

ಬೆಂಗಳೂರು: ಮೊದಲ ಪ್ರಧಾನಿ ಜವಾಹರ ಲಾಲ್ ನೆಹರೂ ಅವರು ದೇಶದಲ್ಲಿ ಮಿಕ್ಸಡ್ ಎಕಾನಮಿ(mixed economy) ಜಾರಿಗೊಳಿಸಿ ಆಧುನಿಕ ಭಾರತ ನಿರ್ಮಾಣಕ್ಕೆ ಕೊಡುಗೆ ನೀಡಿದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ(CM Siddaramaiah) ತಿಳಿಸಿದರು.
ವಿಧಾನಸೌಧದ ಪೂರ್ವ ದಿಕ್ಕಿನ ಬಳಿ ಮಾಜಿ ಪ್ರಧಾನ ಮಂತ್ರಿಗಳಾದ ದಿವಂಗತ ಪಂಡಿತ್ ಜವಾಹರ ಲಾಲ್ ನೆಹರೂರವರ 135ನೇ ವರ್ಷದ ಜನ್ಮ ದಿನಾಚರಣೆ ಅಂಗವಾಗಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದರು.
ಸಮಾಜವಾದಿಯಾಗಿದ್ದ ನೆಹರೂ ಕಾಂಗ್ರೆಸ್ನ್ನೂ ಸಮಾಜವಾದಿಯಾಗಿಸಿದರು. ನೆಹರೂ, ಲೋಹಿಯಾ ಮೊದಲಾದವರು ಸೇರಿ ಸೋಷಿಯಲಿಸ್ಟ್ ಕಾಂಗ್ರೆಸ್ ಕಟ್ಟಿದರು. 17 ವರ್ಷಗಳಲ್ಲಿ ದೇಶದ ಅನೇಕ ಸಮಸ್ಯೆಗಳನ್ನು ಬಗೆಹರಿಸಿದರು. ಬೃಹತ್ ಕೈಗಾರಿಕೆ, ಅಣೆಕಟ್ಟು, ನೀರಾವರಿ, ಉದ್ಯೋಗ ಸೃಷ್ಟಿ ಮಾಡಿದರು. ವಿಜ್ಞಾನ ಮತ್ತು ವೈಚಾರಿಕತೆಯಲ್ಲಿ ನಂಬಿಕೆ ಇಟ್ಟುಕೊಂಡಿದ್ದ ನೆಹರೂ ಅವರು ಸುದೀರ್ಘ ಕಾಲ ದೇಶದ ಪ್ರಧಾನಿಯಾಗಿದ್ದರು. ಇಂದು ಆಧುನಿಕ ಭಾರತವನ್ನು ನಾವು ಕಾಣುತ್ತಿದ್ದರೆ ಅದಕ್ಕೆ ನೆಹರೂ ಅವರ ಕೊಡುಗೆ ಅಪಾರವಾಗಿದೆ. ಆಹಾರ ಸ್ವಾವಲಂಬನೆಗೆ ನೆಹರೂ, ಇಂದಿರಾ ಗಾಂಧಿ, ಜಗಜೀವನ್ ರಾಂ, ಲಾಲ್ ಬಹದ್ದೂರ್ ಶಾಸ್ತ್ರಿ ಅವರೆಲ್ಲರೂ ಕಾರಣ. ಒಂದು ಕಾಲದಲ್ಲಿ ಆಹಾರಕ್ಕೆ ಬೇರೆ ದೇಶಗಳ ಮೇಲೆ ಅವಲಂಬಿಸಿದ್ದೆವು. ಇಂದು ನಾವು ಸ್ವಾವಲಂಬಿಯಾಗಿದ್ದರೆ ಅವರು ಕಾರಣ ಎಂದು ಸಿದ್ದರಾಮಯ್ಯ ಹೇಳಿದರು.
ಉಪಚುನಾವಣೆಯಲ್ಲಿ ಕಾಂಗ್ರೆಸ್ ಮೂರೂ ಕಡೆ ಗೆಲ್ಲಲಿದ್ದೇವೆ ಎಂದು ಮುಖ್ಯಮಂತ್ರಿಗಳು ವಿಶ್ವಾಸ ಸಿದ್ದರಾಮಯ್ಯ ವ್ಯಕ್ತಪಡಿಸಿದರು.
ಆಪರೇಶನ್ ಕಮಲದ ಬಗ್ಗೆ ದಾಖಲಾತಿಗಳಿದ್ದರೆ ತನಿಖೆ ಮಾಡಿಸಬೇಕೆಂದು ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಅವರು ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ಮೊನ್ನೆ ಮೊನ್ನೆ ವಿಜಯೇಂದ್ರ ಬಂದಿದ್ದಾರೆ. ಈ ಬಗ್ಗೆ ನಾನು ಉತ್ತರ ನೀಡುವುದಿಲ್ಲ ಎಂದರು.