

Nepal GenZ Protest: ನೇಪಾಳದಲ್ಲಿ ಭುಗಿಲೆದ್ದಿರುವ ಪ್ರತಿಭಟನೆ ಇದೀಗ ತೀವ್ರ ಹಿಂಸಾಚಾರಕ್ಕೆ ತಿರುಗಿದೆ. ಪ್ರತಿಭಟನಾಕಾರರು ನೇಪಾಳ ಪ್ರಧಾನಿ ಮತ್ತು ರಾಷ್ಟ್ರಪತಿ ಮನೆಗೆ ಬೆಂಕಿಯಿಟ್ಟು ಆಕ್ರೋಶ ಹೊರಹಾಕಿದ್ದಾರೆ. ಪ್ರತಿಭಟನಾಕಾರರು ಪಿಎಂ ಓಲಿ ಸಚಿವರನ್ನು ಗುರಿಯಾಗಿಸಿಕೊಂಡಿದ್ದು, ರಸ್ತೆಯಲ್ಲಿ ಅಟ್ಟಾಡಿಸಿ, ಥಳಿಸುತ್ತಿರುವ ದೃಶ್ಯಗಳು ಜಾಲತಾಣಗಳಲ್ಲಿ ವೈರಲ್ ಆಗಿವೆ. ಈ ಮಧ್ಯೆ ನೇಪಾಳದ ಮಾಜಿ ಪ್ರಧಾನಿ ಪತ್ನಿ ಮೃತಪಟ್ಟಿದ್ದು, ಪ್ರತಿಭಟನಾಕಾರರ ಕಿಚ್ಚಿಗೆ ಉಸಿರು ಚೆಲ್ಲಿದ್ದಾರೆ.
ನೇಪಾಳದ ಮಾಜಿ ಪ್ರಧಾನಿ ಜಲನಾಥ್ ಖಾನಲ್ ಅವರ ಮನೆಗೆ ಬೆಂಕಿಯಿಟ್ಟ ಪ್ರತಿಭಟನಾಕಾರರು, ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ಸೇನೆಯ ಸಹಾಯದಿಂದ ಜಲನಾಥ್ರನ್ನು ಹೊರತರುವಲ್ಲಿ ಯಶಸ್ವಿಯಾಯಿತು. ಆದರೆ, ಈ ವೇಳೆಗೆ ಬಹುತೇಕ ಬೆಂಕಿಗೆ ಆಹುತಿಯಾಗಿದ್ದ ಅವರ ಪತ್ನಿ ರಾಜ್ಯಲಕ್ಷ್ಮಿ ಚಿತ್ರಾಕರ್, ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ ಎಂದು 'ಎನ್ಡಿವಿ' ವರದಿ ಉಲ್ಲೇಖಿಸಿದೆ.
ದೇಶದಲ್ಲಿ ವಿಪರೀತ ಕಿಚ್ಚು ವ್ಯಕ್ತವಾಗುತ್ತಿರುವ ಹಿನ್ನೆಲೆ, ನೇಪಾಳ ಪ್ರಧಾನಿ ಸ್ಥಾನಕ್ಕೆ ಕೆ.ಪಿ. ಶರ್ಮಾ ಓಲಿ ಈ ಕೂಡಲೇ ರಾಜೀನಾಮೆ ಕೊಡಬೇಕು ಎಂಬ ಒತ್ತಾಯಗಳು ಕೇಳಿಬಂದಿತ್ತು. ಇದಕ್ಕೆ ಪುಷ್ಠಿ ನೀಡುವಂತೆ ಈಗಾಗಲೇ ಅನೇಕ ಸಚಿವರು ರಾಜೀನಾಮೆ ಘೋಷಿಸಿ, ಸರ್ಕಾರದಿಂದ ದೂರ ಸರಿದಿದ್ದಾರೆ. ಈ ಎಲ್ಲ ಬೆಳವಣಿಗೆಗಳು ಅವರನ್ನು ಬಲವಂತವಾಗಿ, ಬೇರೆ ದಾರಿಯಿಲ್ಲದೆ ರಾಜೀನಾಮೆ ಕೊಡುವಂತೆ ಮಾಡಿತು.
‘ದಿ ಕಠ್ಮಂಡು ಪೋಸ್ಟ್’ ವರದಿಯ ಪ್ರಕಾರ, ನೇಪಾಳದಲ್ಲಿ ಫೇಸ್‌ಬುಕ್ ಬಳಕೆದಾರರ ಸಂಖ್ಯೆ ಸುಮಾರು 13.5 ಮಿಲಿಯನ್ ಮತ್ತು ಇನ್‌ಸ್ಟಾಗ್ರಾಮ್ ಬಳಕೆದಾರರ ಸಂಖ್ಯೆ 3.6 ಮಿಲಿಯನ್ ಎಂದು ತಿಳಿಸಲಾಗಿದೆ. ಬಹುತೇಕರು ತಮ್ಮ ದೈನಂದಿನ ಕೆಲಸಕ್ಕೆ ಇಂತಹ ಸಾಮಾಜಿಕ ಮಾಧ್ಯಮದ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ. ಹೀಗಿರುವಾಗ, ಸೋಷಿಯಲ್ ಮೀಡಿಯಾ ಏಕಾಏಕಿ ಸ್ಥಗಿತಗೊಂಡಿದ್ದು, ಅಲ್ಲಿನ ಜನರನ್ನು ಕೆರಳಿಸಿದೆ. ಈ ವಿಚಾರದಲ್ಲಿ ಸರ್ಕಾರ ತನ್ನ ನಿರ್ಧಾರವನ್ನು ಬದಲಿಸುವಂತೆ ಒತ್ತಾಯಿಸಿ, ಬೃಹತ್ ಸಂಖ್ಯೆಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.
“ನಾವೆಲ್ಲರೂ (ಪ್ರತಿಭಟನಾಕಾರರು) ಸೋಷಿಯಲ್ ಮೀಡಿಯಾ ಬ್ಯಾನ್ನಿಂದ ಪ್ರಚೋದನೆಗೆ ಒಳಗಾಗಿದ್ದೇವೆ. ನಾವಿಲ್ಲಿ ಒಟ್ಟಾಗಿ ಸೇರಿರುವುದಕ್ಕೆ ಇದೊಂದೇ ಕಾರಣವಲ್ಲ. ನೇಪಾಳದಲ್ಲಿ ಸಾಂಸ್ಥಿಕಗೊಳಿಸಲಾಗಿರುವ ಭ್ರಷ್ಟಾಚಾರದ ವಿರುದ್ಧ ನಾವು ಪ್ರತಿಭಟಿಸುತ್ತಿದ್ದೇವೆ” ಎಂದು ವಿದ್ಯಾರ್ಥಿನಿ ಯುಜನ್ ರಾಜ್‌ಭಂಡಾರಿ ಸುದ್ದಿ ಸಂಸ್ಥೆ ‘AFP’ಗೆ ತಿಳಿಸಿದ್ದಾರೆ.
ಮತ್ತೊಬ್ಬರು ವಿದ್ಯಾರ್ಥಿನಿ ಇಕ್ಷಾಮಾ ತುಮ್ರೋಕ್ ಪ್ರತಿಕ್ರಿಯಿಸಿ, “ಸರ್ಕಾರದ ಸರ್ವಾಧಿಕಾರಿ ಮನೋಭಾವದ ವಿರುದ್ಧ ಪ್ರತಿಭಟಿಸುತ್ತಿದ್ದೇವೆ. ನಾವು ಬದಲಾವಣೆಯನ್ನು ನೋಡಲು ಬಯಸುತ್ತಿದ್ದೇವೆ. ಈ ಹಿಂದಿನವರು ಇದನ್ನು ಸಹಿಸಿಕೊಂಡಿರಬಹುದು. ಆದರೆ, ಇದೆಲ್ಲವೂ ನಮ್ಮ ಪೀಳಿಗೆಯೊಂದಿಗೆ ಕೊನೆಗಾಣಬೇಕು” ಎಂದಿದ್ದಾರೆ,(ಏಜೆನ್ಸೀಸ್).