

ಲಕ್ಷಾಂತರ ಪಾಲಕರು, ಶಿಕ್ಷಣ ತಜ್ಞರು, ಸಾಮಾಜಿಕ ತಜ್ಞರ ಅಭಿಪ್ರಾಯವನ್ನು ಕ್ರೋಡೀಕರಿಸಿ ರೂಪಿಸಲಾದ ರಾಷ್ಟ್ರೀಯ ಶಿಕ್ಷಣ ನೀತಿ-2020 ದಶಕಗಳಿಂದ ಕಾಯುತ್ತಿದ್ದ ಸುಧಾರಣೆಗಳನ್ನು ಒಳಗೊಂಡಿದೆ. ಈಗಾಗಲೇ, ದೇಶಾದ್ಯಂತ ಶೈಕ್ಷಣಿಕ ವಲಯದಲ್ಲಿ ಈ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದ್ದು, ಹೊಸ ನೀತಿ ಭವಿಷ್ಯದ ಮೇಲೆ ಯಾವೆಲ್ಲ ಪರಿಣಾಮ ಉಂಟುಮಾಡಬಹುದು ಎಂಬ ವಿಶ್ಲೇಷಣೆಯೂ ಗರಿಗೆದರಿದೆ. ಜ್ಞಾನದ ಮೂಲಕ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯನ್ನು ಸಾಧಿಸುವುದು, ಜ್ಞಾನ ಮತ್ತು ಕೌಶಲಾಭಿವೃದ್ಧಿಗೆ ಸಮಾನ ಆದ್ಯತೆ, ಪದವಿ ಶಿಕ್ಷಣವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುವುದು, ತಂತ್ರಜ್ಞಾನ ಆಧಾರಿತ ಶಿಕ್ಷಣಕ್ಕೆ ಒತ್ತು, ಶಿಕ್ಷಣ ಅಭಿವೃದ್ಧಿಯಲ್ಲಿ ಸಮುದಾಯ ಮತ್ತು ತತ್ತ್ವಜ್ಞಾನಿಗಳ ಪಾತ್ರಕ್ಕೆ ಅವಕಾಶ-ಹೀಗೆ ವ್ಯಾಪಕ ಸುಧಾರಣೆಗಳನ್ನು ಒಳಗೊಂಡಿರುವ ಶಿಕ್ಷಣ ನೀತಿಯ ಬಗ್ಗೆ ಮತ್ತು ಅದರ ಅನುಷ್ಠಾನದ ಕುರಿತಂತೆ ಸೋಮವಾರ ಪ್ರಧಾನಿ ನರೇಂದ್ರ ಮೋದಿ ಎಲ್ಲ ರಾಜ್ಯಗಳ ರಾಜ್ಯಪಾಲರು ಮತ್ತು ಕೇಂದ್ರೀಯ ವಿಶ್ವವಿದ್ಯಾಲಯಗಳ ಉಪಕುಲಪತಿಗಳೊಂದಿಗೆ ವಿಡಿಯೋ ಕಾನ್ಪರೆನ್ಸ್ ಮೂಲಕ ಮಾತನಾಡಿದ್ದಾರೆ.
‘ಶಿಕ್ಷಣ ನೀತಿಯಲ್ಲಿ ಸರ್ಕಾರ, ಸ್ಥಳೀಯಾಡಳಿತಗಳ ಸಹಭಾಗಿತ್ವ ಕಡಿಮೆಯಾಗಬೇಕು. ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪಾಲಕರ ಸಹಭಾಗಿತ್ವ ಹೆಚ್ಚುತ್ತ ಹೋದಂತೆ ಅದು ಹೆಚ್ಚು ಪರಿಣಾಮಕಾರಿಯಾಗುತ್ತದೆ ಮತ್ತು ವ್ಯಾಪಕತೆ ಹೆಚ್ಚಿಕೊಳ್ಳುತ್ತದೆ’ ಎಂಬ ಪ್ರಧಾನಿ ಮಾತುಗಳು ಮಹತ್ವದ ಸಂದೇಶವನ್ನು ಒಳಗೊಂಡಿದೆ. ಅಲ್ಲದೆ, ‘ವಿದೇಶಾಂಗ ನೀತಿ ದೇಶದ ನೀತಿ ಇರುವಂತೆ, ರಕ್ಷಣಾ ನೀತಿ ದೇಶದ ನೀತಿ ಇರುವಂತೆಯೇ ಶಿಕ್ಷಣ ನೀತಿ ಕೂಡ ದೇಶದ ಶಿಕ್ಷಣ ನೀತಿಯಾಗಿದೆ, ಹೊರತು ಸರ್ಕಾರದ್ದಲ್ಲ’ ಎಂಬ ಪ್ರಧಾನಿ ಸ್ಪಷ್ಟೋಕ್ತಿ ಎಲ್ಲರನ್ನೂ ಒಳಗೊಳ್ಳುವ ಆಶಯವನ್ನು ಮತ್ತೊಮ್ಮೆ ಪ್ರತಿಪಾದಿಸಿದೆ.
ಪ್ರತಿಭಾ ಪಲಾಯನವನ್ನು ತಡೆಯುವ, ಶಿಕ್ಷಣದ, ಶೈಕ್ಷಣಿಕ ಸಂಸ್ಥೆಗಳ ಗುಣಮಟ್ಟ ಹೆಚ್ಚಿಸುವ ಗುರಿಯನ್ನೂ ಎನ್ಇಪಿ ಒಳಗೊಂಡಿರುವುದು ಗಮನಾರ್ಹ. ಈಗ ಮುಂದಿರುವ ಸವಾಲು ಸೂಕ್ತ ಅನುಷ್ಠಾನದ್ದು. ದೇಶದಲ್ಲಿ ‘ಒಂದು ತೆರಿಗೆ ವ್ಯವಸ್ಥೆ’ (ಜಿಎಸ್ಟಿ) ಜಾರಿಯಾಗಬೇಕಾದರೆ, ಎಲ್ಲ ರಾಜ್ಯ ಸರ್ಕಾರಗಳು ಮಹತ್ವದ ಪಾತ್ರ ವಹಿಸಿದ್ದವು. ಯಾವುದೇ ಹೊಸ ವ್ಯವಸ್ಥೆ ಬಂದಾಗ ಆರಂಭದಲ್ಲಿ ಒಂದಿಷ್ಟು ಸಂದೇಹಗಳು, ಪ್ರಶ್ನೆಗಳು ಉದ್ಭವವಾಗುವುದು ಸಹಜವೇ. ಆದರೆ, ಇವು ಮೂಲ ಉದ್ದೇಶಕ್ಕೆ ಚ್ಯುತಿ ಉಂಟುಮಾಡದಂತೆ ಆರೋಗ್ಯಕರ ಚರ್ಚೆಯ ಮೂಲಕ ಬಗೆಹರಿಸಿಕೊಳ್ಳಬೇಕು. ಈಗಲೂ, ಶಿಕ್ಷಕರಲ್ಲಿ, ಶೈಕ್ಷಣಿಕ ಸಂಸ್ಥೆಗಳಲ್ಲಿ ಒಂದಿಷ್ಟು ಅನುಮಾನಗಳಿವೆ. ಅವುಗಳ ಪರಿಹಾರಕ್ಕೆಂದೆ ಎನ್ಇಪಿ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಎಲ್ಲ ರಾಜ್ಯ ಸರ್ಕಾರಗಳು ಈ ವಿಷಯದಲ್ಲಿ ರಾಜಕೀಯವನ್ನು, ಪೂರ್ವಗ್ರಹವನ್ನು ಬದಿಗಿರಿಸುವುದು ಅತ್ಯಂತ ಅವಶ್ಯವಾಗಿದೆ. ಹೊಸ ಶಿಕ್ಷಣ ನೀತಿ ಒಳಗೊಂಡಿರುವ ಆಶಯಗಳು ಸಾಕಾರಗೊಳ್ಳುವುದು ಅದರ ಪರಿಣಾಮಕಾರಿ ಅನುಷ್ಠಾನದ ಮೇಲೆ ಅವಲಂಬಿತವಾಗಿದೆ. ಹೊಸ ಪೀಳಿಗೆಯನ್ನು ಆತ್ಮವಿಶ್ವಾಸ ಮತ್ತು ಜ್ಞಾನ-ಕೌಶಲದಿಂದ ಸಮಾಜದ ಆಸ್ತಿಯನ್ನಾಗಿಸಲು ಸಾಮೂಹಿಕ ಸಂಕಲ್ಪ ತಳೆಯಬೇಕಿದೆ. ಆಗಲೇ, ಈ ಎಲ್ಲ ಪ್ರಯತ್ನಗಳಿಗೆ ಸಾರ್ಥಕತೆ ಸಿಗಲು ಸಾಧ್ಯ.