Nepal | ನೇಪಾಳದ ಹಿಂಸಾಚಾರ; ಭಾರತಕ್ಕೆ ನೆರೆಯ ರಾಷ್ಟ್ರದ ಸ್ಥಿರತೆ, ಶಾಂತಿ ಮುಖ್ಯ ಎಂದ ಪ್ರಧಾನಿ ಮೋದಿ!

Nepal
Published on

Nepal: ನೇಪಾಳದಲ್ಲಿ ಹೆಚ್ಚುತ್ತಿರುವ ಹಿಂಸಾಚಾರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ (ಸೆಪ್ಟೆಂಬರ್​​ 9) ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.

ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಪ್ರಧಾನಿ ಮೋದಿ, ನೆರೆಯ ರಾಷ್ಟ್ರದ ಸ್ಥಿರತೆ, ಶಾಂತಿ ಮತ್ತು ಸಮೃದ್ಧಿ ಭಾರತಕ್ಕೆ ತುಂಬಾ ಮುಖ್ಯವಾಗಿದ್ದು, ನೇಪಾಳದ ನಾಗರಿಕರು ಶಾಂತತೆ ಕಾಯ್ದುಕೊಳ್ಳುವಂತೆ ಒತ್ತಾಯಿಸಿದರು. ನಡೆಯುತ್ತಿರುವ ಹಿಂಸಾಚಾರ ಹೃದಯ ವಿದ್ರಾವಕವಾಗಿದ್ದು, ಅನೇಕರು ತಮ್ಮ ಪ್ರಾಣವನ್ನು ಕಳೆದುಕೊಂಡಿರುವ ವಿಷಯ ಕೇಳಿ ದುಃಖವಾಗಿದೆ, ಅಲ್ಲಿನ ನನ್ನ ಎಲ್ಲಾ ಸಹೋದರ ಸಹೋದರಿಯರಿಗೆ ಶಾಂತಿಯನ್ನು ಬೆಂಬಲಿಸುವಂತೆ ನಾನು ವಿನಮ್ರವಾಗಿ ಮನವಿ ಮಾಡುತ್ತೇನೆ ಎಂದು ಬರೆದಿದ್ದಾರೆ.

ಪ್ರವಾಹ ಪೀಡಿತ ಪಂಜಾಬ್ ಮತ್ತು ಹಿಮಾಚಲ ಪ್ರದೇಶಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ, ಭದ್ರತಾ ಕುರಿತ ಸಂಪುಟ ಸಮಿತಿಯ ಸಭೆಯಲ್ಲಿ ನೇಪಾಳದಲ್ಲಿನ ಬೆಳವಣಿಗೆಗಳ ಕುರಿತು ಚರ್ಚಿಸಲಾಗಿದೆ ಎಂದು ಹೇಳಿದರು.

ಸಂಸತ್ತಿಗೆ ನುಗ್ಗಲು ಯತ್ನಿಸಿದ ಪ್ರತಿಭಟನಾಕಾರರ ಮೇಲೆ ಭದ್ರತಾ ಪಡೆಗಳು ಗುಂಡು ಹಾರಿಸಿದಾಗ 20 ಜನರು ಸಾವನ್ನಪ್ಪಿ, ಸುಮಾರು 100 ಜನರು ಗಾಯಗೊಂಡ ಒಂದು ದಿನದ ನಂತರ, ನೇಪಾಳದಲ್ಲಿನ ಪ್ರಕ್ಷುಬ್ಧತೆಯಿಂದಾಗಿ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಮಂಗಳವಾರ (ಸೆಪ್ಟೆಂಬರ್​​ 9) ರಾಜೀನಾಮೆ ನೀಡಿದ್ದಾರೆ.

ಶೀಘ್ರ ನೂತನ ಪ್ರಧಾನಿ ಆಯ್ಕೆ ಸಾಧ್ಯತೆ

ಕಳೆದ ವಾರ ಸಾಮಾಜಿಕ ಜಾಲತಾಣಗಳ ಮೇಲೆ ವ್ಯಾಪಕ ನಿಷೇಧ ಹೇರಿದ್ದ ನೇಪಾಳ ಸರ್ಕಾರ, ಹಿಂಸಾಚಾರದ ನಂತರ ನಿರ್ಬಂಧಗಳನ್ನು ತೆಗೆದುಹಾಕಿತು, ಆದರೆ ಅನಿರ್ದಿಷ್ಟ ಕರ್ಫ್ಯೂ ಹೊರತಾಗಿಯೂ ಪ್ರತಿಭಟನೆಗಳು ಮುಂದುವರೆದವು ಎನ್ನಲಾಗಿದೆ. ಪ್ರಧಾನಿ ಓಲಿ ತಮ್ಮ ರಾಜೀನಾಮೆಯನ್ನು, ಅಧ್ಯಕ್ಷ ರಾಮಚಂದ್ರ ಪೌಡೆಲ್ ಅವರಿಗೆ ಸಲ್ಲಿಸಿದ್ದು, ಸಂವಿಧಾನಕ್ಕೆ ಅನುಗುಣವಾಗಿ ಸಮಸ್ಯೆಯನ್ನು ಪರಿಹರಿಸಲು ರಾಜೀನಾಮೆ ನೀಡುತ್ತಿರುವುದಾಗಿ ಹೇಳಿದ್ದಾರೆ. ಪೌಡೆಲ್ ಹೊಸ ಪ್ರಧಾನಿಯನ್ನು ಆಯ್ಕೆ ಮಾಡಲು ಚರ್ಚೆ ನಡೆಸಿದ್ದು, ಪ್ರತಿಭಟನಾ ನಿರತರನ್ನು ಮಾತುಕತೆಗೆ ಕರೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕರ್ಫ್ಯೂ ಆದೇಶಗಳನ್ನು ಧಿಕ್ಕರಿಸಿದ ಪ್ರತಿಭಟನಾಕಾರರು ಟೈರ್‌ಗಳಿಗೆ ಬೆಂಕಿ ಹಚ್ಚಿ, ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದರು ಮತ್ತು ರಾಜಕಾರಣಿಗಳ ಮನೆಗಳನ್ನು ಗುರಿಯಾಗಿಸಿಕೊಂಡರು ಎನ್ನಲಾಗಿದ್ದು, ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಹಲವಾರು ಸಚಿವರನ್ನು ಮಿಲಿಟರಿ ಹೆಲಿಕಾಪ್ಟರ್‌ಗಳ ಮೂಲಕ ಬೇರೆಡೆಗೆ ಸ್ಥಳಾಂತರಿಸಬೇಕಾಯಿತು, ಆದರೆ ಪ್ರಧಾನಿ ಓಲಿ ಅವರ ನಿವಾಸ ಮತ್ತು ಸಿಂಘಾ ದರ್ಬಾರ್ ಆಡಳಿತ ಸಂಕೀರ್ಣದ ಕೆಲವು ಭಾಗಗಳಿಗೆ ಬೆಂಕಿ ಹಚ್ಚಲಾಯಿತು. ಬೆಂಕಿಯಿಂದ ಉಂಟಾದ ಭಾರೀ ಹೊಗೆಯಿಂದಾಗಿ ಕಠ್ಮಂಡುವಿನ ಪ್ರಮುಖ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ.

ಪ್ರಧಾನಿ ಓಲಿ ರಾಜೀನಾಮೆ ಸುದ್ದಿ ಕೇಳಿ ಸಂತೋಷದಿಂದ ಸಂಸತ್ತಿನ ಸಂಕೀರ್ಣಕ್ಕೆ ನುಗ್ಗಿದ ಯುವಕರು, ಗೋಡೆಯ ಮೇಲೆ ದೊಡ್ಡ ಅಕ್ಷರಗಳಲ್ಲಿ "ನಾವು ಗೆದ್ದಿದ್ದೇವೆ" ಎಂದು ಬರೆದು ಧ್ವಜಗಳನ್ನು ಬೀಸುತ್ತಾ ಘೋಷಣೆಗಳನ್ನು ಕೂಗಿದರು ಎಂದು ವರದಿಯಾಗಿದೆ.

2008 ರಿಂದ ನೇಪಾಳ ರಾಜಕೀಯ ಅಸ್ಥಿರತೆಯೊಂದಿಗೆ ಹೋರಾಡುತ್ತಿದ್ದು. ಅಲ್ಲಿಂದ 14 ವಿಭಿನ್ನ ಸರ್ಕಾರಗಳನ್ನು ಕಂಡಿದೆ, ಅವುಗಳಲ್ಲಿ ಯಾವ ಪಕ್ಷವು ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಈಗ 73 ವರ್ಷ ವಯಸ್ಸಿನ ಓಲಿ ಕಳೆದ ವರ್ಷವಷ್ಟೇ ನಾಲ್ಕನೇ ಬಾರಿಗೆ ಅಧಿಕಾರ ವಹಿಸಿಕೊಂಡಿದ್ದರು.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net