

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಮತದಾನ ಪ್ರಮಾಣ ಕಡಿಮೆ ಆಗಿರುವುದು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಟೀಕೆಗಳಿಗೆ ಗುರಿಯಾಗಿದೆ. ಅದರಲ್ಲೂ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮತಪ್ರಮಾಣ ನಿರೀಕ್ಷೆಯಷ್ಟಾಗಲಿಲ್ಲ ಎಂಬುದರ ಬಗ್ಗೆ ಎಲ್ಲೆಡೆ ತೀವ್ರ ಅಸಮಾಧಾನ ವ್ಯಕ್ತವಾಗುತ್ತಿದೆ. ಮೊದಲ ಹಂತದ ಚುನಾವಣೆಯಲ್ಲಿ ಮತ ಚಲಾಯಿಸಬೇಕಾದ ರಾಜ್ಯದ 2.88 ಕೋಟಿ ಜನರಲ್ಲಿ ಶೇ. 35 ಜನರು ಬೆಂಗಳೂರಿನವರೇ ಆಗಿದ್ದರು ಎಂಬುದು ಗಮನಾರ್ಹ. ಬೆಂಗಳೂರು ಉತ್ತರದಲ್ಲಿ 32.14 ಲಕ್ಷ, ಬೆಂಗಳೂರು ಕೇಂದ್ರದಲ್ಲಿ 24.33 ಲಕ್ಷ ಹಾಗೂ ಬೆಂಗಳೂರು ದಕ್ಷಿಣದಲ್ಲಿ 23.41 ಲಕ್ಷ ಮತದಾರರು ಇದ್ದರು. 7 ಸಾವಿರಕ್ಕೂ ಅಧಿಕ ಮತಗಟ್ಟೆಗಳಿದ್ದವು. ಮತದಾನ ಮಾಡುವಂತೆ ಚುನಾವಣಾ ಆಯೋಗ, ಮಾಧ್ಯಮಗಳು ಮತ್ತು ಕೆಲವು ಸಾರ್ವಜನಿಕ ಸೇವಾ ಸಂಸ್ಥೆಗಳು ತಿಂಗಳುಗಟ್ಟಲೆ ಅಭಿಯಾನ ನಡೆಸಿದ್ದವು.
ಈ ಪ್ರಯತ್ನಗಳಿಂದಾಗಿ ಮತ ಪ್ರಮಾಣ ಈ ಬಾರಿ ಹೆಚ್ಚಾಗಬಹುದು ಎಂಬುದು ಎಲ್ಲರ ನಿರೀಕ್ಷೆಯಾಗಿತ್ತು. ಆದರೆ ಅದು ನಿಜವಾಗಲಿಲ್ಲ. ಅದಕ್ಕೆ ಕಾರಣಗಳೂ ಇವೆ. ಅದರಲ್ಲಿ ಮೊದಲನೆಯದು ರಣ ಬಿಸಿಲು. ಕಳೆದ ಕೆಲವು ದಿನಗಳಿಂದ ಬೆಂಗಳೂರಿನ ತಾಪಮಾನ 35-36 ಡಿಗ್ರಿ ಸೆಲ್ಷಿಯಸ್ಗಿಂತ ಹೆಚ್ಚೇ ಇದೆ. ಇಷ್ಟು ಬಿಸಿಲು ರಾಜಧಾನಿಯಲ್ಲಿ ಇದೇ ಮೊದಲು ಎನ್ನಲಾಗುತ್ತಿದೆ. ಮತಪ್ರಮಾಣ ಕುಸಿತಕ್ಕೆ ಇದೇ ಕಾರಣ ಎಂಬುದನ್ನು ನಂಬಬಹುದಾದರೆ, ಇದೇ ಸಂದರ್ಭದಲ್ಲಿ 3-4 ದಿನಗಳ ದೀರ್ಘ ರಜೆಯಿಂದಾಗಿ ಬೆಂಗಳೂರಿನ ಸಾವಿರಾರು ಜನರು ಸಮೀಪದ ಮೋಜಿನ ತಾಣಗಳಿಗೆ ದಾಂಗುಡಿಯಿಟ್ಟದ್ದೂ ಸುಳ್ಳಲ್ಲ. ಈ ಕುರಿತು ವೃತ್ತಪತ್ರಿಕೆಗಳಲ್ಲಿ ಸಾಕಷ್ಟು ವರದಿಗಳು ಬಂದಿವೆ. ಅದರ ಅರ್ಥ ಕೆಲವು ಜನರಿಗೆ ಮತದಾನಕ್ಕಿಂತ ಮೋಜಿನ ತಾಣಗಳಿಗೆ ಪ್ರವಾಸ ಹೋಗುವುದೇ ಮೊದಲ ಆದ್ಯತೆ ಎಂಬುದು ಸ್ಪಷ್ಟ. ಈ ರೀತಿಯ ಮನಸ್ಥಿತಿ ಇರುವವರೆಗೂ ಮತಪ್ರಮಾಣ ಹೆಚ್ಚುತ್ತದೆ ಎಂದು ನಿರೀಕ್ಷಿಸಲಾಗದು.
ಕೆಲವು ಮತಗಟ್ಟೆಗಳಲ್ಲಿ ಸಾಕಷ್ಟು ಉದ್ದದ ಸಾಲು ಇದ್ದುದರಿಂದ ಜನ ಮತ ಹಾಕಲು ಬಂದರೂ ವಾಪಸ್ ಹೋದರು ಎಂದು ಹೇಳಲಾಗುತ್ತಿದೆ. ತಾಸುಗಟ್ಟಲೆ ಕಾಯುವ ವ್ಯವಧಾನ ಜನರಿಗೆ ಇಲ್ಲ. ಇನ್ನೊಂದು ಅಂದಾಜಿನ ಪ್ರಕಾರ, ಬೆಂಗಳೂರಿನಲ್ಲಿ ಬೇರೆ ಊರಿನಿಂದ ಬಂದು ನೆಲೆಸಿರುವ ಜನರ ಸಂಖ್ಯೆ ಹೆಚ್ಚಾಗಿದೆ. ಕೆಲವರು ಎರಡೆರಡು ಕಡೆ ಮತ ಇಟ್ಟುಕೊಂಡಿರುವುದು ಗುಟ್ಟಿನ ವಿಷಯವೇನಲ್ಲ. ಅಂಥವರು ತಮ್ಮ ಊರಿಗೆ ಹೋಗಿ ಮತ ಹಾಕುವುದರಿಂದಲೂ, ಕಡಿಮೆ ಮತಚಲಾವಣೆಯ ಅಪಕೀರ್ತಿಯನ್ನು ಬೆಂಗಳೂರು ಹೊರಬೇಕಾಗುತ್ತದೆ. ಒಂದೇ ಕಡೆ ತಮ್ಮ ಮತ ಇಟ್ಟುಕೊಂಡರೆ ಇಂಥ ಅಪವಾದವನ್ನು ತಪ್ಪಿಸಬಹುದು. ಅದಲ್ಲದೇ, ಮತಪ್ರಮಾಣ ಕಡಿಮೆ ಎಂಬ ಅಗ್ಗಳಿಕೆ ಹೊತ್ತಿರುವುದು ಕೇವಲ ಬೆಂಗಳೂರಲ್ಲ.
ದೇಶದ ಇತರ ಮಹಾನಗರಗಳಲ್ಲಿಯೂ ಇದೇ ಪರಿಸ್ಥಿತಿ ಇದೆ. ಇದು ಕೇವಲ ಬೆಂಗಳೂರಿನ ಸಮಸ್ಯೆ ಅಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಈ ಎಲ್ಲ ಕಾರಣಗಳಿಂದಾಗಿ, ನಗರ ಪ್ರದೇಶಗಳಲ್ಲಿ ಮತ ಪ್ರಮಾಣ ಕಡಿಮೆಯಾಗಲು ಕಾರಣವೇನು ಎಂಬುದನ್ನು ವಿಶ್ಲೇಷಿಸಲು ಮತ್ತು ಹೆಚ್ಚಿಸುವುದಕ್ಕೆ ಯಾವ ಕ್ರಮಗಳನ್ನು ಕೈಗೊಳ್ಳಬೇಕೆಂಬುದನ್ನು ಸೂಚಿಸಲು ಕೇಂದ್ರ ಚುನಾವಣಾ ಆಯೋಗ ವೈಜ್ಞಾನಿಕ ಅಧ್ಯಯನವೊಂದನ್ನು ಕೈಗೊಳ್ಳಲು ಮುಂದಾಗಬೇಕು.