

ಬೆಂಗಳೂರು:
ನೇಹಾ ಹಿರೇಮಠ ಅವರ ಹತ್ಯೆಯನ್ನು ಖಂಡಿಸಿ, ಬಿಜೆಪಿ ಮಹಿಳಾ ಮೋರ್ಚಾ ನೇತೃತ್ವದಲ್ಲಿ ನಗರದ ಸ್ವಾತಂತ್ರ್ಯ ಉದ್ಯಾನವನ ಬಳಿ ಬೃಹತ್ ಪ್ರತಿಭಟನೆ ನಡೆಯಿತು. ಇದೇ ಸಂದರ್ಭದಲ್ಲಿ ಕ್ಯಾಂಡಲ್ ಬೆಳಗಿಸುವ ಮೂಲಕ ನೇಹಾ ಅವರ ಆತ್ಮಕ್ಕೆ ಶಾಂತಿ ಕೋರಿ ಭಾವಪೂರ್ಣ ಶ್ರದ್ದಾಂಜಲಿಯನ್ನು ಸಲ್ಲಿಸಲಾಯಿತು.
ಇದೇ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಮೇಲೆ ದೇಶದ್ರೋಹಿಗಳು ವಿಜೃಂಬಿಸುತ್ತಿದ್ದಾರೆ ಎಂದು ರಾಜ್ಯ ಸರ್ಕಾರದ ಮೇಲೆ ಆಕ್ರೋಶ ವ್ಯಕ್ತಪಡಿಸಿದರು.
ನೇಹಾ ಹತ್ಯಾ ಪ್ರಕರಣ ದೇಶದಲ್ಲಿ ಅಷ್ಟೆ ಅಲ್ಲ, ವಿದೇಶದಲ್ಲಿಯೂ ಸುದ್ದಿಯಾಗಿದೆ. ಕಾಲೇಜಿನ ವಿದ್ಯಾರ್ಥಿನಿಯನ್ನು ಚುಚ್ಚಿ ಕೊಲ್ಲುವುದಕ್ಕೆ ಫಯಾಜ್ಗೆ ಹೇಗೆ ಧೈರ್ಯ ಬಂತು? ಈ ಸರ್ಕಾರದಲ್ಲಿ ಸಮಾಜದ್ರೋಹಿಗಳು, ದೇಶದ್ರೋಹಿಗಳ ಕೈ ಮೇಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
2013ರಲ್ಲಿ ದೇಶದ್ರೋಹಿಗಳ ಸಂಘಟನೆ ಪಿಎ್ಐ, ಹಿಂದೂ ಯುವಕರನ್ನು ಕೊಲೆ ಮಾಡುತ್ತಿದ್ದರು. ಹಿಂದೂ ಯುವತಿಯರನ್ನು ಲವ್ ಜಿಹಾದ್ ಬಲೆಗೆ ಬೀಳಿಸುತ್ತಿದ್ದರು. ಇಂಥವರ ಕೇಸನ್ನು ಸಿದ್ದರಾಮಯ್ಯ ಸರ್ಕಾರ ಹಿಂಪಡೆದ ಮೇಲೆ ಅವರುಗಳಿಗೆ ಭಯವೇ ಇಲ್ಲವಾಗಿದೆ ಎಂದರು.
ರುದ್ರೇಶ್, ಪ್ರವೀಣ್ ನೆಟ್ಟಾರ್ ಮತ್ತಿತರ ಹಿಂದೂಗಳ ನಿರಂತರ ಹತ್ಯೆ ಕುರಿತ ಮಾಹಿತಿ ಪಡೆದ ಕೇಂದ್ರ ಸರ್ಕಾರವೇ ಪಿಎ್ಐ ನಿಷೇಧಿಸಿದೆ. ಆಗ ಅದರಿಂದ ಹೊರ ಬಂದ ಪಿಎ್ಐ ಕಾರ್ಯಕರ್ತರು ಸಮಾಜದ್ರೋಹಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ ಎಂದರು.
ಹಿಂದೂಗಳ ಮೇಲೆ ದೌರ್ಜನ್ಯ ಹೆಚ್ಚಾಗಿದೆ. ರಾಮನವಮಿಯಂದೇ ಜೈಶ್ರೀರಾಂ ಎಂದು ಕೂಗಿದವರ ಮೇಲೆ ಹಲ್ಲೆ ನಡೆಯುತ್ತಿದೆ. ಕೊಡಗಿನಲ್ಲಿ ಪ್ರಚಾರ ಮುಗಿಸಿ ತೆರಳುವವರ ಮೇಲೆ ಅಲ್ಪಸಂಖ್ಯಾತನೊಬ್ಬ ಕಾರು ಹಾಯಿಸಿದ್ದಾನೆ. ಒಬ್ಬರು ಮೃತರಾಗಿದ್ದು, ಇನ್ನಿಬ್ಬರು ಗಾಯಗೊಂಡಿದ್ದಾರೆ. ನಿನ್ನೆ ಯಾದಗಿರಿಯಲ್ಲಿ ಪರಿಶಿಷ್ಟ ಜಾತಿಯ ಯುವಕನನ್ನು ಹೊಡೆದು ಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಅಧ್ಯಕ್ಷೆ ಕು.ಸಿ.ಮಂಜುಳಾ, ಬೆಂಗಳೂರು ಉತ್ತರ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಆಶಾ ರಾವ್, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷೆ ರೇಖಾ ಗೋವಿಂದ, ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷೆ ವಿಜಯಲಕ್ಷ್ಮಿ ಆನಂದ್ ಮತ್ತಿತರರು ಹಾಜರಿದ್ದರು.