್ಯದರ್ಶಿ ಎಸ್.ಎನ್.ನಾಗರಾಜ್ ಮಾತನಾಡಿ, ವಿದ್ಯಾರ್ಥಿಗಳು ಹೆಚ್ಚು ಕುತೂಹಲ ಬೆಳೆಸಿಕೊಳ್ಳಬೇಕು. ವೈಜ್ಞಾನಿಕ ಅರಿವು ಇರಬೇಕು. ಆ ಮೂಲಕ ವಿಜ್ಞಾನವನ್ನು ತಿಳಿಯಲು ಪ್ರಯತ್ನಿಸಬೇಕು. ಬಹಳಷ್ಟು ವಿದ್ಯಾರ್ಥಿಗಳಲ್ಲಿ ಬಾಹ್ಯಾಕಾಶದ ಬಗ್ಗೆ ತಪ್ಪು ಕಲ್ಪನೆಗಳಿದ್ದು ಬ್ರಹ್ಮಾಂಡ ಎನ್ನುವುದು ವಿಸ್ತರಣೆ ಆಗುತ್ತಿದೆ. ಬಾಹ್ಯಾಕಾಶ ತಂತ್ರಜ್ಞಾನದ ಬಗ್ಗೆ ಆಳವಾಗಿ ಅಧ್ಯಯನ ಮಾಡಿದಾಗ ಮಾತ್ರ ಸಂಶೋಧನೆಗಳು ಯಶಸ್ವಿಯಾಗುತ್ತವೆ ಎಂದರು.
ಸಮಿತಿ ಅಧ್ಯಕ್ಷ ಜಿ.ಎಸ್.ನಾರಾಯಣ ರಾವ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಸಿ.ಆರ್.ನಾಗರಾಜ್, ಸಹ ಕಾರ್ಯದರ್ಶಿ ಡಾ. ಪಿ.ನಾರಾಯಣ, ಖಜಾಂಚಿ ಡಿ.ಜಿ.ರಮೇಶ್, ಕಾಲೇಜಿನ ಪ್ರಾಚಾರ್ಯ ಡಾ. ಕೆ.ಎಲ್.ಅರವಿಂದ್ ಉಪಸ್ಥಿತರಿದ್ದರು.