

ವಿಲಾಸ ಮೇಲಗಿರಿ ಬೆಂಗಳೂರು
ಗ್ರಾಮೀಣ ಪ್ರದೇಶದ ಮಕ್ಕಳಿಗೆ ವಿಜ್ಞಾನ ಕಲಿಕೆಯನ್ನು ಸುಲಭಗೊಳಿಸುವ ಹಾಗೂ ಕಲಿಕೆಯಲ್ಲಿ ಆಸಕ್ತಿ ಮೂಡಿಸುವ ದೃಷ್ಟಿಯಿಂದ ಸರ್ಕಾರ ಅನೇಕ ಕ್ರಮಗಳನ್ನು ಕೈಗೊಂಡಿದೆ. ಶಾಲಾ ಶಿಕ್ಷಣ ಇಲಾಖೆಯ ಹಲವು ಹತ್ತು ಉಪಕ್ರಮಗಳ ಜತೆಗೆ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ವಿನೂತನ ಕಾರ್ಯಕ್ರಮವೊಂದನ್ನು ರೂಪಿಸುತ್ತಿದೆ.
ವಿಜ್ಞಾನ, ಗಣಿತ ವಿಷಯಗಳು ಗ್ರಾಮೀಣ ಮಕ್ಕಳಿಗೆ ಕಬ್ಬಿಣದ ಕಡಲೆಯಾಗಿವೆ. 1ನೇ ತರಗತಿಯಿಂದ 10ನೇ ತರಗತಿಯಲ್ಲಿ ಇಂಗ್ಲಿಷ್ ಒಂದನ್ನು ಹೊರತುಪಡಿಸಿ ಉಳಿದೆಲ್ಲ ವಿಷಯಗಳನ್ನು ಕನ್ನಡದಲ್ಲೇ ಬೋಧಿಸಲಾಗುತ್ತಿದೆ. ಪಿಯುಸಿಗೆ ಬಂದಾಕ್ಷಣ ಕನ್ನಡವೊಂದನ್ನು ಬಿಟ್ಟು ಉಳಿದೆಲ್ಲ ವಿಷಯಗಳನ್ನು ಇಂಗ್ಲಿಷ್‌ನಲ್ಲಿ ಬೋಧಿಸಲಾಗುತ್ತಿದೆ. ಹಾಗಾಗಿ ವಿದ್ಯಾರ್ಥಿಗಳಿಗೆ ವಿಶೇಷವಾಗಿ ಗ್ರಾಮೀಣ ವಿದ್ಯಾರ್ಥಿಗಳಿಗೆ ವಿಜ್ಞಾನ ಕಲಿಕೆ ಕಡುಕಷ್ಟವಾಗಿದೆ. ಕಾರಣ ಪ್ರತಿ ವರ್ಷ ಮೂಲ ವಿಜ್ಞಾನ ಆಯ್ಕೆ ಮಾಡಿಕೊಳ್ಳುವ ವಿದ್ಯಾರ್ಥಿಗಳ ಸಂಖ್ಯೆ ಕೂಡ ಗಣನೀಯವಾಗಿ ಕುಸಿತಕಂಡಿದೆ.
ಈ ಹಿನ್ನೆಲೆಯಲ್ಲಿ ಈಗಾಗಲೇ ನೀತಿ ಆಯೋಗ ಅಟಲ್ ಥಿಂಕರಿಂಗ್ ಲ್ಯಾಬ್, ಕೇರಳ ರಾಜ್ಯ ಸರ್ಕಾರ ಸಸ ಪೋಷಿಣಿ ಲ್ಯಾಬ್‌ಗಳನ್ನು ರೂಪಿಸಿ ಅನುಷ್ಠಾನಗೊಳಿಸುತ್ತಿದೆ. ಇದಕ್ಕಿಂತ ವಿಭಿನ್ನವಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ನೆಹರೂ ಸ್ಟ್ರೀಮ್ ಲ್ಯಾಬ್ ಸ್ಥಾಪನೆಗೆ ಮುಂದಾಗಿದೆ. ವಿಜ್ಞಾನ ಕಲಿಕೆ ಚಟುವಟಿಕೆ ಆಧಾರಿತ. ಆದರೆ, ಅನೇಕ ಕಡೆ ಪ್ರಯೋಗಾಲಯ ಇಲ್ಲದ ಕಾರಣ ವಿದ್ಯಾರ್ಥಿಗಳಿಗೆ ವಿಜ್ಞಾನದ ಸೂತ್ರಗಳನ್ನು ಊರು ಹೊಡೆಸಲಾಗುತ್ತಿದೆ. ಇನ್ನು ಮುಂದೆ ನೆಹರೂ ಸ್ಟ್ರೀಮ್ ಲ್ಯಾಬ್ ಮೂಲಕ ವಿಜ್ಞಾನ ಕಲಿಕೆಯಲ್ಲಿ ಚಟವಟಿಕೆಗಳಿಗೆ ಪ್ರಾಧಾನ್ಯತೆ ನೀಡಲಾಗುತ್ತದೆ. ಅದರಿಂದ ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ, ತಾರ್ಕಿಕ ಚಿಂತನೆ, ವಿಶ್ಲೇಷಣಾ ಶಕ್ತಿ, ವಿಮರ್ಶಾತ್ಮಕ ಚಿಂತನೆ, ತಂಡದ ಕೆಲಸ ಮತ್ತು ಮನಸ್ಥಿತಿ ಬೆಳವಣಿಯಾಗಲಿದೆ.
6ನೇ ತರಗತಿಯಿಂದ 10ನೇ ತರಗತಿ ಮಕ್ಕಳಿಗೆ ಈ ಲ್ಯಾಬ್ ಪ್ರಯೋಜನ ದೊರೆಯಲಿದೆ. ರಾಜ್ಯದ 150 ರಿಂದ 200 ಶಾಲೆಗಳಲ್ಲಿ ಈ ಲ್ಯಾಬ್ ತೆರೆಯುವ ಕುರಿತು ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ.
6ನೇ ತರಗತಿಗೆ ಮೂಲ ವಿಜ್ಞಾನ, 7ನೇ ತರಗತಿಗೆ ರೋಬೋಟಿಕ್, ಎನ್ವಿರ್ನಾಮೆಂಟ್ ಮತ್ತು ಎಕಾಲಜಿ ಕುರಿತು ತಿಳಿವಳಿಕೆ ಹೆಚ್ಚಿಸಲಾಗುತ್ತದೆ. 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಗೆ ಎಕಾಲಜಿ, ಆಸ್ಟ್ರಾನಮಿ ವಿಷಯ ಕುರಿತು ಕಲಿಕೆಗೆ ಒತ್ತು ನೀಡಲಾಗುತ್ತದೆ. 10ನೇ ತರಗತಿಗೆ ಮಕ್ಕಳಿಗೆ ಪಬ್ಲಿಕ್ ಪರೀಕ್ಷೆ ಇರುವುದರಿಂದ ಒತ್ತಡ ಹೆಚ್ಚಾಗದಂತೆ ಪ್ರಯೋಗಾಲಯ ತರಗತಿಗಳ ಹೊರೆ ಕಡಿಮೆ ಮಾಡಲಾಗುತ್ತದೆ.
ಹಿಂದುಳಿದ ತಾಲೂಕಿನ ಶಾಲೆಗಳು, ನಗರ ಪ್ರದೇಶದಿಂದ ದೂರವಿರುವ ಶಾಲೆಗಳು, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ (ವಿಜ್ಞಾನ ವಿಷಯದಲ್ಲಿ) ಲಿತಾಂಶ ಕಡಿಮೆ ಬರುವ ಶಾಲೆಗಳನ್ನು ಗುರುತಿಸಿ ಈ ಲ್ಯಾಬ್‌ಗಳನ್ನು ಸ್ಥಾಪಿಸಲಾಗುತ್ತದೆ. ಒಂದು ಲ್ಯಾಬ್‌ಗೆ 6 ರಿಂದ 8 ಲಕ್ಷ ರೂ. ವಿನಿಯೋಗಿಸಲಾಗುತ್ತದೆ. ಈ ಲ್ಯಾಬ್‌ನಲ್ಲಿ ಬ್ಯಾಟರಿ ಚಾಲಿತ ಉಪಕರಣ/ಪರಿಕರ ಅಳವಡಿಕೆಗೆ ಆದ್ಯತೆ ನೀಡಲಾಗುತ್ತದೆ. ಐದು ವರ್ಷಗಳ ಗ್ಯಾರಂಟಿಯೊಂದಿಗೆ ಈ ಉಪಕರಣ ಖರೀದಿಸುವ ಉದ್ದೇಶವನ್ನೂ ಹೊಂದಲಾಗಿದೆ.
ನೆಹರೂ ಸ್ಟ್ರೀಮ್ ಲ್ಯಾಬ್ ಸ್ಥಾಪನೆಗೆ ಮುಂದಿನ ಬಜೆಟ್‌ನಲ್ಲಿ 10 ಕೋಟಿ ರೂ. ಅನುದಾನ ನಿಗದಿಪಡಿಸಲಾಗುತ್ತದೆ. ಹೆಚ್ಚಿನ ಹಣಕ್ಕೆ ಸಿಎಸ್‌ಆರ್ ಂಡ್ ಹಾಗೂ ನಿಗಮ, ಮಂಡಳಿಗಳ ಸಹಾಯ ಪಡೆಯಲು ಪೂರಕವಾಗಿ ಕಾರ್ಯಕ್ರಮ ರೂಪಿಸಲಾಗಿದೆ.
ಸೈಯನ್ಸ್(ಎಸ್), ಟೆಕ್ನಾಲಜಿ(ಟಿ), ರೋಬೋಟಿಕ್(ಆರ್), ಎಕಾಲಜಿ ಅಂಡ್ ಎನ್ವಿರ‌್ನಾಮೆಂಟ್(ಇ), ಆಸ್ಟ್ರಾನಮಿ(ಎ) ಹಾಗೂ ಮೆಥೆಮೆಟಿಕ್ಸ್(ಎಂ) ಅಂಶಗಳನ್ನು ಅಡಕಗೊಳಿಸಲಾಗಿದೆ. ಯುವ ಮನಸ್ಸುಗಳಲ್ಲಿ ಕುತೂಹಲ, ಸೃಜನಶೀಲತೆ ಮತ್ತು ಕಲ್ಪನೆಯನ್ನು ಬೆಳೆಸುವುದು ಈ ಪ್ರಯೋಗಾಲಯದ ಪ್ರಮುಖ ಉದ್ದೇಶವಾಗಿದೆ.
ಈ ಲ್ಯಾಬ್ ಸ್ಥಾಪನೆಗೆ ಮುನ್ನ ಶಾಲಾ ಶಿಕ್ಷಣ ಇಲಾಖೆ ಜತೆ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಒಡಂಬಡಿಕೆ ಮಾಡಿಕೊಳ್ಳಲಿದೆ. ಬಳಿಕ ಆಯಾ ಶಾಲೆಗಳ ಶಿಕ್ಷಕರಿಗೆ ತರಬೇತಿ ನೀಡಲಾಗುತ್ತದೆ. ತರಬೇತಿ ಪಡೆದ ಶಿಕ್ಷಕರಿಗೆ ಪುನರ್ ಮನನ ಮಾಡಲು ಪೂರಕವಾಗಿ ಆಪ್ ಒಂದನ್ನು ಸಿದ್ಧಪಡಿಸಲಾಗುತ್ತದೆ.
ಪಠ್ಯವಸ್ತು ಆಧರಿಸಿ ಪ್ರಯೋಗ
ಕರ್ನಾಟಕ ರಾಜ್ಯ ಪಠ್ಯವನ್ನು ಆಧರಿಸಿ ಆಯಾ ತರಗತಿಗಳ ಪಾಠಗಳಿಗೆ ಪೂರಕವಾಗಿ ಪ್ರಯೋಗಗಳನ್ನು ರೂಪಿಸಲಾಗುತ್ತದೆ. ಅದಕ್ಕಾಗಿ ಶಿಕ್ಷಣ ಶಾಸಜ್ಞರ ಸಮಿತಿಯೊಂದನ್ನು ರಚಿಸಲಾಗುತ್ತದೆ. ಈ ಸಮಿತಿ ಚಟುವಟಿಕೆ ಆಧಾರಿತ ವಿಜ್ಞಾನ ಕಲಿಕೆಗೆ ಉತ್ತೇಜನ ನೀಡುವ ರೀತಿಯಲ್ಲಿ ಪ್ರಯೋಗಾಲಯದ ಪಠ್ಯವನ್ನು ರೂಪಿಸಲಿದೆ.
ಉದ್ಯೋಗ ಗಳಿಸಲು ಅನುಕೂಲ
ಸ್ಟ್ರೀಮ್ ಶಿಕ್ಷಣದ ವಿಧಾನ ಭಾರತಕ್ಕೆ ಸೀಮಿತವಾಗಿಲ್ಲ. ಇದು ಜಾಗತಿಕವಾಗಿ ಅಂಗೀಕರಿಸಲ್ಪಡಲಿದೆ. ಈ ವಿಧಾನದೊಂದಿಗೆ ಶಿಕ್ಷಣ ಪಡೆದ ವಿದ್ಯಾರ್ಥಿಯು ಅಂತಾರಾಷ್ಟ್ರೀಯ ಮನ್ನಣೆ ಪಡೆಯಲು ಸಾಧ್ಯವಾಗಲಿದೆ. ಕಾರ್ಯಸ್ಥಳದ ಬೇಡಿಕೆಗಳನ್ನು ಪೂರೈಸಲು ಸಮರ್ಥರಾಗುವುದರಿಂದ ಜಾಗತಿಕವಾಗಿ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ನಾಯಕತ್ವದ ಗುಣಮಟ್ಟ ಬೆಳವಣಿಗೆ
ಸ್ಟ್ರೀಮ್ ವಿಧಾನದಲ್ಲಿ ಕಲಿತ ವಿದ್ಯಾರ್ಥಿಗಳು ಯಾವುದೇ ಕಲಿಕಾ ಸಮಸ್ಯೆಯನ್ನು ಪರಿಹರಿಸಲು ಸಾಕಷ್ಟು ಸಮರ್ಥರಾಗುತ್ತಾರೆ. ಸವಾಲುಗಳನ್ನು ವೃತ್ತಿಪರ ಅಥವಾ ವೈಯಕ್ತಿಕವಾಗಿ ಬೆಳೆಯಲು ಅವಕಾಶಗಳು ದೊರೆಯುತ್ತವೆ. ಪರಿಣಾಮವಾಗಿ ಈ ತರಬೇತಿ ವಿದ್ಯಾರ್ಥಿಗಳಿಗೆ ನಾಯಕತ್ವದ ಕೌಶಲಗಳನ್ನು ನೀಡುತ್ತದೆ.
ಲ್ಯಾಬ್ ಏಕೆ ಬೇಕು:
-ಭವಿಷ್ಯದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು.
-ತಾರ್ಕಿಕ ಮತ್ತು ಸೃಜನಶೀಲ ಮನಸ್ಥಿತಿ ಬೆಳೆಸಲು.
-ಪ್ರಪಂಚದಾದ್ಯಂತ ನಾವೀನ್ಯತೆ ಸಂಸ್ಕೃತಿ ಅಭಿವೃದ್ಧಿಪಡಿಸಲು.
-ಚಿಕ್ಕ ವಯಸ್ಸಿನಲ್ಲೇ ವಿದ್ಯಾರ್ಥಿಗಳಿಗೆ ತಂತ್ರಜ್ಞಾನದ ರುಚಿ ನೀಡಲು.
-ಉದ್ಯೋಗಗಳಿಗೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸಲು.
-ಶೈಕ್ಷಣಿಕ ಕಾರ್ಯಕ್ಷಮತೆ ಸುಧಾರಿಸಲು, ಹೆಚ್ಚಿನ ತಿಳುವಳಿಕೆ ಮತ್ತು ಧಾರಣ ಶಕ್ತಿ ವೃದ್ಧಿಸಲು.
>ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ಆಸಕ್ತಿ ಬೆಳೆಸುವ ನಿಟ್ಟಿನಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸುತ್ತಿದೆ. ಸಣ್ಣ ವಯಸ್ಸಿನಲ್ಲೇ ಚಟುವಟಿಕೆ ಮೂಲಕ ವಿಜ್ಞಾನದ ಬಗ್ಗೆ ಆಸಕ್ತಿ ಹಾಗೂ ಕುತೂಹಲ ಬೆಳೆಸಿಕೊಳ್ಳಲಿ ಎನ್ನುವ ಉದ್ದೇಶದಿಂದ ಸ್ಟ್ರಿಮ್ ಲ್ಯಾಬ್ ಒದಗಿಸುವ ಯೋಜನೆಯನ್ನು ಜಾರಿಗೊಳಿಸಲು ತಯಾರಿ ನಡೆದಿದೆ.
-ಎನ್.ಎಸ್.ಬೋಸರಾಜು, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ.