ಕಣ್ಣು ಇಲ್ಲದಿದ್ರೂ ಶರವೇಗದಲ್ಲಿ ಬೇಟೆಯಾಡುವ ಪಂಟರ್​! ಜಗತ್ತಿನ ಈ ಅತಿ ವಿಚಿತ್ರ ಜೀವಿ ಬಗ್ಗೆ ಗೊತ್ತಾ? | Star Nosed Mole

Star Nosed Mole
ವಿಚಿತ್ರ ಜೀವಿ 'ಸ್ಟಾರ್-ನೋಸ್ಡ್ ಮೋಲ್'
Published on: 

Fastest Hunter Animal: ಪ್ರಕೃತಿಯಲ್ಲಿ ಎಣಿಕೆಗೂ ಸಿಗದಷ್ಟು ವಿಚಿತ್ರ ಮತ್ತು ಕುತೂಹಲಕಾರಿ ಜೀವಿಗಳಿವೆ. ಅವುಗಳಲ್ಲಿ ಪ್ರಮುಖವಾದದ್ದು 'ಸ್ಟಾರ್-ನೋಸ್ಡ್ ಮೋಲ್' (Star-Nosed Mole). ತನ್ನ ವಿಲಕ್ಷಣವಾದ ಮೂಗಿನ ರಚನೆ ಮತ್ತು ಅಸಾಧಾರಣ ಬೇಟೆಯಾಡುವ ಸಾಮರ್ಥ್ಯದಿಂದಾಗಿ ಈ ಸಣ್ಣ ಸಸ್ತನಿ ಜೀವಿ ವಿಜ್ಞಾನಿಗಳ ಗಮನ ಸೆಳೆದಿದೆ.

ಈ ಜೀವಿಗೆ ಕಣ್ಣುಗಳು ಸ್ಪಷ್ಟವಾಗಿ ಕಾಣಿಸುವುದಿಲ್ಲ. ಸಂಪೂರ್ಣವಾಗಿ ಕುರುಡಾಗಿರುವ ಇದು ತನ್ನ ಮೂಗಿನ ತುದಿಯಲ್ಲಿರುವ ನಕ್ಷತ್ರದ ಆಕಾರದ 22 ಗುಲಾಬಿ ಬಣ್ಣದ ಸಣ್ಣ ಮಾಂಸಲ ಭುಜಗಳ (ಟೆಂಟಾಕಲ್ಸ್) ಮೂಲಕವೇ ಸುತ್ತಲಿನ ಜಗತ್ತನ್ನು ಗ್ರಹಿಸುತ್ತದೆ. ಇದರ ಮೂಗಿನ ಮೇಲೆ ಲಕ್ಷಕ್ಕೂ ಹೆಚ್ಚು ಸೂಕ್ಷ್ಮ ಸಂವೇದನಾ ಅಂಗಗಳಿದ್ದು, ಇವುಗಳನ್ನು 'ಐಮರ್ಸ್ ಅಂಗಗಳು' (Eimer's organs) ಎಂದು ಕರೆಯಲಾಗುತ್ತದೆ. ಕಣ್ಣುಗಳ ಬದಲಿಗೆ ಈ ವಿಶಿಷ್ಟ ಮೂಗಿನ ಸಹಾಯದಿಂದಲೇ ಇದು ಆಹಾರ ಹುಡುಕುತ್ತದೆ.

ಜಗತ್ತಿನ ಅತ್ಯಂತ ವೇಗದ ಬೇಟೆಗಾರ

ಪ್ರಕೃತಿಯಲ್ಲಿ ಅತಿ ವೇಗವಾಗಿ ಆಹಾರ ಹುಡುಕಿ ತಿನ್ನುವ ಜೀವಿ ಎಂಬ ಹೆಗ್ಗಳಿಕೆ ಇದಕ್ಕೆ ಸಲ್ಲಿಯಾಗಿದೆ. ತನ್ನ ಮುಂದೆ ಸಿಕ್ಕ ಆಹಾರವನ್ನು ಗುರುತಿಸಿ, ಅದು ತಿನ್ನಲು ಯೋಗ್ಯವೇ ಎಂದು ನಿರ್ಧರಿಸಿ ನುಂಗಲು ಇದು ತೆಗೆದುಕೊಳ್ಳುವುದು ಕೇವಲ 120 ಮಿಲಿಸೆಕೆಂಡ್ ಸಮಯ ಮಾತ್ರ! ಅಂದರೆ ಒಂದು ಸೆಕೆಂಡಿನ ಎಂಟನೇ ಒಂದು ಭಾಗದಲ್ಲಿ ಈ ಕೆಲಸ ಮುಗಿದುಹೋಗಿರುತ್ತದೆ. ಈ ಅದ್ಭುತ ವೇಗಕ್ಕಾಗಿ ಇದು ಗಿನ್ನೆಸ್ ದಾಖಲೆಗೂ ಸೇರಿದೆ.

Star-shaped nose
ನಕ್ಷತ್ರದ ಆಕಾರದ ಮೂಗು ಹೊಂದಿರುವ ಜೀವಿ

ನೀರಿನ ಅಡಿಯಲ್ಲೂ ವಾಸನೆ ಗ್ರಹಿಸುವ ಶಕ್ತಿ

ಸಾಮಾನ್ಯವಾಗಿ ಸಸ್ತನಿಗಳಿಗೆ ನೀರಿನ ಅಡಿಯಲ್ಲಿ ವಾಸನೆ ಗ್ರಹಿಸಲು ಸಾಧ್ಯವಿಲ್ಲ. ಆದರೆ ಈ ಜೀವಿ ನೀರಿನೊಳಗಿದ್ದಾಗ ಗಾಳಿಯ ಗುಳ್ಳೆಗಳನ್ನು ಹೊರಸೂಸಿ, ತಕ್ಷಣವೇ ಆ ಗುಳ್ಳೆಗಳನ್ನು ವಾಪಸ್ ಮೂಗಿನ ಒಳಗೆ ಎಳೆದುಕೊಳ್ಳುವ ಮೂಲಕ ನೀರಿನ ಅಡಿಯಲ್ಲೂ ವಾಸನೆಯನ್ನು ಪತ್ತೆ ಮಾಡುತ್ತದೆ.

The star-nosed mole, a small mammal weighing only 50 grams
ಕೇವಲ 50 ಗ್ರಾಂ ತೂಕವಿರುವ ಸಣ್ಣ ಸಸ್ತನಿ ಸ್ಟಾರ್-ನೋಸ್ಡ್ ಮೋಲ್ ಜೀವಿ

ಇದನ್ನೂ ಓದಿ: 'ಕಾಫಿ ವಿತ್ ಕರಣ್' ಶೋನಲ್ಲಿ ತಾರಾ ಸುತಾರಿಯಾಗೆ ಜಾನ್ವಿ ಕಪೂರ್ ಟಾಂಗ್: ಸಿಡಿದೆದ್ದ ನೆಟ್ಟಿಗರು! | Janhvi Kapoor Controversy

ವಾಸಸ್ಥಾನ ಮತ್ತು ಆಹಾರ ಪದ್ಧತಿ

ಇವು ಹೆಚ್ಚಾಗಿ ಉತ್ತರ ಅಮೆರಿಕಾದ ಪೂರ್ವ ಭಾಗದ ತೇವಾಂಶವಿರುವ ತಗ್ಗು ಪ್ರದೇಶಗಳು, ಜೌಗು ಪ್ರದೇಶಗಳು ಹಾಗೂ ಒದ್ದೆಯಾದ ಮಣ್ಣಿನಲ್ಲಿ ಸುರಂಗಗಳನ್ನು ತೋಡಿ ವಾಸಿಸುತ್ತವೆ. ಕೇವಲ 50 ಗ್ರಾಂ ತೂಕ ಮತ್ತು 15ರಿಂದ 20 ಸೆಂಟಿಮೀಟರ್ ಉದ್ದವಿರುವ ಈ ಜೀವಿ, ಹೆಚ್ಚಾಗಿ ಮಣ್ಣಿನಲ್ಲಿರುವ ಎರೆಹುಳುಗಳು, ಸಣ್ಣ ಕೀಟಗಳು, ಜಲಚರಗಳು ಮತ್ತು ಮೃದ್ವಂಗಿಗಳನ್ನು ಬೇಟೆಯಾಡಿ ತಿನ್ನುತ್ತದೆ.