ನೇಪಾಳದಲ್ಲಿ ಭಾರತೀಯರಿಗಾಗಿ ಹೊಸ ಪೌರತ್ವ ಕಾಯ್ದೆ ಜಾರಿ

ram bahadur thapa
Published on

ನವದೆಹಲಿ: ಇದುವೆರೆಗೂ ಭಾರತದೊಂದಿಗೆ ಸ್ನೇಹ ಹಾಗೂ ಸೌಹಾರ್ದ ಸಂಬಂಧ ಹೊಂದಿದ್ದ ನೇಪಾಳ ಇದೀಗ ಭಾರತದಿಂದ ದೂರ ಸರಿಯುತ್ತಿರುವ ಹಾಗೂ ಚೀನಾಕ್ಕೆ ಹತ್ತಿರಾಗುತ್ತಿರುವ ಕುರುಹುವನ್ನು ಢಾಳಾಗಿ ತೋರಿಸುತ್ತಿದೆ.

ಕೆಲವೇ ದಿನಗಳ ಹಿಂದೆ ಕಾಲಾಪಾನಿ, ಲಿಪುಲೇಖ್​ ಮತ್ತು ಲಿಂಪಿಯಾಧುರಾ ಬಳಿಯ ಭಾರತದ ಭಾಗವನ್ನು ತನ್ನದೆಂದು ಹೇಳಿಕೊಂಡು ಪರಿಷ್ಕೃತ ನಕ್ಷೆಯನ್ನು ಸಿದ್ಧಪಡಿಸಿ ಸಂಸತ್​ನ ಕೆಳ ಮತ್ತು ಮೇಲ್ಮನೆಯಲ್ಲಿ ನೇಪಾಳ ಅನುಮೋದನೆ ಪಡೆದುಕೊಂಡಿದೆ. ಇದೀಗ ಅದು ಭಾರತೀಯರಿಗಾಗಿ ಹೊರ ಪೌರತ್ವ ಕಾಯ್ದೆಯನ್ನು ಜಾರಿಗೊಳಿಸಲು ಮುಂದಾಗಿದೆ.

ಇದರ ಪ್ರಕಾರ, ನೇಪಾಳದ ಹುಡುಗನನ್ನು ಭಾರತೀಯ ಯುವತಿ ಮದುವೆಯಾದರೆ, ಆಕೆಗೆ ಏಳು ವರ್ಷಗಳ ಬಳಿಕ ನೇಪಾಳದ ಪೌರತ್ವ ದೊರೆಯಲಿದೆ. ಈ ಬಗ್ಗೆ ಮಾಹಿತಿ ನೀಡಿರುವ ನೇಪಾಳದ ಗೃಹ ಸಚಿವ ರಾಮ್​ ಬಹಾದ್ದೂರ್​ ಥಾಪಾ, ಯಾವುದೇ ದೇಶದ ಯುವತಿಯರು ಭಾರತೀಯ ಯುವಕರನ್ನು ವರಿಸಿದರೆ, ಏಳು ವರ್ಷಗಳ ಬಳಿಕ ಅವರಿಗೆ ಭಾರತದ ಪೌರತ್ವ ನೀಡಲಾಗುತ್ತದೆ. ನೇಪಾಳ ಕೂಡ ಇದೇ ಕ್ರಮವನ್ನು ಅನುಸರಿಸಲಿದೆ ಎಂದು ಹೇಳಿದರು.

ಭಾರತದಲ್ಲಿ ಜಾರಿಯಲ್ಲಿರುವ ಪೌರತ್ವ ಕಾಯ್ದೆಯ ಈ ನಿಯಮ ನೇಪಾಳದ ಯುವತಿಯರಿಗೆ ಅನ್ವಯವಾಗುವುದಿಲ್ಲ. ಅವರು ಮದುವೆಯಾದ ದಿನದಿಂದಲೇ ಅವರಿಗೆ ಭಾರತದ ಪೌರತ್ವ ದೊರೆಯುತ್ತದೆ. ಈ ಸಂಗತಿ ತಿಳಿದಿದ್ದರೂ ರಾಮ್​ ಬಹಾದ್ದೂರ್​ ಥಾಪಾ ಮಾತ್ರ ಈ ನಿಯಮ ನೇಪಾಳದ ಯುವತಿಯರಿಗೂ ಅನ್ವಯವಾಗುತ್ತದೆ ಎಂಬ ಅರ್ಥದಲ್ಲಿ ಪ್ರತಿಪಾದಿಸಿದರು ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net