

Nepal Royal Massacre: ಪ್ರಸ್ತುತ, ನೇಪಾಳ ಸರ್ಕಾರವನ್ನು ಪ್ರಾಯಶಃ ಕೆಡವಿರುವ ಜೆನ್ಝಿ ಪ್ರತಿಭಟನಾಕಾರರು, ಸೋಷಿಯಲ್ ಮೀಡಿಯಾ ಬ್ಯಾನ್ ಸೇರಿ ದೇಶದಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರದ ವಿರುದ್ಧ ಭುಗಿಲೆದ್ದು, ಹಿಂಸಾಚಾರದ ಹೋರಾಟ ಕೈಗೊಂಡಿರುವುದು ಇಡೀ ಜಗತ್ತಿಗೆ ಗೊತ್ತಿದೆ. ನೇಪಾಳ ಮಾಜಿ ಪಿಎಂ ಓಲಿ ಸರ್ಕಾರದ ವಿರುದ್ಧ ಸಿಡಿದೆದ್ದ ಯುವಜನತೆ, ಮಾಜಿ ಪ್ರಧಾನಿ, ರಾಷ್ಟ್ರಪತಿಗಳ ಖಾಸಗಿ ನಿವಾಸಕ್ಕೆ ಬೆಂಕಿಹಚ್ಚಿ, ಕೋಪ ತೀರಿಸಿಕೊಂಡರು. ಈ ಘಟನೆಯಲ್ಲಿ ಇಲ್ಲಿಯವರೆಗೆ 20ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದು, ಬಹುತೇಕರು ಯುವಕರೇ ಆಗಿದ್ದಾರೆ. ಈ ವಿಚಾರದ ನಡುವೆ 2001ರ ರಾಜಮನೆತನದ ಹತ್ಯಾಕಾಂಡ ಮುನ್ನೆಲೆಗೆ ಬಂದಿರುವುದು ಸದ್ಯ ಹಲವರ ಗೊಂದಲಕ್ಕೆ ಕಾರಣವಾಗಿದೆ.
ನೇಪಾಳ ರಾಜಮನೆತನದ ಹತ್ಯಾಕಾಂಡ ವಿಷಯ ಈಗೇಕೆ ಮುನ್ನೆಲೆಗೆ ಬಂದಿತು ಎಂಬ ಪ್ರಶ್ನೆ ಸದ್ಯ ಹಲವರನ್ನು ಕಾಡುತ್ತಿದೆ. ಅದು ಜೂನ್ 1, 2001. ನೇಪಾಳ ರಾಜನ ಅರಮನೆಯಲ್ಲಿ ಔತಣಕೂಟವನ್ನು ಆಯೋಜಿಸಲಾಗಿತ್ತು. ಮಹಾರಾಜ ಬೀರೇಂದ್ರ ಬೀರ್ ವಿಕ್ರಮ್ ಶಾ ದೇವ್ ಸಂಭ್ರಮದ ಪಾರ್ಟಿ ಆಯೋಜಿಸಿದ್ದರು. ಮಹಾರಾಣಿ ಐಶ್ವರ್ಯ ರಾಜ್ಯ ಲಕ್ಷ್ಮಿ ದೇವಿ ಶಾ ಕೂಡ ಇದ್ದರು. ಅವರೊಂದಿಗೆ, ರಾಜಕುಮಾರ ದೀಪೇಂದ್ರ ಶಾ, ಕಿರಿಯ ರಾಜಕುಮಾರ ನಿರಂಜನ್ ಮತ್ತು ರಾಜಕುಮಾರಿ ಶ್ರುತಿ ಕೂಡ ಪಾರ್ಟಿಯಲ್ಲಿ ಉಪಸ್ಥಿತರಿದ್ದರು.
ಪಾರ್ಟಿಯ ಸಂಭ್ರಮ ಪ್ರಾರಂಭವಾಗಿತ್ತು. ಅತಿಥಿಗಳು ಮದ್ಯಪಾನದಲ್ಲಿ ತೊಡಗಿದ್ದರು. ಅಲ್ಲಿಯವರೆಗೆ ಅಲ್ಲಿದ್ದ ರಾಜಕುಮಾರ ದೀಪೇಂದ್ರ ಇದ್ದಕ್ಕಿದ್ದಂತೆ ಒಳಗೆ ನುಸುಳಿ, ಕಮಾಂಡೋ ವೇಷದಲ್ಲಿ ಹೊರಬಂದರು. ಈ ಸಮಯದಲ್ಲಿ ತಮ್ಮೊಂದಿಗೆ ಬಂದೂಕನ್ನು ಹಿಡಿದು ತಂದಿದ್ದು, ಅಲ್ಲಿದ್ದವರನ್ನು ಅಚ್ಚರಿಗೆ ದೂಡಿತು. ಅತಿಥಿಗಳೊಂದಿಗೆ ಮಾತನಾಡುತ್ತಿದ್ದ ತನ್ನ ತಂದೆಗೆ ಗುಂಡು ಹಾರಿಸಿದ ಆತ, ತಾಯಿ ಸೇರಿದಂತೆ ಉಳಿದವರ ಉಸಿರು ನಿಲ್ಲಿಸಿದ. ರಾಜಮನೆತನದ ಐವರನ್ನೂ ಗುಂಡಿಕ್ಕಿ ಕೊಂದ ದೀಪೇಂದ್ರ, ಎಲ್ಲರೂ ಸತ್ತ ನಂತರ ತಾನೂ ಬಂದೂಕಿನಿಂದ ಗುಂಡು ಹಾರಿಸಿಕೊಂಡ.
ದೀಪೇಂದ್ರ ತಕ್ಷಣಕ್ಕೆ ಉಸಿರು ಚೆಲ್ಲಲಿಲ್ಲ. ಬದಲಿಗೆ ಆತ ಕೋಮಾಗೆ ಹೋಗಿದ್ದ. 2 ಎರಡು ದಿನಗಳ ಬಳಿಕ ಜೂನ್ 4ರಂದು ಮೃತಪಟ್ಟ. ಅಸಲಿಗೆ ದೀಪೇಂದ್ರ ಗುಂಡು ಹಾರಿಸಲು ಕಾರಣವೇನು? ಇದರ ಬಗ್ಗೆ ಹಲವು ವಿಚಾರಗಳಿವೆ ಎನ್ನಲಾಗಿದೆ. ಅದರಲ್ಲಿ ಅತ್ಯಂತ ಮುಖ್ಯವಾದುದು ಮತ್ತು ಬಹುತೇಕರು ನಂಬಿರುವುದು, ಅವನ ಹೆತ್ತವರು ತಾನು ಪ್ರೀತಿಸಿದ ಹುಡುಗಿಯೊಂದಿಗಿನ ಮದುವೆಗೆ ಒಪ್ಪಲಿಲ್ಲ ಎಂದು. ಇದೇ ಕಾರಣಕ್ಕೆ, ಆತ ತನ್ನವರನ್ನೇ ಕೊಲ್ಲಲು ಬಯಸಿದ ಎಂದು ಹೇಳಲಾಗಿದೆ,(ಏಜೆನ್ಸೀಸ್).