IND vs PAK ಪಂದ್ಯಕ್ಕೆ ದಿನಗಣನೆ! ಶೇ.50ರಷ್ಟು ಟಿಕೆಟ್​ಗಳ ಖರೀದಿ ಇನ್ನೂ ಬಾಕಿ; ಕೊಳ್ಳಲು ಮುಂದಾಗದ ಕ್ರಿಕೆಟ್​ ಫ್ಯಾನ್ಸ್​

Untitled design (13)
Published on

IND vs PAK Tickets: ಇದೇ ಸೆ.9ರಿಂದ ದುಬೈನಲ್ಲಿ ಆರಂಭಗೊಂಡಿರುವ ಏಷ್ಯಾಕಪ್ ಟಿ20 ಟೂರ್ನಿಗೆ ಕ್ರಿಕೆಟ್​ ಪ್ರೇಮಿಗಳಿಂದ ಉತ್ತಮ ಪ್ರತಿಕ್ರಿಯೆ ಲಭಿಸುತ್ತಿದೆ. ನಿನ್ನೆಯಷ್ಟೇ ಯುಎಇ ವಿರುದ್ಧ ಅತ್ಯಂತ ಸುಲಭ ಗೆಲುವು ದಾಖಲಿಸಿದ ಟೀಮ್ ಇಂಡಿಯಾ 9 ವಿಕೆಟ್​ಗಳ ಅಂತರದಲ್ಲಿ ತನ್ನ ಮೊದಲ ಪಂದ್ಯವನ್ನು ಗೆದ್ದು ಬೀಗಿತು. ಈ ಮಧ್ಯೆ ಕ್ರಿಕೆಟ್​ ಪ್ರಿಯರು ತೀವ್ರ ಕುತೂಹಲದಿಂದ ಕಾಯುತ್ತಿರುವುದು ಸೆ.14ರಂದು ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ಪಂದ್ಯಕ್ಕೆ. ಈ ಹೈವೋಲ್ಟೇಜ್ ಮ್ಯಾಚ್​ಗೆ ಸಾಕ್ಷಿಯಾಗಬೇಕಿದ್ದ ಅಭಿಮಾನಿಗಳೇ ಟಿಕೆಟ್​ ಖರೀದಿಸಲು ಇದೀಗ ಹಿಂದೇಟು ಹಾಕಿರುವುದು ಸದ್ಯ ಭಾರೀ ಆಶ್ಚರ್ಯಕ್ಕೆ ಕಾರಣವಾಗಿದೆ. ಅದರಲ್ಲೂ ಪಂದ್ಯಕ್ಕೆ ಇನ್ನು ಎರಡು ದಿನಗಳು ಬಾಕಿ ಉಳಿದಿರುವಾಗಲೇ ಎಂಬುದು ಗಮನಾರ್ಹ.

ಕ್ರಿಕೆಟ್​ ವರದಿಗಳ ಪ್ರಕಾರ, ಬಹುನಿರೀಕ್ಷಿತ ಹಾಗೂ ಭಾರೀ ರೋಚಕತೆಗೆ ಸಾಕ್ಷಿಯಾಗಲಿರುವ ಪಂದ್ಯ ಎನ್ನಲಾಗಿರುವ ಭಾರತ ಮತ್ತು ಪಾಕ್ ಪಂದ್ಯದ ಅರ್ಧದಷ್ಟು ಟಿಕೆಟ್​ಗಳು ಇನ್ನೂ ಬಾಕಿ ಉಳಿದಿದೆ. ಅಂದರೆ, ಸ್ಟೇಡಿಯಂ ತುಂಬ ಸೇರಬೇಕಿದ್ದ ಅಭಿಮಾನಿಗಳ ಪೈಕಿ ಕೇವಲ ಅರ್ಧದಷ್ಟು ಜನರು ಮಾತ್ರ ಟಿಕೆಟ್​ಗಳನ್ನು ಖರೀದಿಸಿ, ತಮ್ಮ ಸೀಟ್​ಗಳನ್ನು ಖಚಿತ ಪಡಿಸಿಕೊಂಡಿದ್ದಾರೆ. ಇನ್ನು ಶೇ.50ರಷ್ಟು ಟಿಕೆಟ್​ಗಳು ಬಾಕಿ ಉಳಿದಿದ್ದು, ಇವುಗಳನ್ನು ಕೊಳ್ಳಲು ಯಾರು ಮನಸ್ಸು ಮಾಡುತ್ತಿಲ್ಲ ಎಂಬುದೇ ಶಾಕಿಂಗ್ ವಿಚಾರ. ಅಸಲಿಗೆ ಹೀಗ್ಯಾಕೆ? ಎಂಬ ಪ್ರಶ್ನೆಗೆ ಬಲವಾದ ಉತ್ತರವಿದೆ.

2.5 ಲಕ್ಷ ರೂ. ಟಿಕೆಟ್​!

ಮೊದಲೇ ಭಾರತ ಮತ್ತು ಪಾಕ್ ಪಂದ್ಯಕ್ಕೆ ಭಾರೀ ನಿರೀಕ್ಷೆಯಿದೆ. ಹೀಗಿರುವಾಗ, ಪಂದ್ಯದ ಟಿಕೆಟ್​ ಬೆಲೆ ಸಾಮಾನ್ಯವಾಗಿ ದುಬಾರಿ ಇರಲಿದೆ. ಅಂದರೆ, ಕೈಗೆಟುಕುವ ದರಕ್ಕಿಂತ ಮೀರಿದ್ದು. ಒಂದಷ್ಟು ಟಿಕೆಟ್​ಗಳು ಕಡಿಮೆ ಬೆಲೆಗೆ ಸಿಕ್ಕರೆ, ಅದಕ್ಕಿಂತ ಮತ್ತೊಂದು ದರ್ಜೆಯ ಟಿಕೆಟ್​ ಬೆಲೆಯು ಬರೋಬ್ಬರಿ 2.5 ಲಕ್ಷ ರೂ. ತಲುಪಿದೆ. ಇದೇ ಅಭಿಮಾನಿಗಳನ್ನು ಖರೀದಿಯಿಂದ ಹಿಂದೆ ಸರಿಯುವಂತೆ ಮಾಡಿದೆ.

ರೋಹಿತ್-ಕೊಹ್ಲಿ ಅನುಪಸ್ಥಿತಿ

"ಪಂದ್ಯಗಳ ಮಾರಾಟದ ಹರಿವು ಬಹಳ ಕಡಿಮೆಯಾಗಿದೆ ಎಂಬ ವಿಚಾರ ತಿಳಿದು ಸ್ವತಃ ನಮಗೆ ಆಶ್ಚರ್ಯವಾಗಿದೆ. ನಾವು ಕಡಿಮೆ ಸ್ಟ್ಯಾಂಡ್‌ಗಳೊಂದಿಗೆ ಮಾತ್ರ ಸೋಲ್ಡ್ ಔಟ್ ಆಗಿದ್ದೇವೆ. ಆದರೆ, ಅದರ ಮೇಲಿನ ದರ್ಜೆಯ ಟಿಕೆಟ್​ಗಳು ಖರೀದಿಯಾಗದೆ ಇನ್ನೂ ಬಾಕಿ ಉಳಿದಿವೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಒಂದೇ ದಿನದಲ್ಲಿ ಎರಡು ಬಾರಿ ನಾವು ಟಿಕೆಟ್ ವಿಂಡೋವನ್ನು ಮಧ್ಯಾಹ್ನ 2 ಮತ್ತು ಸಂಜೆ 4 ಗಂಟೆಗೆ ತೆರೆದಿದ್ದೆವು. ಮತ್ತು ಆ ಸಮಯದಲ್ಲಿ ನಮ್ಮ ಟಿಕೆಟ್‌ಗಳು 4 ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ ಪೂರ್ತಿ ಸೋಲ್ಡ್ ಔಟ್ ಆಗಿತ್ತು. ಆದರೆ, ಈ ಬಾರಿ ಕ್ರೇಜ್ ಕುಸಿದಿದೆ. ಇದಕ್ಕೆ ರೋಹಿತ್ ಮತ್ತು ವಿರಾಟ್ ಅನುಪಸ್ಥಿತಿಯು ಕಾರಣವಿರಬಹುದು" ಎಂದು ಎಮಿರೇಟ್ಸ್ ಕ್ರಿಕೆಟ್‌ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net