ಅಲ್ಪಸಂಖ್ಯಾತರಿಗೆ ಆದ್ಯತೆ ನೀಡಿ ಅನ್ನದಾತರ ನಿರ್ಲಕ್ಷ್ಯ ; ಆರ್.ಅಶೋಕ್ ಕಿಡಿ

r ashoka
Published on

ಬೆಂಗಳೂರು: ಅಲ್ಪಸಂಖ್ಯಾತರ ಕಾಲೊನಿಗಳ ಅಭಿವೃದ್ಧಿಗೆ ಒಂದು ಸಾವಿರ ಕೋಟಿ ರೂ.ಗಳನ್ನು ಸಿಎಂ ಸಿದ್ದರಾಮಯ್ಯ ೋಷಿಸಿ, ಅಲ್ಪಸಂಖ್ಯಾತರಿಗೆ ಕಾಣಿಕೆ ಮೇಲೆ ಕಾಣಿಕೆ ನೀಡುತ್ತಿದ್ದರೆ, ರೈತರಿಗೆ ನೇಣಿನ ಕುಣಿಕೆ ಕೊಟ್ಟಿದ್ದಾರೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ.

ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದ ಅವರು, ಮುಸ್ಲಿಮರ ಏಳಿಗೆಗೆ ಈಗಾಗಲೇ 10 ಸಾವಿರ ಕೋಟಿ ರೂ. ಮಂಜೂರು ಮಾಡುವುದಾಗಿ ಹೇಳಿದ್ದಾರೆ. ಇದೀಗ ಅಲ್ಪಸಂಖ್ಯಾತರು ವಾಸಿಸುವ ಬಡಾವಣೆಗಳ ಅಭಿವೃದ್ಧಿಗೆ ಮತ್ತೆ ಒಂದು ಸಾವಿರ ಕೋಟಿ ರೂ. ನೀಡುವುದಾಗಿ ತಿಳಿಸಿದ್ದಾರೆ.

ಆದರೆ ಬರಗಾಲದಿಂದ ಬೆಳೆ ನಷ್ಟ, ಸಾಲದ ಬಾಧೆ ತಾಳದೆ ಏಳು ತಿಂಗಳಲ್ಲಿ 500ಕ್ಕೂ ಹೆಚ್ಚು ಅನ್ನದಾತರ ಆತ್ಮಹತ್ಯೆಗೆ ಶರಣಾಗಿದ್ದು ಆ ಬಗ್ಗೆ ಕಿಂಚಿತ್ ಯೋಚನೆಯಿಲ್ಲ. ಅಲ್ಪಸಂಖ್ಯಾತರಂತೆ ಹಿಂದುಗಳು ವಾಸಿಸುವ ಕಾಲೊನಿಗಳನ್ನು ಅಭಿವೃದ್ಧಿ ಮಾಡಬಾರದೇಕೆ ? ಎಂದು ಕೇಳಿದರು.

ಸರ್ಕಾರಕ್ಕೆ ಯೋಗ್ಯತೆಯಿಲ್ಲ

ಬರದಿಂದ ನಷ್ಟವಾಗಿರುವ ಬೆಳೆಗಳಿಗೆ ಪರಿಹಾರ ನೀಡಿಲ್ಲ. ಬೆಳಗಾವಿ ಅಧಿವೇಶನದಲ್ಲಿ ಪ್ರತಿಪಕ್ಷಗಳು ಈ ವಿಷಯ ಪ್ರಸ್ತಾಪಿಸಿ, ಸರ್ಕಾರದ ಕಿವಿಹಿಂಡಬಹುದು ಸಿಎಂ ಸಿದ್ದರಾಮಯ್ಯ ಎಚ್ಚೆತ್ತರು. ಕೇಂದ್ರ ಸರ್ಕಾರದ ನೆರವಿಗೆ ಕಾಯದೆ ಮೊದಲ ಕಂತಾಗಿ ತಲಾ ಎರಡು ಸಾವಿರ ರೈತರ ಬ್ಯಾಂಕ್ ಖಾತೆಗೆ ಒಂದು ವಾರದೊಳಗೆ ಜಮಾ ಮಾಡಲಾಗುವುದು ಎಂದು ಪ್ರಕಟಿಸಿದರು.

ವಿಧಾನ ಮಂಡಲ ಅಧಿವೇಶನವೇ ಮುಗಿದು 15 ದಿನಗಳು ಕಳೆದಿವೆ. ಅಲ್ಪಸಂಖ್ಯಾತರಿಗೆ ಕೋಟ್ಯಂತರ ರೂ. ನೀಡಲು ಹಣವಿದೆ. ಆದರೆ ಕನಿಷ್ಠ ಎರಡು ಸಾವಿರ ರೂ. ರೈತರಿಗೆ ಪಾವತಿಸುವ ಯೋಗ್ಯತೆ ಸರ್ಕಾರಕ್ಕಿಲ್ಲ ಎಂದು ಆರ್.ಅಶೋಕ್ ಆಕ್ರೋಶ ಹೊರಹಾಕಿದರು.

ವಿಭಜನೆಗೆ ಹುನ್ನಾರ

ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಮುಸ್ಲಿಮರನ್ನು ಓಲೈಸಲು ಇನ್ನಿಲ್ಲದಂತೆ ಪ್ರಯತ್ನಿಸುತ್ತಿದೆ. ಈ ಹಿಂದೆ ಟಿಪ್ಪು ಸುಲ್ತಾನ ಹಿಂದು, ಮುಸ್ಲಿಮರನ್ನು ಬೇರೆ ಮಾಡಿದಂತೆ ಸಿಎಂ ಸಿದ್ದರಾಮಯ್ಯನವರು ಮುಸ್ಲಿಮರ ಕಾಲೊನಿ, ಹಿಂದುಗಳ ಪ್ರದೇಶವೆಂದು ವಿಭಜಿಸುವ ಹುನ್ನಾರ ಹೂಡಿ, ಸಂವಿಧಾನಕ್ಕೆ ಅಪಚಾರವೆಸಗಿದ್ದಾರೆ ಎಂಬ ಬೇಸರ ವ್ಯಕ್ತಪಡಿಸಿದರು.

ಮುಂದಿನ ಲೋಕಸಭೆ ಚುನಾವಣೆಗೆ ಮುಸ್ಲಿಮ್ ಮತಬ್ಯಾಂಕ್ ಗಟ್ಟಿಗೊಳಿಸಲು ತುಷ್ಟೀಕರಣ ಮಾಡುತ್ತಿದ್ದು, ಹಿಂದುಗಳನ್ನು ಎರಡನೇ ದರ್ಜೆ ಪ್ರಜೆಯಂತೆ ಕಾಣುತ್ತಿದ್ದಾರೆ. ತುಘಲಕ್ ದರ್ಬಾರ್ ನಡೆಸಿ, ಟಿಪ್ಪು ಸಂಸ್ಕೃತಿಯನ್ನು ಹೇರುವ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಕಳೆದ ಏಳು ತಿಂಗಳಲ್ಲಿ ಅಭಿವೃದ್ಧಿ ಕೆಲಸಗಳಿಗೆ ಒಂದೂ ಅಡಿಗಲ್ಲು ಹಾಕಿಲ್ಲವೆಂದು ಕಾಂಗ್ರೆಸ್ ಶಾಸಕರೇ ಅಸಮಾಧಾನ ಹೊರಹಾಕಿದ್ದಾರೆ. ಕಾಂಗ್ರೆಸ್ ಸರ್ಕಾರ ಅಭಿವೃದ್ಧಿಗೆ ಅಡಿಗಲ್ಲು ಹಾಕಿಲ್ಲ, ರೈತರ ತಲೆಯ ಮೇಲೆ ಕಲ್ಲುಹಾಕಿದೆ ಎಂದು ಕಿಡಿಕಾರಿದರು.

ಚೆಕ್‌ಬೌನ್ಸ್ ಆಗಿದೆ ಎಂದರೆ ಮೋಸವೆಂದೇ ಅರ್ಥ. ಈ ಪ್ರಕರಣದಲ್ಲಿ ಶಿಕ್ಷಣ ಸಚಿವರಿಗೆ ಕೋರ್ಟ್ ದಂಡ ವಿಧಿಸಿ ತೀರ್ಪು ನೀಡಿದೆ. ಸಿಎಂ ಸಿದ್ದರಾಮಯ್ಯ ಸಮರ್ಥಿಸಿಕೊಳ್ಳುವ ಬದಲಿಗೆ ಶಿಕ್ಷಣ ಸಚಿವರ ರಾಜೀನಾಮೆ ಪಡೆಯಬೇಕು ಎಂದು ಆರ್.ಅಶೋಕ್ ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net