ಮಹಿಳಾ ವಕೀಲೆಗೆ ಮಾರುತಿ ಸುಜುಕಿ ಸ್ವಿಫ್ಟ್ ಕಾರಿಗೆ ಪೆಟ್ರೋಲ್ ಸುರಿದು ಬೆಂಕಿ
ಕಾರಿನ ಸೆನ್ಸರ್ ಪದೇ ಪದೇ ಶಬ್ದ ಮಾಡುತ್ತಿದ್ದಕ್ಕೆ ಸಿಟ್ಟಿಗೆದ್ದು ನೆರೆಮನೆಯವನಿಂದ ಕೃತ್ಯ
ಕಾರು ಹೊತ್ತಿ ಉರಿಯುತ್ತಿದ್ದನ್ನು ಮೊಬೈಲ್‌ನಲ್ಲಿ ವಿಡಿಯೋ ಮಾಡಿಕೊಂಡ ಆರೋಪಿ
Gujarat Viral Video: ಕಾರಿನ ಸೆನ್ಸರ್ ಪದೇ ಪದೇ ಶಬ್ದ ಮಾಡುತ್ತಿದೆ ಎಂಬ ಕ್ಷುಲ್ಲಕ ಕಾರಣಕ್ಕೆ, ನೆರೆಮನೆಯ ವ್ಯಕ್ತಿಯೊಬ್ಬ ಮಹಿಳಾ ವಕೀಲರ ಕಾರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಆಘಾತಕಾರಿ ಘಟನೆ ಗುಜರಾತ್‌ನ ಮೊರ್ಬಿಯಲ್ಲಿ ನಡೆದಿದ್ದು, ಇದರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮೊರ್ಬಿಯ ವಾಗ್ಪಾರ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ವಕೀಲೆ ಪುಷ್ಪಾ ಭಟ್ ಅವರು ತಮ್ಮ ಮಾರುತಿ ಸುಜುಕಿ ಸ್ವಿಫ್ಟ್ ಕಾರನ್ನು ಮನೆ ಮುಂದೆ ಪಾರ್ಕ್ ಮಾಡಿದ್ದಾಗ, ಪೆಟ್ರೋಲ್ ಬಾಟಲಿ ಹಿಡಿದು ಬಂದ ನೆರೆಮನೆಯ ಶಿಖರ್ ಗೋಹೆಲ್, ಕಾರಿನ ಮುಂಭಾಗಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ.
ಬೆಂಕಿ ಹಚ್ಚಿದ ತಕ್ಷಣ ಅಲ್ಲಿಂದ ಕಾಲ್ಕಿಳಿಯದ ಆರೋಪಿ, ಕಾರು ಹೊತ್ತಿ ಉರಿಯುವುದನ್ನು ತನ್ನ ಮೊಬೈಲ್ ಫೋನ್‌ನಲ್ಲಿ ವಿಡಿಯೋ ಮಾಡಿಕೊಳ್ಳಲು ಶುರು ಮಾಡಿದ್ದಾನೆ. ದಾರಿಯಲ್ಲಿ ಜನರು ಓಡಾಡುತ್ತಿದ್ದರೂ ಯಾವುದಕ್ಕೂ ಹೆದರದೆ ಬೆಂಕಿಯ ತೀವ್ರತೆ ಹೆಚ್ಚಾಗುವವರೆಗೂ ವೀಡಿಯೋ ಮಾಡಿದ್ದಾನೆ. ನಂತರ ತನ್ನ ಕಾರನ್ನೇರಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಈ ಇಡೀ ದೃಶ್ಯ ಹತ್ತಿರದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಘಟನೆ ಸಂಬಂಧ ವಕೀಲೆ ಪುಷ್ಪಾ ಭಟ್ ಅವರು ಮೊರ್ಬಿ ಎ ಡಿವಿಷನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಶಿಖರ್ ಗೋಹೆಲ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅಸಲಿ ವಿಚಾರ ಹೊರಬಿದ್ದಿದೆ. ಕಾರಿನ ಹತ್ತಿರ ಯಾರಾದರೂ ಮನುಷ್ಯರು ಅಥವಾ ಪ್ರಾಣಿಗಳು ಬಂದಾಗಲೆಲ್ಲಾ ಸೆನ್ಸರ್ ಶಬ್ದ ಮಾಡುತ್ತಿತ್ತು. ಈ ಸೌಂಡ್‌ನಿಂದ ತನಗೆ ತೀವ್ರ ಕಿರಿಕಿರಿಯಾಗುತ್ತಿತ್ತು, ಅದಕ್ಕೇ ಈ ರೀತಿ ಮಾಡಿದೆ ಎಂದು ಆರೋಪಿ ಒಪ್ಪಿಕೊಂಡಿದ್ದಾನೆ.
ಬೆಂಕಿ ಹತ್ತಿಕೊಂಡಿದ್ದರಿಂದ ಕಾರು ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು, ಅಂದಾಜು 3.50 ಲಕ್ಷ ರೂಪಾಯಿ ನಷ್ಟ ಉಂಟಾಗಿದೆ. ಸದ್ಯ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಮುಂದಿನ ತನಿಖೆ ಮುಂದುವರಿಸಿದ್ದಾರೆ. (ಏಜೆನ್ಸೀಸ್)