ಪಾಲಕರಿಗೆ ಸುಳ್ಳು ಹೇಳಿ ಲಾಡ್ಜ್​ ಸೇರಿದ್ದ ಸರ್ಕಾರಿ ನೌಕರರಿಬ್ಬರ ಸ್ಥಿತಿ ನೋಡಿ ಬೆಚ್ಚಿಬಿದ್ದ ಪೊಲೀಸರು!

Lovers
Published on

ನೆಲ್ಲೂರು: ಆಂಧ್ರ ಪ್ರದೇಶದ ನೆಲ್ಲೂರು ಮೂಲದ ಪ್ರೇಮಿಗಳಿಬ್ಬರು ಜನವರಿ 29ರ ರಾತ್ರಿ ನೆಲ್ಲೂರಿನ ಖಾಸಗಿ ಲಾಡ್ಜ್​ ಒಂದರಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತರನ್ನು ಹರೀಶ್​ ಮತ್ತು ಲಾವಣ್ಯ ಎಂದು ಗುರುತಿಸಲಾಗಿದೆ. ಇಬ್ಬರು ಗ್ರಾಮ ಸಚಿವಾಲಯದ ನೌಕರರಾಗಿ ಕೆಲಸ ಮಾಡುತ್ತಿದ್ದರು.

ಪೊಲೀಸ್​ ಮೂಲಗಳ ಪ್ರಕಾರ ಹರೀಶ್​, ನೆಲ್ಲೂರು ಜಿಲ್ಲೆಯ ಚಿಟ್ಟಮರ್​ ಮಂಡಲದ ನಿವಾಸಿ. ಮೆಟ್ಟು ಗ್ರಾಮ ಸಚಿವಾಲಯದಲ್ಲಿ ಸಹಾಯಕ ಇಂಜಿನಿಯರ್​ ಆಗಿದ್ದರು. ನಾಯ್ಡುಪೇಟೆ ಮೂಲದ ಲಾವಣ್ಯ ಅದೇ ಸಚಿವಾಲಯದಲ್ಲಿ ಗ್ರಾಮ ಕಂದಾಯ ಅಧಿಕಾರಿಯಾಗಿದ್ದರು.

ಹರೀಶ್​ ಇತ್ತೀಚೆಗೆ ತಮ್ಮ ಸಂಬಂಧಿಕರನ್ನೇ ಮದುವೆಯಾಗಿದ್ದರು. ಲಾವಣ್ಯ ಸಹ ಸ್ಯಾದಪುರಂ ಮಂಡಲದ ಮತ್ತೊಂದು ಗ್ರಾಮ ಸಚಿವಾಲಯದ ಉದ್ಯೋಗಿಯನ್ನು ಮದುವೆಯಾಗಿದ್ದಳು. ಆದರೆ, ಮದುವೆಗೆ ಮುಂಚೇ ಹರೀಶ್​ ಮತ್ತು ಲಾವಣ್ಯ ಪ್ರೀತಿಯಲ್ಲಿ ಬಿದ್ದಿದ್ದರು. ಮದುವೆಯ ಬಳಿಕವೂ ತಮ್ಮ ಸಂಬಂಧವನ್ನು ಮುಂದುವರಿಸಿದ್ದರು. ಈ ವಿಚಾರ ತಿಳಿದಿದ್ದ ಕುಟುಂಬಸ್ಥರಿಗೆ ಲಾವಣ್ಯ ಮೇಲೆ ಅಸಮಾಧಾನವಿತ್ತು. ಅಲ್ಲದೆ, ಸಂಬಂಧ ಕಡಿದುಕೊಳ್ಳುವಂತೆ ಒತ್ತಾಯ ಸಹ ಮಾಡುತ್ತಿದ್ದರು.

ಮನೆಯವರ ಒತ್ತಾಯದಿಂದ ಬೇಸರಗೊಂಡಿದ್ದ ಲಾವಣ್ಯ ಮತ್ತು ಹರೀಶ್​, ಶುಕ್ರವಾರ ನೆಲ್ಲೂರಿನ ಹೊರವಲಯದಲ್ಲಿರುವ ಪದರುಪಲ್ಲಿಯಲ್ಲಿ ಖಾಸಗಿ ಲಾಡ್ಜ್​ ಒಂದನ್ನು ಮಾಡಿಕೊಂಡಿದ್ದರು. ಸ್ವಲ್ಪ ಕೆಲಸ ಇರುವುದರಿಂದ ನೆಲ್ಲೂರಿಗೆ ಹೋಗುತ್ತಿರುವುದಾಗಿ ಇಬ್ಬರು ತಮ್ಮ ಕುಟುಂಬಕ್ಕೆ ಹೇಳಿ ಬಂದಿದ್ದರು. ಆದರೆ, ಇಬ್ಬರು ರಾತ್ರಿಯಾದರು ಮನೆಗೆ ಹೋಗಲಿಲ್ಲ.

ಇದಾದ ತಕ್ಷಣವೇ ಇಬ್ಬರ ಪಾಲಕರು ನಾಪತ್ತೆ ಪ್ರಕರಣವನ್ನು ದಾಖಲಿಸಿದರು. ಹುಡುಕಾಟ ಆರಂಭಿಸಿದ ಪೊಲೀಸರಿಗೆ ಹರೀಶ್​ ತನ್ನ ಸಹೋದರಿಗೆ ಬರೆದಿದ್ದ ಡೆತ್​ನೋಟ್​ ಪತ್ತೆಯಾಗುತ್ತದೆ. ತಕ್ಷಣ ಲಾಡ್ಜ್​ಗೆ ಬಂದು ನೋಡಿದಾಗ ಇಬ್ಬರು ನೇಣಿಗೆ ಶರಣಾಗಿರುವುದು ತಿಳಿಯುತ್ತದೆ. ಒಳ್ಳೆಯ ಉದ್ಯೋಗದಲ್ಲಿದ್ದುಕೊಂಡು ಮನೆಗೆ ಆಧಾರವಾಗಿದ್ದ ಇಬ್ಬರು ಆತುರದ ನಿರ್ಧಾರದಿಂದ ತಮ್ಮ ಪ್ರಾಣ ಕಳೆದುಕೊಂಡಿದ್ದರು.

ಸಾವಿನ ಸುದ್ದಿ ತಿಳಿದ ಪಾಲಕರಲ್ಲಿ ಆಕ್ರಂದನ ಮುಗಿಲು ಮಟ್ಟಿತ್ತು. ಇತ್ತ ಪೊಲೀಸರು ಮೃತದೇಹಗಳನ್ನು ನೇಣಿನಿಂದ ಕೆಳಗಡೆ ಇಳಿಸಿ, ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net