

1) ನನಗೆ ಹರ್ನಿಯಾ ಸಮಸ್ಯೆ, ಹೊಕ್ಕುಳಿನ ಅಂಡವಾಯು ಇದೆ. ಯೋಗಚಿಕಿತ್ಸೆ ತಿಳಿಸಿ.
| ಹೆಸರು ಬೇಡ ಬಳ್ಳಾರಿ (48 ವರ್ಷ)
ಹರ್ನಿಯಾಕ್ಕೆ ಕಾರಣಗಳು: ಸ್ನಾಯುಗಳ ದೌರ್ಬಲ್ಯ, ಒತ್ತಡ, ದೀರ್ಘಕಾಲದ ಕೆಮ್ಮು, ಶಸ್ತ್ರಚಿಕಿತ್ಸೆ, ಹೊಟ್ಟೆಯ ಮೇಲೆ ಅತಿಯಾದ ಒತ್ತಡ, ದೀರ್ಘಕಾಲದ ಮಲಬದ್ಧತೆ, ಭಾರವನ್ನು ಎತ್ತುವುದು ಇತ್ಯಾದಿ ಹರ್ನಿಯಾದ ಕಾರಣಗಳು. ಇದನ್ನು ಯೋಗಭಂಗಿಗಳಿಂದ ತಕ್ಷಣ ಗುಣಪಡಿಸಲು ಸಾಧ್ಯವಿಲ್ಲ. ಒಮ್ಮೆ ವೈದ್ಯರಲ್ಲಿ ಪರಿಶೀಲಿಸಿ. ಕೆಲವು ಸಂದರ್ಭದಲ್ಲಿ ಶಸ್ತ್ರಚಿಕಿತ್ಸೆ ಮಾಡುತ್ತಾರೆ. ಯೋಗದ ಮೂಲಕ ಕಿಬ್ಬೊಟ್ಟೆಯ ಸ್ನಾಯುಗಳನ್ನು ಬಲಪಡಿಸಬಹುದು. ಇದು ದೇಹದ ಕೊಬ್ಬನ್ನು ಕಡಿಮೆ ಮಾಡುತ್ತದೆ. ಯೋಗವು ಮರುಕಳಿಕೆಯನ್ನು ತಪ್ಪಿಸಲು ಸಹಾಯ ಮಾಡುತ್ತದೆ. ಹರ್ನಿಯಾ ಮೊದಲ ಸ್ಥಾನದಲ್ಲಿ ಬರದಂತೆ ತಡೆಯಲು ಸಹಾಯ ಮಾಡುತ್ತದೆ. ನೀವು ವೈದ್ಯರ ಅಥವಾ ಯೋಗತಜ್ಞರ ಮೇಲ್ವಿಚಾರಣೆಯಲ್ಲಿ ಕ್ರಮೇಣ ಯೋಗಾಸನವನ್ನು ಪ್ರಾರಂಭಿಸಿ. ಆರಂಭದಲ್ಲಿ ಸರಳ ವ್ಯಾಯಾಮಗಳನ್ನು ಮಾಡಿ.
ಸೂಚಿತ ಆಸನಗಳು: ಮತ್ಸ್ಯಾಸನ, ಬದ್ಧಕೋಣಾಸನ, ವಜ್ರಾಸನ, ಮಂಡೂಕಾಸನ, ಮಾರ್ಜಾಲಾಸನ (ಕ್ಯಾಟ್ ಕ್ಯಾಮೆಲ್ ಭಂಗಿ) ಅರ್ಧಉಷ್ಟ್ರಾಸನ, ಉತ್ಥಿತ ಏಕಪಾದಾಸನ, ಯೋಗಮುದ್ರಾಸನ, ನೌಕಾಸನ, ವಿಪರೀತ ಶವಾಸನ, ನಾಡಿಶುದ್ಧಿ, ಧ್ಯಾನ, ಮುದ್ರೆಗಳಲ್ಲಿ ಅಪಾನಮುದ್ರೆ, ವಾಯುಶೂನ್ಯಮುದ್ರೆ ಹಾಗೂ ಪ್ರಾಣಮುದ್ರೆ ಮಾಡಿ.
2) ಮಾರ್ಜಾಲಾಸನ ಮಾಡುವುದು ಹೇಗೆ? ಇದರ ಉಪಯೋಗಗಳು ಏನೆಂದು ತಿಳಿಸಿ.
| ಚಿನ್ನಪ್ಪ ಪುತ್ತೂರು (50 ವರ್ಷ)
ಜಮಖಾನದ ಮೇಲೆ ಮೊಣಕಾಲು ಮತ್ತು ಕೈಗಳನ್ನು ಊರಿ ನೆಲೆಸಿ. ಊರಿರುವ ಕೈಗಳು ಊರಿರುವ ಮೊಣಕಾಲಗಳು ನೇರಕ್ಕೆ ಸರಿಯಾಗಿರಲಿ. ಆನಂತರ ಉಸಿರನ್ನು ತೆಗೆದುಕೊಳ್ಳುತ್ತ ತಲೆ, ಕುತ್ತಿಗೆಯನ್ನು ಮೇಲಕ್ಕೆತ್ತಿ ದೃಷ್ಟಿ ಮೇಲೆ ನೋಡುತ್ತಿರಲಿ. ನಂತರ ಉಸಿರನ್ನು ಬಿಡುತ್ತ ತಲೆಯನ್ನು ಎರಡೂ ಕೈಗಳ ನಡುವೆ ತನ್ನಿ. ಹಾಗೆಯೇ ಹೊಟ್ಟೆಯ ಭಾಗ ಮತ್ತು ಎದೆಯ ಭಾಗವನ್ನು ಒಳಕ್ಕೆಳೆದುಕೊಳ್ಳಬೇಕು. ಬೆನ್ನನ್ನು ಸ್ವಲ್ಪ ಹಿಗ್ಗಿಸಿ. ನಂತರ ಸಹಜ ಸ್ಥಿತಿಗೆ ಬರಬೇಕು. ಈ ಸ್ಥಿತಿಗೆ ಕ್ಯಾಟ್ ಕ್ಯಾಮೆಲ್ ಭಂಗಿ ಎಂದು ಹೆಸರು. ಮೂರರಿಂದ ಆರು ಬಾರಿ ಈ ಆಸನದ ಅಭ್ಯಾಸ ನಡೆಸಿ ವಿಶ್ರಮಿಸಿ.
ಪ್ರಯೋಜನ: ಬೆನ್ನು ಮೂಳೆಯನ್ನು ಸಡಿಲಗೊಳಿಸಲು ಸಹಾಯ ಮಾಡುತ್ತದೆ. ಕಿಬ್ಬೊಟ್ಟೆಯ ಸ್ನಾಯುಗಳ ಬಲಗೊಳ್ಳುತ್ತವೆ. ಬೆನ್ನು ಮತ್ತು ಕತ್ತಿನ ಒತ್ತಡವನ್ನು ಬಿಡುಗಡೆ ಮಾಡುತ್ತದೆ. ಈ ಆಸನ ಅಭ್ಯಾಸ ಮಾಡುವಾಗ ಭುಜಗಳು, ಸೊಂಟ, ಹೊಟ್ಟೆ, ಎದೆ ಬೆನ್ನು ಮತ್ತು ಶ್ವಾಸಕೋಶದ ಸ್ನಾಯುಗಳನ್ನು ಬಲಪಡಿಸುತ್ತದೆ. ಕೈಗಳಿಗೆ, ಕಾಲುಗಳಿಗೆ, ಸೊಂಟಕ್ಕೆ ವ್ಯಾಯಾಮ ದೊರಕುತ್ತದೆ. ಮುಟ್ಟಿನ ದೋಷಗಳ (ಪೀರಿಯಡ್ಸ್) ನಿಯಂತ್ರಣಕ್ಕೆ ಸಹಕಾರಿ. ಸ್ವಾಧಿಷ್ಠಾನ ಚಕ್ರ ಪುನಶ್ಚೇತನಗೊಳ್ಳುತ್ತದೆ.