ತೀವ್ರ ಪ್ರತಿಭಟನೆ ಕೈಬಿಡಲು ನಕಾರ! ನೇಪಾಳದಲ್ಲಿ 5 ಬೇಡಿಕೆ ಮುಂದಿಟ್ಟ 'ಜೆನ್​ಝಿ' | Nepal GenZ Protest

Untitled design (1)
Published on

Nepal GenZ Protest: ನೇಪಾಳದಲ್ಲಿ ಭುಗಿಲೆದ್ದಿರುವ ಪ್ರತಿಭಟನೆ ಸದ್ಯ ಭಾರೀ ಹಿಂಸಾಚಾರಕ್ಕೆ ತಿರುಗಿದೆ. ಪ್ರತಿಭಟನಾಕಾರರು ನೇಪಾಳ ಪ್ರಧಾನಿ ಮತ್ತು ರಾಷ್ಟ್ರಪತಿ ಮನೆಗೆ ಬೆಂಕಿಯಿಟ್ಟರೆ, ಹಣಕಾಸು ಸಚಿವನನ್ನು ನಡುರಸ್ತೆಯಲ್ಲೇ ಅಟ್ಟಾಡಿಸಿ ಥಳಿಸಿದ್ದಾರೆ. ಈ ದೃಶ್ಯಗಳು ಜಾಲತಾಣಗಳಲ್ಲಿ ಹರಿದಾಡಿದ್ದು, ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದೆ.

ಕೇವಲ ಸೋಷಿಯಲ್ ಮೀಡಿಯಾ ಬ್ಯಾನ್​ ಮಾಡಿದ್ದಕ್ಕೆ ಮಾತ್ರ ಸಿಡಿದೇಳದ ಯುವಜನತೆ, ಓಲಿ ಸರ್ಕಾರದಲ್ಲಿ ಭ್ರಷ್ಟಾಚಾರ ನಡೆಯುತ್ತಿತ್ತು ಎಂದು ಆರೋಪಿಸಿ ತೀವ್ರ ಪ್ರತಿಭಟನೆ ಕೈಗೊಂಡರು. ಸಾವಿರಾರೂ ಸಂಖ್ಯೆಯಲ್ಲಿ ಪ್ರಧಾನಿ ಓಲಿ ಮತ್ತು ರಾಷ್ಟ್ರಪತಿಗಳ ಖಾಸಗಿ ನಿವಾಸಕ್ಕೆ ಮುತ್ತಿಗೆ ಹಾಕಿದ ಪ್ರತಿಭಟನಾಕಾರರು, ಬೆಂಕಿ ಹಚ್ಚಿ ತಮ್ಮ ಕಿಚ್ಚನ್ನು ತೀರಿಸಿಕೊಂಡರು. ಇಲ್ಲಿಯವರೆಗೆ 19 ಮಂದಿ ಸಾವಿಗೀಡಾಗಿದ್ದು, 100ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಇದೆಲ್ಲದರ ಮಧ್ಯೆ ನೇಪಾಳದ ಮಾಜಿ ಪ್ರಧಾನಿ ಪತ್ನಿ ಮೃತಪಟ್ಟಿದ್ದು, ಪ್ರತಿಭಟನಾಕಾರರ ಕಿಚ್ಚಿಗೆ ಉಸಿರು ಚೆಲ್ಲಿರುವುದು ದುರಂತ. ಪ್ರಸ್ತುತ, ಸೇನೆ ನೇಪಾಳ ವಿಮಾನ ನಿಲ್ದಾಣವನ್ನು ಸುತ್ತುವರೆದಿದ್ದು, ಕಟ್ಟುನಿಟ್ಟಿನ ಕ್ರಮವನ್ನು ಕೈಗೊಂಡಿದ್ದಾರೆ. ಇಷ್ಟಾದರೂ ಸಹ ಪ್ರತಿಭಟನಾಕಾರರ ಕಿಚ್ಚಿನ ಹೋರಾಟ ಇನ್ನೂ ಕೊನೆಗೊಂಡಿಲ್ಲ.

ಜೆನ್​ಝಿ ಪ್ರತಿಭಟನಾಕಾರರ ಬೇಡಿಕೆಗಳೇನು?

  • ಪ್ರಸ್ತುತ, ಪ್ರತಿನಿಧಿ ಸಭೆಯು ಸಾರ್ವಜನಿಕರ ನಂಬಿಕೆಯನ್ನು ಕಳೆದುಕೊಂಡಿದೆ ಮತ್ತು ಈ ಕೂಡಲೇ ವಿಸರ್ಜನೆ ಆಗಬೇಕು.
  • ಸಂವಿಧಾನವನ್ನು ತಿದ್ದುಪಡಿ ಮಾಡಬೇಕು ಅಥವಾ ಸಂಪೂರ್ಣವಾಗಿ ಪುನಃ ರಚಿಸಬೇಕು ಮತ್ತು ಅದಕ್ಕಾಗಿ ಯುವಕರು, ನಾಗರಿಕರು ಮತ್ತು ತಜ್ಞರ ಭಾಗವಹಿಸುವಿಕೆಯನ್ನು ಪರಿಗಣಿಸಬೇಕು.
  • ಹೆಚ್ಚುವರಿಯಾಗಿ, ಮಧ್ಯಂತರ ಅವಧಿಯ ನಂತರ ಹೊಸ ಚುನಾವಣೆಗಳನ್ನು ಕೈಗೊಳ್ಳಬೇಕು. ಅವು ನ್ಯಾಯಯುತ, ಸ್ವತಂತ್ರವಾಗಿರುತ್ತವೆ ಮತ್ತು ಸರ್ಕಾರದ ನೇರ ಭಾಗವಹಿಸುವಿಕೆಯನ್ನು ಆಧರಿಸಿರುತ್ತವೆ ಎಂದು ಭರವಸೆ ಕೊಡಬೇಕು.
  • ಜೆನ್​ಝಿ ಪ್ರತಿಭಟನಾಕಾರರ ಮತ್ತೊಂದು ಬೇಡಿಕೆಯಲ್ಲಿ ಕಳೆದ ಮೂರು ದಶಕಗಳಲ್ಲಿ ಲೂಟಿ ಮಾಡಲಾದ ಆಸ್ತಿಗಳ ತನಿಖೆ ಮತ್ತು ಅಕ್ರಮ ಆಸ್ತಿಗಳನ್ನು ರಾಷ್ಟ್ರೀಕರಣಗೊಳಿಸುವುದು ಮುಖ್ಯ.
  • ಐದು ಮೂಲಭೂತ ಸಂಸ್ಥೆಗಳಾದ ಶಿಕ್ಷಣ, ನ್ಯಾಯ, ಸಂವಹನ, ಆರೋಗ್ಯ ಮತ್ತು ಭದ್ರತೆಯ ಪುನರ್​ರಚನೆಯನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net