ರಾಜ್ಯಕ್ಕೆ ನೀರಾ‘ವರಿ’ ಹೆಚ್ಚಿಸಿದ ನೆರೆಯ ರಾಜ್ಯಗಳು ! | Delay in release of funds from the centre

TBJ meeting
Published on

ಬೆಂಗಳೂರು: ನೆರೆಯ ಆಂಧ್ರಪ್ರದೇಶ, ತಮಿಳುನಾಡು ರಾಜ್ಯಗಳ ನಕಾರಾತ್ಮಕ ಧೋರಣೆಯಿಂದ ರಾಜ್ಯದ ಉದ್ದೇಶಿತ ನೀರಾವರಿ ಯೋಜನೆಗಳಿಗೆ ಅಡ್ಡಿಯಾಗಿದೆ ಎಂದು ಮಂಗಳವಾರ ನಡೆದ ಮಹತ್ವದ ಸಭೆಯಲ್ಲಿ ಕಳವಳ ವ್ಯಕ್ತವಾಗಿದೆ.

ವಿಧಾನಸೌಧದಲ್ಲಿ ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ, ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್.ಪಾಟೀಲ್ ಸಮಕ್ಷಮ ಈ ಸಭೆ ನಡೆಯಿತು.

ಪ್ರಸಕ್ತ ಹಣಕಾಸು ವರ್ಷಕ್ಕೆ ಕೇಂದ್ರ ಸರ್ಕಾರದ ಅನುದಾನ ಬಿಡುಗಡೆ ಮಾಹಿತಿ ಬಗ್ಗೆ ಚರ್ಚಿಸುವ ವೇಳೆ ಬಹು ಉದ್ದೇಶಿತ ಮೇಕೆದಾಟು ಯೋಜನೆಗೆ ತಮಿಳುನಾಡು ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ.

ಕೃಷ್ಣಾ ಎರಡನೇ ನ್ಯಾಯಾಧಿಕರಣದ ತೀರ್ಪಿನ ಅಧಿಸೂಚನೆ, ತುಂಗಭದ್ರಾ ಜಲಾಶಯದ ಹೂಳಿಗೆ ಪರ್ಯಾಯ ಯೋಜನೆಗಳ ವಿಷಯದಲ್ಲಿ ಆಂಧ್ರಪ್ರದೇಶ ನಕಾರಾತ್ಮಕ ನಿಲುವು ತಳೆದಿದೆ. ರಾಜ್ಯದ ಹಿತದೃಷ್ಟಿ, ನಮ್ಮ ಪಾಲಿನ ನೀರು ಬಳಕೆಗೆ ಕೇಂದ್ರ ಸರ್ಕಾರಕ್ಕೆ ಒತ್ತಡ ಹೇರಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದು ಹಿರಿಯ ನಾಯಕರಿಬ್ಬರು ಅಭಿಪ್ರಾಯಪಟ್ಟರು.

ಕೇಂದ್ರದಿಂದಲೂ ವಿಳಂಬ

ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ ೋಷಿಸಿದ ಕೇಂದ್ರ ಸರ್ಕಾರ, ಎರಡು ವರ್ಷ ಕಳೆದರೂ ಬಿಡುಗಡೆ ಮಾಡಿಲ್ಲ. ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಮೀಸಲಿಟ್ಟ ಅನುದಾನ ಬಿಡುಗಡೆಗೆ ವಿಳಂಬ ಮಾಡುತ್ತಿದೆ ಎಂದು ಟಿ.ಬಿ.ಜಯಚಂದ್ರ ಸಿಡಿಮಿಡಿ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ಮಾತನಾಡಿ ಭದ್ರಾ ಮೇಲ್ದಂಡೆ, ಜಲಜೀವನ್ ಮಿಷನ್ ಸೇರಿ ಪ್ರಮುಖ ಐದು ಯೋಜನೆಗಳಿಗೆ ಕೇಂದ್ರದಿಂದ ಅನುದಾನ ಬಿಡುಗಡೆ ವಿಳಂಬವಾಗಿದೆ ಎಂಬ ಮಾಹಿತಿ ನೀಡಿದರು.

ಭದ್ರಾ ಮೇಲ್ದಂಡೆ ಯೋಜನೆಗೆ ಇನ್ನೆರಡು ವರ್ಷಗಳಲ್ಲಿ ಅನುದಾನ ಬರದಿದ್ದರೆ ರಾಜ್ಯ ಸರ್ಕಾರದ ಈ ಯೋಜನೆ ಕಾಮಗಾರಿ ಪೂರ್ಣಗೊಳಿಸಲಿದೆ. ರೈಲ್ವೆ ಹಾಗೂ ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಹಣಕಾಸಿನ ತೊಂದರೆಯಿಲ್ಲವೆಂದರು.

ಪ್ರಧಾನಮಂತ್ರಿ ಕೃಷಿ ಸಿಂಚಾಯ್ ಯೋಜನೆಯಡಿ 1036 ಯೋಜನೆಗಳಿಗೆ 2434 ಕೋಟಿ ರೂ. ಪ್ರಸ್ತಾವಿತ ಹೊಸ 172 ಯೋಜನೆಗಳಿಗೆ 475 ಕೋಟಿ ರೂ. ಕೇಂದ್ರದಿಂದ ಬರಬೇಕಾಗಿದೆ. ಸಕಾಲಕ್ಕೆ ಹಣ ಬಿಡುಗಡೆಯಾಗದಿದ್ದರೆ ಸಹಭಾಗಿತ್ವದ ಯೋಜನೆಗಳಿಗೆ ಹಿನ್ನಡೆಯಾಗಲಿದೆ ಎಂದು ಸಣ್ಣ ನೀರಾವರಿ ಇಲಾಖೆ ಕಾರ್ಯದರ್ಶಿ ಆತಂಕ ವ್ಯಕ್ತಪಡಿಸಿದರು.

ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ದೀಪಾ ಚೋಳನ್ ಮಾತನಾಡಿ ಅಮೃತ್ ಯೋಜನೆ, ಸ್ವಚ್ಛ ಭಾರತ್ ಮಿಷನ್ ಒಂದು ಹಾಗೂ ಎರಡು ಅನುಷ್ಠಾನಕ್ಕೆ ಒಟ್ಟು ಐದು ಸಾವಿರ ಕೋಟಿ ರೂ.ಗಳನ್ನು ರಾಜ್ಯಕ್ಕೆ ಕೇಂದ್ರ ಸರ್ಕಾರ ಮಂಜೂರು ಮಾಡಿದೆ. ರಾಜ್ಯ ಕಳುಹಿಸಿದ ಪ್ರಸ್ತಾವನೆಗಳಿಗೆ ಕೇಂದ್ರ ಒಪ್ಪಿಗೆ ನೀಡಿದ್ದು, ಕೆಲವು ನಗರ ಪ್ರದೇಶಗಳಲ್ಲಿ ಸ್ಥಳೀಯ ಸಮಸ್ಯೆಗಳಿಂದ ಕಾಮಗಾರಿಗಳು ವಿಳಂಬವಾಗುತ್ತಿವೆ ಎಂದು ತಿಳಿಸಿದರು.

ಫುಡ್ ಪಾರ್ಕ್‌ಗಳಿಗೆ ಒತ್ತು

ಟಿ.ಬಿ.ಜಯಚಂದ್ರ ಮಾತನಾಡಿ ಕಲಬುರಗಿ, ಜೇವರ್ಗಿ, ಹಿರಿಯೂರು, ಮಾಲೂರು ಮತ್ತು ಕೆ.ಆರ್.ಪೇಟೆಯಲ್ಲಿ ಫುಡ್ ಪಾರ್ಕ್‌ಗಳ ನಿರ್ಮಾಣ ದಶಕದಿಂದ ನನೆಗುದಿಗೆ ಬಿದ್ದಿದೆ. ತ್ವರಿತವಾಗಿ ಕಾಮಗಾರಿ ಪೂರ್ಣಗೊಳ್ಳಲು ಒತ್ತು ನೀಡಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಸಲಹೆ ನೀಡಿ, ಬಾಕಿಯಿರುವ ಜಲಜೀವನ್ ಮಿಷನ್ ಅನುದಾನ ಬಿಡುಗಡೆಗೆ ಕೇಂದ್ರ ಸಚಿವರಿಗೆ ಆಗ್ರಹಿಸುವೆ ಎಂಬ ಭರವಸೆ ನೀಡಿದರು.

ಬಿ.ಆರ್.ಪಾಟೀಲ್ ಮಾತನಾಡಿ ರಾಜ್ಯದ ಗಡಿ ಪ್ರದೇಶಗಳಿಗೆ ಹೊಂದಿಕೊಂಡ ರಾಷ್ಟ್ರೀಯ ಹೆದ್ದಾರಿಗಳನ್ನು ನಿಗದಿತ ಕಾಲಮಿತಿಯಲ್ಲಿ ಅಭಿವೃದ್ಧಿ, ಮೇಲ್ದರ್ಜೆಗೇರಿಸುವ ಕಾಮಗಾರಿ ಮುಗಿಸಬೇಕು ಎಂದು ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net