

Bangladesh Man : ಬಾಂಗ್ಲಾದೇಶದಿಂದ ಬಂದ ಅಕ್ರಮ ವಲಸಿಗರಲ್ಲಿ ಒಬ್ಬನನ್ನು ಮಧ್ಯಪ್ರದೇಶ ಪೊಲೀಸರು ಕೊನೆಗೂ ಬಂಧಿಸಿದ್ದಾರೆ. ಕಳೆದ 28 ವರ್ಷಗಳಿಂದ ಭಾರತದಲ್ಲಿ ಅಕ್ರಮವಾಗಿ ವಾಸಿಸುತ್ತಿರುವ ಅಬ್ದುಲ್ ಕಲಾಂ ಎಂಬ ವ್ಯಕ್ತಿಯನ್ನು ಮಧ್ಯಪ್ರದೇಶ ಪೊಲೀಸರು ಬಂಧಿಸಿದ್ದಾರೆ.
ತನ್ನ 10ನೇ ವಯಸ್ಸಿನಲ್ಲಿ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ ಅಬ್ದುಲ್, ಭೋಪಾಲ್ನ ಬುಧ್ವಾರಾ ಪ್ರದೇಶದಲ್ಲಿ ನೆಲೆಸುವ ಮೊದಲು ಮುಂಬೈನಲ್ಲಿ ಎರಡು ದಶಕಗಳನ್ನು ಕಳೆದಿದ್ದ. ಟ್ರಾನ್ಸ್ಜೆಂಡರ್ ಗುರುತನ್ನು ಪಡೆದುಕೊಂಡು ಸ್ಥಳೀಯ ಹಿಜ್ರಾ ಸಮುದಾಯದ ಸಕ್ರಿಯ ಸದಸ್ಯನಾಗಿದ್ದ ಎಂದು ಆರೋಪಿಸಲಾಗಿದೆ. ಸ್ಥಳೀಯ ಏಜೆಂಟರ ಸಹಾಯದಿಂದ ನಕಲಿ ದಾಖಲೆಗಳನ್ನು ಬಳಸಿಕೊಂಡು ತನ್ನ ಆಧಾರ್ ಕಾರ್ಡ್, ಪಡಿತರ ಚೀಟಿ ಮತ್ತು ಪಾಸ್ಪೋರ್ಟ್ ಸೇರಿದಂತೆ ನಿರ್ಣಾಯಕ ದಾಖಲೆಗಳನ್ನು ಪಡೆದಿದ್ದ ಎಂದು ತಿಳಿದುಬಂದಿದೆ.
ಅಬ್ದುಲ್, ನಕಲಿ ಗುರುತಿನ ಚೀಟಿಯೊಂದಿಗೆ ವಾಸಿಸುತ್ತಿದ್ದನಲ್ಲದೆ, ನಕಲಿ ಭಾರತೀಯ ಪಾಸ್ಪೋರ್ಟ್ ಬಳಸಿ ವಿದೇಶ ಪ್ರವಾಸ ಸಹ ಮಾಡಿದ್ದನು ಎಂಬುದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ. ಈತ ಬುಧ್ವಾರ ಪ್ರದೇಶದೊಳಗೆ ಹಲವಾರು ಬಾರಿ ಮನೆಗಳನ್ನು ಬದಲಾಯಿಸಿದ್ದಾನೆ ಮತ್ತು ಎಲ್ಲರಿಗೂ "ನೇಹಾ" ಎಂಬ ಹೆಸರಿನಿಂದ ಮಾತ್ರ ಪರಿಚಿತನಾಗಿದ್ದ. ಆತ ಜೈವಿಕವಾಗಿ ಟ್ರಾನ್ಸ್ಜೆಂಡರ್ ಆಗಿದ್ದಾನೆಯೇ ಅಥವಾ ತನ್ನ ಗುರುತನ್ನು ಮರೆಮಾಚಲು ಟ್ರಾನ್ಸ್ಜೆಂಡರ್ ವೇಷ ಹಾಕಿಕೊಂಡಿದ್ದಾನೆಯೇ ಎಂಬುದನ್ನು ತಿಳಿದುಕೊಳ್ಳಲು ಆತನನ್ನ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ.
ಪೊಲೀಸ್ ಮೂಲಗಳು ತಿಳಿಸಿರುವ ಪ್ರಕಾರ, ಅಬ್ದುಲ್ ಮಹಾರಾಷ್ಟ್ರದಲ್ಲಿ ಟ್ರಾನ್ಸ್ಜೆಂಡರ್ ಚಟುವಟಿಕೆಗಳಲ್ಲಿಯೂ ಭಾಗಿಯಾಗಿದ್ದ. ಇದು ಆತನ ವೇಷಧಾರಣೆಯ ದೊಡ್ಡ ಜಾಲದ ಭಾಗವೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕುಕಿದೆ. ಟ್ರಾನ್ಸ್ಜೆಂಡರ್ ಸಮುದಾಯದ ಇತರ ಸದಸ್ಯರು ಕೂಡ ಈ ವಂಚನೆಯಲ್ಲಿ ಭಾಗಿಯಾಗಿದ್ದಾರೆಯೇ ಅಥವಾ ತಿಳಿಯದೆ ಸಹಾಯ ಮಾಡಿದ್ದಾರೆಯೇ ಎಂದು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಅಬ್ದುಲ್ ನಕಲಿ ಗುರುತಿನ ದಾಖಲೆಗಳನ್ನು ಪಡೆಯಲು ಸಹಾಯ ಮಾಡಿದ ಇಬ್ಬರು ಸ್ಥಳೀಯ ಯುವಕರನ್ನು ಪ್ರಸ್ತುತ ವಿಚಾರಣೆ ನಡೆಸಲಾಗುತ್ತಿದೆ. ಅಕ್ರಮ ವಲಸೆ ಮತ್ತು ದಾಖಲೆಗಳ ನಕಲಿಗೆ ಅನುಕೂಲ ಮಾಡಿಕೊಡುವ ಬಹು ದೊಡ್ಡ ಜಾಲದಲ್ಲಿ ಇದು ಕೇವಲ ಒಂದು ಸಣ್ಣ ಅಂಶವಾಗಿರಬಹುದು ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ. ಅಬ್ದುಲ್ ಅವರ ಮೊಬೈಲ್ ಫೋನ್ನಿಂದ ಕರೆ ರೆಕಾರ್ಡಿಂಗ್ಗಳು ಮತ್ತು ಚಾಟ್ಗಳನ್ನು ಸುಳಿವುಗಳಿಗಾಗಿ ಪರಿಶೀಲಿಸಲಾಗುತ್ತಿದೆ.
ಅಂದಹಾಗೆ, ಅಬ್ದುಲ್ನನ್ನು ವಿದೇಶಿಯರ ಕಾಯ್ದೆಯಡಿ 30 ದಿನಗಳ ಕಾಲ ಬಂಧಿಸಲಾಗಿದೆ. ಈ ಬಗ್ಗೆ ಮಧ್ಯಪ್ರದೇಶದ ಹೆಚ್ಚುವರಿ ಡಿಸಿಪಿ ಶಾಲಿನಿ ದೀಕ್ಷಿತ್ ಮಾತನಾಡಿ, ಅಬ್ದುಲ್ ಕಳೆದ 8-10 ವರ್ಷಗಳಿಂದ ಭೋಪಾಲ್ನಲ್ಲಿ ವಾಸಿಸುತ್ತಿದ್ದರು. ಅದಕ್ಕೂ ಮೊದಲು ಆತ ಮಹಾರಾಷ್ಟ್ರದಲ್ಲಿದ್ದರು. ನಮಗೆ ಮಾಹಿತಿದಾರರ ಮೂಲಕ ಸುಳಿವು ಸಿಕ್ಕಿತು ಮತ್ತು ಗುರುತಿನ ಪ್ರಕ್ರಿಯೆಯನ್ನು ಪ್ರಾರಂಭಿಸಲಾಯಿತು. ಈ ಮಧ್ಯೆ ಆತ ಬಾಂಗ್ಲಾದೇಶಕ್ಕೂ ಪ್ರಯಾಣಿಸಿದ್ದ ಎಂಬ ಮಾಹಿತಿ ತಿಳಿದುಬಂದಿದೆ. ಸದ್ಯ ಸಂಬಂಧಪಟ್ಟ ಇಲಾಖೆಗಳಿಂದ ವರದಿಗಳಿಗಾಗಿ ನಾವು ಕಾಯುತ್ತಿದ್ದೇವೆ ಎಂದು ಹೇಳಿದ್ದಾರೆ.
ಇನ್ನು ಅಧಿಕಾರಿಗಳು ಅಬ್ದುಲ್ ಗಡೀಪಾರು ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದಾರೆ. ಇದರ ನಡುವೆ ಅಬ್ದುಲ್ ಕಲಾಂ ಅವರ ಭಾರತ ಮತ್ತು ವಿದೇಶಗಳಲ್ಲಿನ ಚಟುವಟಿಕೆಗಳು, ಚಲನವಲನಗಳು ಮತ್ತು ಸಂಪರ್ಕಗಳನ್ನು ಸಂಪೂರ್ಣವಾಗಿ ತನಿಖೆ ಮಾಡಲಾಗುತ್ತಿದೆ.
ಅಂದಹಾಗೆ, ಈ ಪ್ರಕರಣ ಕಾನೂನು ಜಾರಿ ಸಂಸ್ಥೆಗಳಲ್ಲಿ ಆಘಾತ ಉಂಟುಮಾಡಿದೆ. ಏಕೆಂದರೆ, ಗುರುತಿನ ವಂಚನೆ ಮಾತ್ರವಲ್ಲದೆ, ಸಂಭಾವ್ಯ ರಾಷ್ಟ್ರೀಯ ಭದ್ರತಾ ಪರಿಣಾಮಗಳ ಕಾರಣದಿಂದಾಗಿಯೂ ಈ ಪ್ರಕರಣ ಕಳವಳಕಾರಿಯಾಗಿದೆ. ವಿದೇಶಿ ಪ್ರಜೆಯೊಬ್ಬ ಭಾರತದ ಪ್ರಮುಖ ನಗರದಲ್ಲಿ ನಕಲಿ ದಾಖಲೆಗಳನ್ನು ಬಳಸಿಕೊಂಡು ವರ್ಷಗಳ ಕಾಲ ಪತ್ತೆಯಾಗದೆ ಹೇಗೆ ವಾಸಿಸುತ್ತಿದ್ದನು ಎಂಬ ಪ್ರಶ್ನೆಗಳು ಎದ್ದಿವೆ. ಸದ್ಯ ಭೋಪಾಲ್ ಪೊಲೀಸರು, ಕೇಂದ್ರೀಯ ಸಂಸ್ಥೆಗಳ ಜೊತೆಗೆ, ವಂಚನೆಯ ಪೂರ್ಣ ಜಾಲವನ್ನು ಬಯಲು ಮಾಡಲು ಮತ್ತು ಇದು ಪ್ರತ್ಯೇಕ ಘಟನೆಯೋ ಅಥವಾ ಇದರ ಹಿಂದೆ ಆಳವಾದ ಜಾಲ ಇದೆಯೋ ಎಂಬುದನ್ನು ಪತ್ತೆಹಚ್ಚಲು ತನಿಖೆ ಚುರುಕುಗೊಳಿಸಿದ್ದಾರೆ. (ಏಜೆನ್ಸೀಸ್)