

ಪುಟ್ಟರಾಷ್ಟ್ರ ನೇಪಾಳದಲ್ಲಿ ಮತ್ತೊಮ್ಮೆ ಕ್ಷೋಭೆ ಭುಗಿಲೆದ್ದಿದೆ. ಸಾಮಾಜಿಕ ಮಾಧ್ಯಮ ನಿರ್ಬಂಧದ ಮೂಲಕ ಯುವಕರ ದನಿ ಅದುಮಲು ಹೊರಟಿದ್ದ ಸರ್ಕಾರದ ನಡೆಗೆ ಭಾರಿ ಆಕ್ರೋಶ ವ್ಯಕ್ತವಾಗಿದೆ. ಸೋಮವಾರ ರಾಜಧಾನಿ ಕಾಠ್ಮಂಡುವಿನ ಬೀದಿಯಲ್ಲಿ ಲಕ್ಷಾಂತರ ಜನರು ಸೇರಿ ಸಾಮಾಜಿಕ ಮಾಧ್ಯಮ ನಿರ್ಬಂಧ ಹಿಂಪಡೆಯಬೇಕೆಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಭಾಗಿಯಾದವರಲ್ಲಿ ಬಹುತೇಕ 18ರಿಂದ 30 ವರ್ಷದೊಳಗಿನವರೇ (ಜನರೇಷನ್ ಝುಡ್) ಆಗಿದ್ದರು.
ನೇಪಾಳ ಅಕ್ಷರಶಃ ರಣರಂಗವಾಗಿದೆ. ಲಕ್ಷಾಂತರ ಜನರು ಬೀದಿಗಿಳಿದು ಸರ್ಕಾರದ ವಿರುದ್ಧ ಪ್ರತಿಭಟನೆ ಆರಂಭಿಸಿದ್ದು, ದುರದೃಷ್ಟವಶಾತ್ ಇದು ಹಿಂಸಾಚಾರಕ್ಕೆ ತಿರುಗಿದೆ. ಚೀನಾದ ನಡೆಗಳನ್ನು ಅನುಸರಿಸುತ್ತಿರುವ ಮತ್ತು ಡ್ರಾ್ಯಗನ್ ರಾಷ್ಟ್ರದ ಪ್ರಭಾವಕ್ಕೆ ಒಳಗಾಗಿರುವ ನೇಪಾಳ ಸರ್ಕಾರ ಚೀನಾದಂತೆಯೇ ಸಾಮಾಜಿಕ ಮಾಧ್ಯಮಗಳ ಮೇಲೆ ಅಂಕುಶ ಹಾಕಲು ಹೋಗಿ, ಈಗ ಇಕ್ಕಟ್ಟಿಗೆ ಸಿಲುಕಿದೆ. ಮಾತ್ರವಲ್ಲ, ಜನಾಕ್ರೋಶದ ಅಲೆಯನ್ನೇ ಎದುರಿಸುವಂತಾಗಿದೆ.
ಫೇಸ್ಬುಕ್, ಇನ್ಸ್ಟಾಗ್ರಾಮ್ ವಾಟ್ಸ್ಆಪ್, ಯೂಟ್ಯೂಬ್, ಎಕ್ಸ್, ರೆಡ್ಡಿಟ್, ಲಿಂಕ್ಡ್ ಇನ್, ಪ್ರಿಂಟ್ರೆಸ್ಟ್, ಸಿಗ್ನಲ್ ಸಹಿತ 26 ಸಾಮಾಜಿಕ ಜಾಲತಾಣಗಳು ಮತ್ತು ಮೆಸೇಜಿಂಗ್ ಆಪ್ಗಳನ್ನು ಪ್ರಧಾನಿ ಕೆ.ಪಿ.ಶರ್ವ ಓಲಿ ನೇತೃತ್ವದ ಸರ್ಕಾರ ಸೆಪ್ಟೆಂಬರ್ 4ರ ಮಧ್ಯರಾತ್ರಿ ಬಳಿಕ ನಿಷೇಧಿಸಿದೆ. ಇದರ ಬೆನ್ನಲ್ಲೇ ದೇಶಾದ್ಯಂತ ಗೊಂದಲ ಸೃಷ್ಟಿಯಾಗಿ, ಅವ್ಯವಸ್ಥೆ ಉಂಟಾದವು. ವ್ಯಾಪಾರ ವಹಿವಾಟು, ಪ್ರವಾಸೋದ್ಯಮದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತು. ಜನರು ಬೇರೆ ದೇಶದಲ್ಲಿರುವ ತಮ್ಮಪ್ರೀತಿಪಾತ್ರರೊಂದಿಗೆ ಸಂವಹನ ಮಾಡದ ಪರಿಸ್ಥಿತಿ ನಿರ್ವಣವಾಯಿತು. ಅಷ್ಟಕ್ಕೂ ನೇಪಾಳ ಸರ್ಕಾರ ಸಾಮಾಜಿಕ ಮಾಧ್ಯಮಗಳ ವಿರುದ್ಧ ಕ್ರಮ ಕೈಗೊಳ್ಳುತ್ತಿರುವುದು ಇದೇ ಮೊದಲೇನಲ್ಲ. ದ್ವೇಷ ಭಾಷಣ ಹಾಗೂ ಸೈಬರ್ ಅಪರಾಧದ ಕಾರಣ ಕೊಟ್ಟು 2023ರಲ್ಲಿ ಟಿಕ್ಟಾಕ್ನ್ನು ಒಂಬತ್ತು ತಿಂಗಳು ನಿಷೇಧಿಸಲಾಗಿತ್ತು. ಸರ್ಕಾರದೊಂದಿಗೆ ನೋಂದಣಿ ಮಾಡಿಕೊಂಡ ಬಳಿಕ ಮತ್ತೆ ಕಾರ್ಯಾಚರಣೆಗೆ ಅವಕಾಶ ನೀಡಲಾಗಿತ್ತು.
ಸೋಮವಾರ ನಡೆದ ಬೃಹತ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದವರ ಪೈಕಿ ಬಹುತೇಕರು ಶಾಲೆ ಮತ್ತು ಕಾಲೇಜುಗಳ ವಿದ್ಯಾರ್ಥಿಗಳೇ ಆಗಿದ್ದರು. ಸಾಮಾಜಿಕ ಜಾಲತಾಣಗಳನ್ನು ಹೆಚ್ಚಾಗಿ ಬಳಸುವುದು ತರುಣವರ್ಗವೇ. ಆದರೆ, ಸರ್ಕಾರ ಹೊಸ ನಿಯಮಾವಳಿಗಳ ನೆಪ ಹೇಳಿ ದಿಢೀರನೆ ಸಾಮಾಜಿಕ ಜಾಲತಾಣಗಳನ್ನು ಬಂದ್ ಮಾಡಿರುವುದು ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಈ ಪ್ರತಿಭಟನೆಯಲ್ಲಿ ಜನರೇಶನ್ ಝೆಡ್ (1997ರಿಂದ 2012ರವರೆಗೆ ಜನಿಸಿದವರು)ನವರೇ ಹೆಚ್ಚಾಗಿ ಪಾಲ್ಗೊಂಡಿದ್ದರು. ಸಾಮಾನ್ಯವಾಗಿ, ಈ ಪೀಳಿಗೆಯವರು ಸಾಮಾಜಿಕ ವಿಷಯಗಳಿಗೆ ಸ್ಪಂದಿಸುವುದಿಲ್ಲ, ತಮ್ಮದೇ ಆದ ಲೋಕದಲ್ಲಿ ಮಗ್ನರಾಗಿರುತ್ತಾರೆ ಎಂಬ ಆಕ್ಷೇಪವಿದೆ. ಆದರೆ, ನೇಪಾಳದ ಘಟನೆ ಈ ಅಪವಾದವನ್ನು ಸುಳ್ಳಾಗಿಸಿದೆ. 18ರಿಂದ 28 ವರ್ಷದೊಳಗಿನವರು ಸರ್ಕಾರದ ವಿರುದ್ಧ ಬಹಿರಂಗವಾಗಿ ದನಿ ಎತ್ತಿದ್ದು, ಅಭಿವ್ಯಕ್ತಿ ಸ್ವಾತಂತ್ರ್ಯದ ರಕ್ಷಣೆಗೆ ಮುಂದಾಗಿದ್ದಾರೆ. ಮಾತ್ರವಲ್ಲ, ನೇಪಾಳದ ಈ ಘಟನೆ ಇತರ ದೇಶದ ಜೆನ್ ಝೆಡ್ ಪೀಳಿಗೆಯನ್ನೂ ಪ್ರಭಾವಿಸಲಿದೆ ಎನ್ನುತ್ತಾರೆ ತಜ್ಞರು.
ಪ್ರತಿಭಟನಾಕಾರರ ಆಗ್ರಹ: ಸರ್ಕಾರ ಜನರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನೇ ಕಸಿದುಕೊಳ್ಳಲು ಹೊರಟಿದ್ದು ಖಂಡನಾರ್ಹ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಸಾಮಾಜಿಕ ಜಾಲತಾಣಗಳ ನಿಷೇಧ ಬೇಡ, ಧ್ವನಿಗಳನ್ನು ಹತ್ತಿಕ್ಕುವುದು ಬೇಡ’, ‘ಅಭಿವ್ಯಕ್ತಿ ಸ್ವಾತಂತ್ರ್ಯ ನಮ್ಮ ಹಕ್ಕು’, ‘ಪ್ರಜಾಪ್ರಭುತ್ವ ಛಿದ್ರವಾಯಿತು, ಸರ್ವಾಧಿಕಾರ ಮತ್ತೆ ಮರಳಿತು’ ಎಂಬ ಯುವಕರ ಘೋಷಣೆ ಕಾಠ್ಮಂಡು ಬೀದಿಗಳಲ್ಲಿ ಅನುರಣಿಸಿದವು.
ಓಲಿ ಸರ್ಕಾರದ ವಿರುದ್ಧ ಅಸಮಾಧಾನದ ಅಲೆ: ಕೆ.ಪಿ. ಶರ್ಮಾ ಓಲಿ ಸರ್ಕಾರದ ವಿರುದ್ಧ ಜನರು ಅಸಮಾಧಾನಗೊಂಡಿರುವುದಕ್ಕೆ ಮೂಲ ಕಾರಣ ನೇಪಾಳದಲ್ಲಿ ಭ್ರಷ್ಟಾಚಾರ ತೀವ್ರ ಪ್ರಮಾಣದಲ್ಲಿ ಹೆಚ್ಚಿರುವುದು. ಇದು ಜನಸಾಮಾನ್ಯರ ಬದುಕನ್ನೇ ಪ್ರಭಾವಿಸಿದ್ದು, ಸಂಕಷ್ಟವನ್ನು ಹೆಚ್ಚಿಸಿದೆ. ಜನರು ಅದರಲ್ಲೂ ಯುವಕರು ಭ್ರಷ್ಟಾಚಾರ ಮತ್ತು ಬೆಲೆಯೇರಿಕೆ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದುದ್ದು, ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿತ್ತು.
ದ್ವೇಷ ಭಾಷಣ, ಸುಳ್ಳು ಸುದ್ದಿ ಹಾಗೂ ಆನ್ಲೈನ್ ಅಪರಾಧಗಳನ್ನು ನಿಗ್ರಹಿಸಲು ಸರ್ಕಾರ ಸಾಮಾಜಿಕ ಮಾಧ್ಯಮ ಸಂಸ್ಥೆಗಳಿಗೆ ಹೊಸ ನಿಯಮಾವಳಿ ರೂಪಿಸಿದೆ. ಅದರಂತೆ, ಸರ್ಕಾರದಡಿ ನೋಂದಣಿ ಮಾಡಿಕೊಳ್ಳಲು ನೇಪಾಳ ಸುಪ್ರೀಂ ಕೋರ್ಟ್ ಸಾಮಾಜಿಕ ಜಾಲತಾಣ ಕಂಪನಿಗಳಿಗೆ 7 ದಿನಗಳ ಕಾಲಾವಕಾಶ ನೀಡಿತ್ತು. ಈ ಅವಧಿ ಸೆ.2ರಂದು ಕೊನೆಗೊಂಡಿತು. ಕೋರ್ಟ್ ಆದೇಶವನ್ನು ಪಾಲಿಸಲು ವಿಫಲವಾದ ಕಂಪನಿಗಳಿಗೆ ನಿರ್ಬಂಧ ಹೇರಲು ನೋಟಿಸ್ ಹೊರಡಿಸಲಾಯಿತು ಎಂದು ನೇಪಾಳದ ಸಂಪರ್ಕ ಮತ್ತು ಮಾಹಿತಿ-ತಂತ್ರಜ್ಞಾನ ಸಚಿವಾಲಯ ತಿಳಿಸಿದೆ. ಆದರೆ, ಸರ್ಕಾರದ ನಿರ್ಧಾರವನ್ನು ಅಂತಾರಾಷ್ಟ್ರೀಯ ಹಕ್ಕುಗಳ ಸಂಸ್ಥೆಗಳು ಟೀಕಿಸಿವೆ. ‘ಪತ್ರಿಕಾ ಸ್ವಾತಂತ್ರ್ಯಕ್ಕೆ ಈ ನಿರ್ಧಾರ ಅಪಾಯಕಾರಿ’ ಎಂದು ಪತ್ರಕರ್ತರ ರಕ್ಷಣಾ ಸಮಿತಿ ಎಂಬ ಸರ್ಕಾರೇತರ ಸಂಸ್ಥೆ ಹೇಳಿದೆ.
ಪ್ರತಿಭಟನೆ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಸರ್ಕಾರದ ಮೇಲೆ ಒತ್ತಡ ಸೃಷ್ಟಿಯಾಗಿದ್ದು, ಸಾಮಾಜಿಕ ಜಾಲತಾಣಗಳ ಮೇಲಿನ ನಿಷೇಧವನ್ನು ಹಿಂಪಡೆಯುವ ನಿರ್ಧಾರವನ್ನು ಶೀಘ್ರದಲ್ಲೇ ಪ್ರಕಟಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಪ್ರತಿಭಟನಾಕಾರರು ಪೊಲೀಸರೊಂದಿಗೆ ವಾಗ್ವಾದ ನಡೆಸಿ, ಸೋಮವಾರ ಸಂಸತ್ ಭವನಕ್ಕೆ ನುಗ್ಗಲು ಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ಅಶ್ರುವಾಯು, ಲಾಠಿ ಚಾರ್ಜ್, ರಬ್ಬರ್ ಬುಲೆಟ್ ಹಾಗೂ ಜಲಫಿರಂಗಿ ಪ್ರಯೋಗಿಸಿ ಆಕ್ರೋಶಿತರನ್ನು ತಡೆಯಲು ಯತ್ನಿಸಿದರು. ಆದರೆ, ಪ್ರತಿಭಟನಾಕಾರರ ಆಕ್ರೋಶ ತೀವ್ರವಾಗಿತ್ತು. ಈ ಸಂದರ್ಭದಲ್ಲಿ ಪೊಲೀಸರು ನೋಡುನೋಡುತ್ತಲೇ ಎರಾ›ಬಿರ್ರಿಯಾಗಿ ಹಲವು ಸುತ್ತು ಗುಂಡು ಹಾರಿಸಿದ ಪರಿಣಾಮ 20 ಯುವಕರು ಮೃತಪಟ್ಟಿದ್ದು, 200ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಘಟನೆಯ ಬಳಿಕ ಕಾಠ್ಮಂಡುವಿನಲ್ಲಿ ಕರ್ಫ್ಯೂ ಘೋಷಿಸಲಾಗಿದ್ದು, ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಹಿಂಸಾಚಾರದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಸರ್ಕಾರ ಕೂಡಲೇ ಸೂಕ್ತ ಪರಿಹಾರ ಘೋಷಿಸಬೇಕು ಎಂದು ರಾಷ್ಟ್ರೀಯ ಮಾನವ ಹಕ್ಕು ಆಯೋಗ ಆಗ್ರಹಿಸಿದೆ.
ನೇಪಾಳದಲ್ಲಿ ಹಿಂಸಾಚಾರ ಭುಗಿಲೇಳುತ್ತಿದ್ದಂತೆ ನೈತಿಕ ಹೊಣೆ ಹೊತ್ತು ಗೃಹ ಸಚಿವ ರಮೇಶ್ ಲೇಖಕ್, ಪ್ರಧಾನಿ ಕೆ.ಪಿ.ಶರ್ವ ಓಲಿ ಅವರಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ಭದ್ರತಾ ಪಡೆಗಳು ಪ್ರತಿಭಟನಾಕಾರರ ಮೇಲೆ ನಡೆಸಿದ ಬಲಪ್ರಯೋಗದಲ್ಲಿ ಆಗಿರುವ ಸಾವುಗಳು ತೀವ್ರ ದುಃಖವನ್ನುಂಟು ಮಾಡಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಸಂಸತ್ ಭವನಕ್ಕೆ ನುಗ್ಗಲು ಯತ್ನಿಸಿದ ಘಟನೆ ನೇಪಾಳದಲ್ಲಿ ಇದೇ ಮೊದಲ ಬಾರಿಗೆ ಸಂಭವಿಸಿದೆ. ಸಂಸತ್ ಆವರಣದಲ್ಲಿ 12 ಸಾವಿರಕ್ಕೂ ಅಧಿಕ ಯುವಕರು ಸೇರಿದ್ದರು.
ಹಿಂಸಾಚಾರ ಹಾಗೂ ಪ್ರಕ್ಷುಬ್ಧ ಪರಿಸ್ಥಿತಿ ತಲೆದೋರಿರುವುದರಿಂದ ಸೆಪ್ಟೆಂಬರ್ನಲ್ಲಿ ನಡೆಯಬೇಕಿದ್ದ 9, 10 ಹಾಗೂ 11ನೇ ತರಗತಿಯ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಹಲವು ನಗರಗಳಲ್ಲಿ ಮಂಗಳವಾರ ಮತ್ತು ಬುಧವಾರ ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಹಲವು ಸಂಘಸಂಸ್ಥೆಗಳು, ಸೆಲೆಬ್ರಿಟಿಗಳು ಪ್ರತಿಭಟನೆಗೆ ಬೆಂಬಲ ನೀಡಿದ್ದು, ಸರ್ಕಾರದ ನಡೆಯನ್ನು ವಿರೋಧಿಸಿವೆ.
ಸರ್ಕಾರದ ವಿರುದ್ಧ ದನಿ ಎತ್ತುವವರನ್ನು ಹತ್ತಿಕ್ಕುವ ಪ್ರಯತ್ನವನ್ನು ಓಲಿ ಸರ್ಕಾರ ಮಾಡುತ್ತಿದೆ. ಹೀಗಾಗಿ, ಪತ್ರಕರ್ತರ ಮೇಲೂ ನಿಷೇಧದ ತೂಗುಗತ್ತಿ ನೇತಾಡುತ್ತಿದೆ. ಪತ್ರಿಕಾ ಸ್ವಾತಂತ್ರ್ಯ ಹಾಗೂ ಸಾಮಾಜಿಕ ಜಾಲತಾಣಗಳ ಮೇಲೆ ಮೂಗುದಾರ ಹಾಕುವ ಹಲವು ಕರಡು ಮಸೂದೆಗಳು ನೇಪಾಳ ಸಂಸತ್ತಿನಲ್ಲಿದೆ. ನಿಯಮ ಉಲ್ಲಂಘನೆಯನ್ನು ರಾಷ್ಟ್ರೀಯ ಹಿತಾಸಕ್ತಿಗೆ ವಿರೋಧ ಎಂದು ಪರಿಗಣಿಸಿ, ನಾಗರಿಕರಿಗೆ ದಂಡ ಹಾಗೂ ಜೈಲು ಶಿಕ್ಷೆ, ಪತ್ರಿಕೆಗಳನ್ನು ಮುಚ್ಚಲು ಸರ್ಕಾರಕ್ಕೆ ಅಧಿಕಾರ ಹಾಗೂ ಪತ್ರಕರ್ತರ ಮಾನ್ಯತೆ ರದ್ದು ಮಾಡುವ ಅಧಿಕಾರ ಇರಲಿದೆ.
ದೇಶವನ್ನು ದುರ್ಬಲಗೊಳಿಸುವುದನ್ನು ಸಹಿಸಲಸಾಧ್ಯ. ಕೆಲವರು ಕೆಲಸ ಕಳೆದುಕೊಳ್ಳು ವುದು ದೇಶದ ಸಾರ್ವಭೌಮತೆಗಿಂತ ಮಿಗಿಲಲ್ಲ.| ಕೆ.ಪಿ.ಶರ್ವ ಓಲಿ ನೇಪಾಳದ ಪ್ರಧಾನಿ